ಹೌದು ಹಲವಾರು ದಿನಗಳಿಂದ ಗೆದ್ದಲು ಹಿಡಿದಿದ್ದ ನನ್ನ ಬ್ಲಾಗ್‍ನಲ್ಲಿ ಏನಾದರೂ ಬರೆಯಲೇ ಬೇಕು ಮತ್ತದೇ ಬ್ಲಾಗಿನ ಬಾಗಿಲು ತೆರೆಯಬೇಕೆನಿಸಿತ್ತು ಆದರೆ ಏನು ಬರೆಯಲಿ ಹೇಗೆ ಬರೆಯಲಿ ಎನ್ನುವುದೇ ಚಿಂತೆಯಾಗಿತ್ತು.. ಬರೆಯುವುದೇನೋ ಸರಿ ಆದರೆ ಬರೆಯಲೊಂದು ವಿಷಯ ಬೇಕಿತ್ತಲ್ಲ.. ಗೀಚಬೇಕೆಂಬ ಹಂಬಲ ಒಂದೆಡೆಯಾದರೆ ಗೀಚಲು ವಿಷಯಗಳಿಲ್ಲ ಎನ್ನುವ ಆ ಆಲಸ್ಯದ ಮನಸ್ಸು ಮತ್ತೊಂದೆಡೆ.. ಇವೆಲ್ಲವನ್ನೂ ಸಂಭಾಳಿಸಲು ಉತ್ತಮ ಘಳಿಗೆಯೊಂದರ ಹುಡುಕಾಟದಲ್ಲಿದ್ದಾಗ ಫಿನಿಕ್ಸ್‍ನಂತೆ ನನ್ನ ಮನಸ್ಸಿಗೆ ತೋಚಿದ್ದು ಒಂದೇ ವಿಚಾರ ನಮ್ಮ ಮನೆಯ ಗೃಹಪ್ರವೇಶದ ವಿಚಾರ.. ಗೃಹ ಪ್ರವೇಶದ ವಿಚಾರ ಎನ್ನುವುದಕ್ಕಿಂತ ಸಂಬಂಧಗಳೇ ಹಳಸಿ ನಮ್ಮವರೇ ನಮಗೆ ವೈರಿಗಳಾಗುತ್ತಿರುವ ಸಂದರ್ಭದಲ್ಲಿ ಕೂಡಿ ಬಾಳಿದರೆ ಸ್ವರ್ಗಸುಖ ಎನ್ನುವ ನೀತಿಪಾಠ ಕಲಿಸಿದ ನಮ್ಮ ಕುಟುಂಬ.
ಅಯ್ಯೋ ಒಂದು ಲೇಖನ ಬರೆಯಲು ಯಾಕಪ್ಪಾ ಇಷ್ಟೋಂದು ಪೀಠಿಕೆ ಹಾಕುತ್ತಿದ್ದಾನಲ್ಲಾ ಎಂದು ಯೋಚಿಸುತ್ತಿದ್ದೀರಾ?? ಹಾಗಾದ್ರೆ ಯೋಚನೆ ಮಾಡೇ ಮಾಡಿ.. ಇನ್ನೂ ಆ ವಿಚಾರ ನಿಮ್ಮ ಮನದೊಳಗೆ ಬಂದಿಲ್ಲವಾದರೆ ಒಮ್ಮೆ ಯೋಚಿಸಿ.
