ಆಕೆ ನನ್ನ
ಜೊತೆ ಹುಟ್ಟಿದವಳಲ್ಲ.. ನನ್ನ ರಕ್ತ ಸಂಬಂಧಿಯೂ ಅಲ್ಲ.. ಆದರೆ ಆಕೆಯೆಂದರೆ ನನ್ನ ಹೃದಯದಲ್ಲಿದೆ ಪ್ರೀತಿಯ
ಜಾಗ. ಆಕೆಯ ಮಾತುಗಳೆಂದರೆ ನನಗೇನೋ ವಿಶೇಷ ಸ್ಪೂರ್ತಿ ಅದೇಕೋ ಗೊತ್ತಿಲ್ಲ ಸಾಮಾಜಿಕ ಜಾಲತಾಣದ ಮೂಲಕ
ಪರಿಚಿತವಾದ ಒಬ್ಬಾಕೆ ನನ್ನ ಜೀವನದ ಮೇಲೆ ಇಷ್ಟೋದು ಪ್ರಭಾವ ಬೀರುತ್ತಾಳೇ ಎಂದು ಸ್ವತಃ ನಾನೇ ಯೋಚಿಸಿರಲಿಲ್ಲವೇನೋ…
ಅಷ್ಟಕ್ಕೂ ಆಕೆ ಯಾರು, ಆಕೆಯೆಂದರೆ ನನಗೇಕೆ ಪ್ರೀತಿ ಎಲ್ಲವನ್ನೂ ತಿಳೀಯುವ ಕುತೂಹಲ ನಿಮಗಿದ್ರೆ ಈ
ಪ್ರೀತಿಯ ಕಥೆಯನ್ನು ನೀವು ಓದಲೇ ಬೇಕು.
ಎಂದಿನಂತೆ ಅಂದು ನಾನು ನನ್ನ ಇನ್ಸ್ಟಾಗ್ರಾಂ
ಖಾತೆಯಲ್ಲಿ ಸ್ಕ್ರಾಲ್ ಮಾಡುತ್ತಲಿದ್ದೆ, ಬಹಳ ದಿನಗಳಿಂದ ಕಾಡುತ್ತಿದ್ದ ಹೆಸರೊಂದು ಇಂದೂ ನನ್ನ ಕಣ್ಣಿಗೆ
ಬಿದ್ದೇ ಬಿಡ್ತು ನೋಡಿ. ಆಗಿದ್ದಾಗಲಿ ಆಕೆಯ ಪೂರ್ವಾಪರ ವಿಚಾರಿಸಿಯೇ ಬಿಡೋಣ ಎಂದು ನಾನು ಆಕೆಯ ಗೆಳೆತನ
ಬಯಸಲು ಆಕೆಗೆ ರಿಕ್ವೆಷ್ಟ್ ಕಳುಹಿಸಿಯೇ ಬಿಟ್ಟೆ… ಒಂದೈದು ನಿಮಿಷದೊಳಗೆ ನನ್ನ ಸಂಚಾರಿವಾಣಿಯ ಡಿಸ್ಪ್ಲೆ
ನಲ್ಲಿ ಆಕೆ ನನ್ನ ರಿಕ್ವೆಸ್ಟ್ ಸ್ವೀಕರಿಸಿದ್ದರ ಬಗ್ಗೆ ನೋಟಿಫಿಕೇಷನ್ ಬಂದಾಗಿತ್ತು. ಖುಷಿಯಿದಲೇ
ಆಕೆಗೊಂದು ಹಾಯ್ ಮಾಡಿಯೇ ಬಿಟ್ಟಿದ್ದೆ. ಕೊಂಚ ಸಮಯದ ಬಳಿಕ ಆಕೆಯಿಂದ ರಿಪ್ಲೈ ಬಂದಿತ್ತು ನೋಡಿ.. ಸ್ವರ್ಗಕ್ಕೆ
ಮೂರೇ ಗೇಣು ಎಂಬಂತೆ ಮೆಸೇಜ್ ಮೇಲೆ ಮೆಸೇಜ್ ಕಳುಹಿಸುತ್ತಲಿದ್ದೆ.