ಹೌದು ನಾ ಹೇಳಹೊರಟಿರುವುದು ಒಬ್ಬ ಅಪೂರ್ವ ವ್ಯಕ್ತಿಯೊಬ್ಬರ ಬಗ್ಗೆ. ಒಬ್ಬ ಪ್ರೀತಿಯ ವ್ಯಕ್ತಿಯೊಬ್ಬರ ಬಗ್ಗೆ. ನಾ ಈ ವರೆಗೆ ಅವರನ್ನು ನೋಡಿದ್ದು ಮಾತನಾಡಿಸಿದ್ದು ಅಲ್ಪಸ್ವಲ್ಪವಾದರೂ ಅವರ ಪ್ರೀತಿದುಂಬಿದ ಮಾತುಗಳು ನಿಷ್ಕಳಂಕದ ಮನಸ್ಸಿನಾಳವನ್ನು ನೋಡಿದ್ದು ಗೃಹಪ್ರವೇಶದ ಸುಸಂದರ್ಭದಲ್ಲಿ. ಅವರ ಕಾರ್ಯದ ಬಗ್ಗೆ ತಿಳಿಸಹೋದರೆ ಅಕ್ಷರಗಳೂ ಕೂಡಾ ತಮ್ಮನ್ನು ತಾವು ಪ್ರೀತಿಸಬಹುದೇನೋ. ಅಂತಹಾ ವ್ಯಕ್ತಿತ್ವ ಅವರದ್ದು. ಹಿಂದೂ ಸಂಪ್ರದಾಯದಲ್ಲಿ ಒಂದು ಗೃಹಪ್ರವೇಶದ ಸಂಧರ್ಭವೆಂದರೆ ಹಲವಾರು ಆಚಾರ ವಿಚಾರಗಳು , ಪೂಜೆ ಪುನಸ್ಕಾರಗಳು ಸರ್ವೇ ಸಾಮಾನ್ಯ. ಗೃಹಪ್ರವೇಶದ ಮುನ್ನದಿನದ ವಾಸ್ತುಪೂಜೆಯಿಂದ ಹಿಡಿದು ಗೃಹಪ್ರವೇಶದ ದಿನದ ಮಧ್ಯಾಹ್ನದ ಊಟದವರೆಗೂ ಹಲವಾರು ಕಾರ್ಯಗಳು ಇದ್ದೇ ಇರುತ್ತದೆ. ಈ ಎಲ್ಲಾ ಕಾರ್ಯಗಳಲ್ಲೂ ಮನೆಯವರೆಲ್ಲರೂ ಕೂಡಿ ಕೆಲಸ ಮಾಡುವುದು ಸರ್ವೇ ಸಾಮಾನವಲ್ಲವೇ ಅದರಲ್ಲೇನು ವಿಶೇಷ ಎಂದು ನೀವು ಕೇಳಬಹುದು ಆದರೆ ವಿಶೇಷ ಪೂಜೆ ಪುನಸ್ಕಾರಗಳಲ್ಲಲ್ಲ ಬದಲಾಗಿ ಆ ಕಾರ್ಯಕ್ರಮದಲ್ಲಿ ನನಗೆ ಸ್ಫೂರ್ತಿಯಾದ ವ್ಯಕ್ತಿಯೊಬ್ಬರು.
ಹೆಸರು ಮಮತಾ. ವೃತ್ತಿಯಲ್ಲಿ ಶಾಲಾ ಶಿಕ್ಷಕಿ, ಮೃದುವಾದ ಮನಸ್ಸು ಅಷ್ಟೇ ಏಕೆ ಆಕೆ ಛಲಗಾತಿ ಎಂದರೆ ಖಂಡಿತಾ ತಪ್ಪಾಗಲಾರದು. ತನ್ನ ಜೀವನದಲ್ಲಿ ಎದುರಾದ ಏಳುಬೀಳುಗಳನ್ನೆಲ್ಲಾ ಸಮವಾಗಿ ಸ್ವೀಕರಿಸಿ, ಅದನ್ನು ಸವಾಲೆಂಬಂತೆ ಗೆದ್ದುಬಂದಾಕೆ. ಪುರಾಣದಲ್ಲಿ ಕೇಳುವ ನಂದಗೋಕುಲವನ್ನು ನಾನು ಕೇಳಿದ್ದೇನಷ್ಟೇ ಆದರೆ ನಿಜವಾದ ನಂದಗೋಕುಲವನ್ನು ನಾನವರಲ್ಲಿ ಕಂಡಿದ್ದೇನೆ. ಪ್ರೀತಿಗೆ ಪ್ರೀತಿ ನೀಡುತ್ತಾ ಬಂದಿರುವ ಆಕೆ ನಿಜವಾಗಿಯೂ ದೇವತೆಯೇ ಸರಿ. ಇರಲಿ ಇದೀಗ ನೈಜ ವಿಷಯಕ್ಕೆ ಬರೋಣ.