ಹೀಗೆ ಪ್ರಾರಂಭವಾಯಿತು ನೋಡಿ ನಮ್ಮಿಬ್ಬರ ಸ್ನೇಹ… ಆಕೆಯಿರುವುದೂ
ನಾನಿರುವುದೂ ಒಂದೇ ಊರಿನಲ್ಲಿ ಎಂದು ತಿಳಿಯುವುದೇ ತಡ ನನ್ನ ಖುಷಿ ದುಪ್ಪಟ್ಟಾಗಿತ್ತು, ಈ ನಡುವೆ ಆತ್ಮೀಯತೆ
ಹೆಚ್ಚಾದಂತೆ ರಾಜಕೀಯ, ವಿದ್ಯಾರ್ಥಿ ಜೀವನ, ಕೆಲಸ ಇವೆಲ್ಲದರ ಕುರಿತಾಗಿ ಮಾತುಕಥೆ ನಡೆಯುತ್ತಲೇ ಇತ್ತು
ಆದರೆ ಇನ್ಸ್ಟಾಗ್ರಾಂನಲ್ಲಿ ಅಲ್ಲ ಬದಲಾಗಿ ಫೋನ್ ನಂಬರ್ ವಿನಿಮಯವಾಗಿ ನಮ್ಮ ಮಾತುಕತೆ ಸಾಗಿತ್ತು…..
ಆಕೆಯ ಬಗ್ಗೆ ಹೇಳಲು ಬಹಳಷ್ಟಿದೆ.. ಚೋಟುದ್ದ ಇರುವ ಆಕೆಯ
ಮೊಗದಲ್ಲಿ ಮಂದಹಾಸ ಎಂದೂ ಮಾಸಿದ್ದನ್ನು ನಾನು ಕಂಡಿಲ್ಲ... ಆಕೆಯೆಂದರೆ ನನಗೇನೋ ಸ್ಫೂರ್ತಿ.. ಆಕೆಯ ಮಾತುಗಳೇ ನೊಂದ
ಮನಸ್ಸಿಗೆ ನೆಮ್ಮದಿ ನೀಡುವ ಸ್ಥಾನ. ಇಷ್ಟಿದ್ದರೂ
ಸುಮಾರು 6 ತಿಂಗಳುಗಳ ಕಾಲ ನಾವು ಮೀಟ್ ಆಗಿಯೇ ಇಲ್ಲ..
ಒಂದು ದಿನ
ನಾನು ಮಂಗಳೂರಿನಲ್ಲಿದೆ, ಆಕೆಯೂ ಕಾರ್ಯನಿಮಿತ್ತ ಮಂಗಳೂರಿಗೆ ಆಗಮಿಸಿದ್ದಳು. ಇನ್ನು ಭೇಟಿಯಾಗದಿದ್ದರೆ ಹೇಗೆ ಎಂದು ಆಕೆಯನ್ನು
ಪ್ರಶ್ನಿಸಿಯೇ ಬಿಟ್ಟೆ, ಅಂತೂ ಇಂತೂ ಮಂಗಳೂರಿನ ಸಿಟಿ ಸೆಂಟರ್ನ ಮುಂಭಾಗದಲ್ಲಿ ಭೇಟಿಯಾಗಿ ಒಂದು ಫೋಟೋ
ಕ್ಲಿಕ್ಕಿಸಿಕೊಂಡು ಸಮಾಧಾನಪಟ್ಟಿದ್ದಾಯ್ತು..