ಅಂದು ಗೃಹಪ್ರವೇಶದ ಕಾರ್ಯನಿಮಿತ್ತ ಮನೆಯೆಲ್ಲಾ ಸಿಂಗಾರಗೊಂಡಿತ್ತು, ಮನೆಮಂದಿಯೆಲ್ಲಾ ಖುಷಿಯಿಂದ ಮಿಂದೆದ್ದಂತೆ ಭಾಸವಾಗುತ್ತಿದ್ದರು, ಹತ್ತಾರು ದಿನಗಳಿಂದ ಮನೆಕೆಲಸದ ವಿಚಾರದಲ್ಲಿ ಬೆಂದು ಬೇಗುದಿಯಾಗಿದ್ದ ಮನೆಮಂದಿಯೆಲ್ಲಾ ಈ ಕಾರ್ಯ ಒಮ್ಮೆ ಮುಗಿದರೆ ಸಾಕೆಂಬ ಮನಸ್ಥಿತಿಯಲ್ಲಿದ್ದರೇನೋ, ಇದೇ ಸಂದರ್ಭದಲ್ಲಿ ನನ್ನನ್ನು ಆಕರ್ಷಿಸಿದ್ದು ಮಮತೆಯ ಅಕ್ಕ ಮಮತ ಅಕ್ಕ. ನೂರಾರು ಜನರು ಮನೆಯೊಳಗೆ ಓಡಾಡಿ ಮನೆಯೆಲ್ಲಾ ಕೊಂಪೆಯಂಆಗಿದ್ದುದ್ದನ್ನು ನಾನು ಕಂಡಿದ್ದೆ. ಆದ್ರೆ ಈ ಅಕ್ಕನ ಕೆಲಸಗಳಿಂದ ಮನೆಯೆಲ್ಲಾ ಕ್ಷಣಮಾತ್ರದಲ್ಲಿ ಒಪ್ಪ ಓರಣವಾಗಿದ್ದು ಮಾತ್ರ ಸುಳ್ಳಲ್ಲ.. ಅಡುಗೆ ಕೋಣೆಯಿಂದ ಪ್ರಾರಂಭವಾದ ಆಕೆಯ ಓರಣದ ಕಾರ್ಯ ಮನೆ ಸಂಪೂರ್ಣವಾಗಿ ಸ್ವಚ್ಛಗೊಳ್ಳುವ ವರೆಗೂ ನಿಂತಿರಲಿಲ್ಲ. ಆಕೆಯೊಂದಿಗೆ ಕೈಜೋಡಿಸುತ್ತಾ ಕೆಲಸ ಮಾಡುತ್ತಿದ್ದ ನನಗೆ ಮಧ್ಯೆ ಎಲ್ಲೋ ಒಂದು ಕಡೆ ಆಲಸ್ಯ ಉಂಟಾದರೂ ಆಕೆಯ ಮುಖದಲ್ಲಿ ಆಲಸ್ಯದ ಭಾವನೆಯಾಗಲೀ, ಬೇಸರದ ಲವಲೇಶವೂ ಕಂಡುಬಾರದ್ದು ನನಗೆ ಅತ್ಯಾಶ್ಚರ್ಯ ಉಂಟು ಮಾಡಿದ್ದಂತೂ ಸುಳ್ಳಲ್ಲ. ಇದು ಬೆಳಗಿನ ಮಾತಾಯಿತು, ಸ್ವಚ್ಛತಾ ಕಾರ್ಯ ಅದು ಇದು ಎಂದು ಓಡಾಡುತ್ತಿದ್ದ ಮಮತಕ್ಕನ ಎನರ್ಜಿ ಮಧ್ಯಾಹ್ನವಾದರೂ ಕಮ್ಮಿಯಾಗಿಲ್ಲ ಅಂತೀನಿ. ಉಹ್... ಬೆಳಗಿನ ಒಮ್ಮೆಯ ಕಾರ್ಯಗಳನ್ನೆಲ್ಲಾ ಮುಗಿಸಿ ಒಂದೆರಡು ನಿಮಿಷ ಕುಳಿತಿದ್ದಾರೋ ಗೊತ್ತಿಲ್ಲಾ. ಮಧ್ಯಾಹ್ನದ ಸತ್ಯನಾರಾಯಣ ಪೂಜೆಯ ಪ್ರಸಾದ ವಿತರಣೆಯ ಸಂದರ್ಭದಲ್ಲಿ ಅರ್ಚಕರ ಬಳಿಯಲ್ಲಿ ಅರ್ಚಕರ ಸಹಾಯಕ್ಕೆ ಮಮತಕ್ಕ ಹಾಜರ್... ಅಯ್ಯೋ ಶಿವನೇ ಈ ಮಹಾತಾಯಿಗೆ ಸುಸ್ತೆಂಬುದು ಇಲ್ಲವೇ ಎಂದು ನಾನು ನನ್ನಲ್ಲೇ ಅಂದುಕೊಂಡು ಸುಮ್ಮನಾದೆ. ಎಲ್ಲಾ ಕಾರ್ಯಗಳು ಮುಗಿದ ಮೇಲೆ ಮಧ್ಯಾಹ್ನದ ಭೋಜನ ಸವಿದ ನಾನು ಇನ್ನೇನು ಸ್ವಲ್ಪ ಸುಧಾರಿಸಿಕೊಳ್ಳೋಣ ಎಂದು ಚಿಂತಿಸುತ್ತಾ ಅಡುಗೆ ಕೋಣೆಯತ್ತ ಕಣ್ಣು ಹಾಯಿಸಿದರೆ ಮಮತಕ್ಕ ಮತ್ತೆ ಅಡುಗೆ ಕೋಣೆಯಲ್ಲಿ ಕೆಲಸಕ್ಕೆ ಹಾಜರ್. ಪಾತ್ರೆಗಳನ್ನೆಲ್ಲ ಒಪ್ಪ ಓರಣವಾಗಿರಿಸಿ, ಪ್ರಸಾದಗಳನ್ನೆಲ್ಲಾ ಪ್ಯಾಕ್ ಮಾಡಿ ಎಲ್ಲರಿಗೂ ವಿತರಿಸುವ ಕೆಲಸದಲ್ಲಿ ಮಮತಕ್ಕ ಬ್ಯುಸಿ. ಆಮೇಲೆ ಒಂದೆರಡು ಗಂಟೆಗಳ ಕಾಲ ತಮ್ಮ ಮನೆಗೆ ಹೋಗಿ ಅಲ್ಲಿಯ ಕೆಲಸವನ್ನೂ ಮುಗಿಸಿ ರಾತ್ರಿಯ ವೇಳೆಯಲ್ಲಿ ಮಮತಕ್ಕ ಮತ್ತೆ ಹಾಜರ್. ಅಡುಗೆ ಕೋಣೆಯಲ್ಲಿ ಅವರದ್ದೇ ದರ್ಬಾರ್.. ಮಮತ ಇರುವಾಗ ನನಗೇನು ಯೋಚನೆ ಎಂಬಂತೆ ಅತ್ತೆ ಬೇರೆ ಕೆಲಸಗಳಲ್ಲಿ ಬ್ಯುಸಿಯಾದಂತೆ ತೋರಿತು. ಮತ್ತೊಂದು ರೌಂಡ್ ಕ್ಲೀನಿಂಗ್ ಎಂಬಂತೆ ರಾತ್ರಿಯ ಕ್ಲೀನಿಂಗ್ ಕಾರ್ಯಗಳನ್ನೆಲ್ಲ ಮುಗಿಸಿ, ಅಳಿದುಳಿದ ಪದಾರ್ಥಗಳನ್ನೆಲ್ಲಾ ಹಾಳಾಗದಂತೆ ಬಿಸಿ ಮಾಡಿಟ್ಟ ಬಳಿಕ ಮಮತಕ್ಕ ತನ್ನ ಕೆಲಸಗಳಿಗೆ ವಿರಾಮ ಹೇಳಿದಾಗ ಸಮಯ ರಾತ್ರಿ 09:30ಆಗಿರಬಹುದೇನೋ..
ಇಷ್ಟೇಲ್ಲಾ ಕೆಲಸ ಎಲ್ರೂ ಮಾಡ್ತಾರೆ ಇದರಲ್ಲೇನು ವಿಶೇಷ ಅಂದುಕೊಳ್ಳದಿರಿ, ವಿಶೇಷ ಇರುವುದೇ ಇಲ್ಲಿ.. ಇಷ್ಟು ಕೆಲಸ ಮಾಡಿದ ಮೇಲೂ ಮಮತಕ್ಕನ ಮುಖದಲ್ಲಿ ಸುಸ್ತು ಎಂಬಂತ ವಿಚಾರವನ್ನು ನಾನು ಕಂಡದ್ದಿಲ್ಲ.. ಅದಕ್ಕೆ ಇರಬೆಕು ಹಿರಿಯರು ಹೇಳಿದ್ದು “ ಹೆಣ್ಣು ಸಂಸಾರದ ಕಣ್ಣು “ ಎಂದು.. ಅಂದೇ ನಿಶ್ಚಯ ಮಾಡಿಕೊಂಡದ್ದು ಕೆಲಸ ಮಾಡಿದರೆ ಮಮತಕ್ಕನಂತೆ ಮಾಡಬೇಕು, ನಗುಮೊಗವಿದ್ದರೆ ಮಮತಕ್ಕನಂತಿರಬೇಕು. ಎಂದು..
ಇವತ್ತಿಗೆ ಇಷ್ಟು ಸಾಕು ನಾಳೆ ಇನ್ನೊಬ್ಬ ವ್ಯಕ್ತಿಯ ಚಿತ್ರಣ ಬರೆಯೋಣವೆಂದಿದ್ದೇನೆ. ಇಷ್ಟವಾದರೆ ಬರೆಯಲು ಪ್ರೋತ್ಸಾಹಿಸಿ ಇಲ್ಲವಾಗಿದ್ದರೆ ಛೀ ಥೂ ಎಂದಾದರೂ ಉಗಿಯಿರಿ.. ಆಯ್ಕೆ ನಿಮ್ಮದು.. ಧನ್ಯವಾದ..

No comments:
Post a Comment