ಮತ್ತೆ ಕಾರ್ಯನಿಮಿತ್ತ ಬೆಂಗಳೂರು ಬಂದರೂ ಕೆಲಸದ ಒತ್ತಡದಿಂದ
ಆಕೆಯನ್ನು ಭೇಟಿಯಾಗಲು ಆಗಿರಲಿಲ್ಲ.. ಆದ್ರೆ ನನ್ನ ಕೆಲಸಕ್ಕೆ ರಾಜಿನಾಮೆಯಿತ್ತು, ಊರಿಗೆ ಹೋಗುವ ಮುನ್ನ ಆಕೆಯನ್ನು ಭೇಟಿಯಾಗುವ
ಮನಸ್ಸಾಗಿತ್ತು. ಅದೃಷ್ಟವಶಾತ್ ಆಕೆ ಮನೆಯಲ್ಲಿದ್ದಳು , ಆಕೆಯ ಮನೆಗೆ ಹೋಗಿದ್ದೆ. ಮಾತನಾಡುತ್ತಾ ಸಮಯ ಕಳೆದ್ದದ್ದೇ ತಿಳಿಯಲಿಲ್ಲ. ಆಕೆಯ ತಂದೆ
, ತಾಯಿ ಇತ್ತ ಪ್ರೀತಿ , ಆಕೆಯ ಮುಗ್ದ ಮನಸ್ಸಿನ ಮುಕ್ತ ಮಾತು, ಇವೆಲ್ಲವನ್ನು ನೋಡುತ್ತಾ ನನ್ನದೇ
ಸ್ವಂತ ಕುಟುಂಬದ ಮಧ್ಯೆ ಇದ್ದೆನೋ ಎಂಬಂತೆ ಭಾಸವಾಗಿತ್ತು. ಆಕೆಯ ತಂದೆ- ತಾಯಿಯ ಪ್ರೀತಿ, ಆಕೆ ನನಗಿತ್ತ
ಅಭಯ ಇವೆಲ್ಲವನ್ನೂ ನೋಡಿ ವಾಪಾಸ್ ಬರುವಾಗ ನನ್ನ ಕಣ್ಣಾಲಿಗಳು ತೇವವಾಗಿದ್ದವು..
ಯಾವಾಗ್ಲೋ
ನಡೆದ ವಿಷಯಕ್ಕೆ ಇಂದೇಕೆ ಬರೆಯುತ್ತಿದ್ದೇನೆ ಎಂದು ಯೋಚಿಸದಿರಿ, ಕಾರಣವಿದೆ. ನನ್ನ ಮನಸ್ಸು ವಿಹ್ವಲವಾಗಿದ್ದಾಗ,
ಆಕೆ ಎಂದಿಗೂ ನನ್ನೊಂದಿಗಿದ್ದಳು. ಇಂದು ನನ್ನನ್ನು ಬೇಟಿಯಾಗಲು ಬಂದಾಗಲೂ ಆಕೆಯ ಮನೆಯ ಪ್ರೀತಿಯ ಸ್ವಾದದ
ಚಪಾತಿಯನ್ನೂ ತಂದಿದ್ದಳು… ಜೀವನದ ಪಯಣದಲ್ಲಿ ಆಕೆ ಎಷ್ಟರ ವರೆಗೆ ನನ್ನೊಂದಿಗಿರುತ್ತಾಳೋ ತಿಳಿಯದು
ಆದರೆ ಆಕೆ ಇರುವಷ್ಟು ಕಾಲ ನಾನು ಖುಷಿಯಿಂದಿರುವೆ ಎಂಬ ನಂಬಿಕೆ ನನಗಿದೆ. ನಮ್ಮಿಬ್ಬರ ಸೋದರತೆಯ ಬಂಧನ
ಹೀಗೆ ಇರಬೇಕೆನ್ನುವ ಆಶಯ ನನ್ನದು.. ಹೇಗೆ ಇದ್ದರೂ ನೀ ನನ್ನೊಡನೆ ಇರುವೆಯೆಂಬ ನಂಬಿಕೆ ನನ್ನದು..
ಓಹ್ ಇಷ್ಟರ
ಮಧ್ಯೆ ಆಕೆ ಯಾರೆಂದು ನಾನು ಹೇಳಿಯೇ ಇಲ್ಲವಲ್ಲ…
ಆಕೆ ಬೇರಾರೂ
ಅಲ್ಲ … ನನಗಾಗೇ ದೇವರು ಕೊಟ್ಟ ತಂಗಿ “ವಿದ್ಯಾ”







