Thursday, 27 June 2019

ಭಜನಾಮೃತ

ಹಿಂದೊಂದು ಕಾಲವಿತ್ತು , ಅದು ಹೇಗೆ ಗೊತ್ತೆ , ಪ್ರಾತಃಕಾಲದಲ್ಲಿ ಸೂರ್ಯ ಉದಯಿಸುವುದಕ್ಕೂ ಮುನ್ನ ಎದ್ದ ಮನೆಯ ಹೆಂಗಳೆಯರೆಲ್ಲಾ ಸ್ನಾನಾದಿ ಕಾರ್ಯಗಳನ್ನೆಲ್ಲಾ ಮುಗಿಸಿ , ಮುಂಬಾಗಿಲ ನೆಲವನ್ನು ಸ್ವಾಸ್ಥ್ಯಗೊಳಿಸಿ, ರಂಗೋಲಿ ಹಾಕಿ ದೇವಗೃಹದಲ್ಲಿ ದೇವರ ಸೇವೆಗೈದು ಪ್ರತಿದಿನ ಪ್ರಾರಂಭಿಸುತ್ತಿದ್ದರು ಮನೆಯ ಪುರುಷರೆಲ್ಲಾ ಎದ್ದು ಪ್ರತಿದಿನ ಮನೆಯ ಕಾರ್ಯಗಳನ್ನೆಲ್ಲಾ ತಕ್ಕ ಮಟ್ಟಿಗೆ ಮುಗಿಸಿ, ಸ್ನಾನಾದಿಗಳನ್ನು ಮುಗಿಸಿ ದೇವತಾ ಕಾರ್ಯಕ್ಕೆ ಅಣಿಯಾಗುತ್ತಿದ್ದರು ಆಗ ಇಂದಿನಂತೆ ಮೊಬೈಲುಗಳೇನು ಇರುತ್ತಿರಲಿಲ್ಲ ಬೆಳಗ್ಗೆ ದೇವರನ್ನು ನೆನೆದ ಬಳಿಕವಷ್ಟೇ ದೈನಂದಿನ ಕಾರ್ಯಗಳು ಪ್ರಾರಂಭವಾಗುತ್ತಿದ್ದವು, ಕೂಡುಕುಟುಂಬಗಳಲ್ಲಿ ಇದ್ದಂತಹಾ ಹಿರಿಯ ಜೀವಗಳು ತನ್ನ ಮಕ್ಕಳಿಗೆ ತಿಳಿಸಿ ಕೊಟ್ಟಂತಹಾ ಸತ್ಕಾರ್ಯಗಳನ್ನು ತನ್ನ ಮೊಮ್ಮಕ್ಕಳಿಗೂ ತಿಳಿಸಿಕೊಡುತ್ತಿದ್ದರು , ಬೆಳಗ್ಗೆ ಎದ್ದ ಹಿರಿಯ ಜೀವಗಳು ಮನೆಯ ಮಕ್ಕಳೆಲ್ಲರಿಗೂ ಉತ್ತಮ ರೀತಿಯಲ್ಲಿ ಸತ್ಕಾರ್ಯಗಳನ್ನು ತಿಳಿಸುತ್ತಿದ್ದರು. ವಿಷ್ಣು ಸಹಸ್ರನಾಮ , ಲಲಿತಾ ಸಹಸ್ರನಾಮಗಳಂತಹಾ ದೇವತಾ ಸಹಸ್ರನಾಮಗಳು ಬಾಯಿಪಾಠವಾಗಿ ಬಿಟ್ಟಿರುತ್ತಿತ್ತು.

ಕಾಲ ಕಳೆಯಿತು ಕೂಡು ಕುಟುಂಬಗಳು ಒಡೆದ ಕುಟುಂಬಗಳಾದವು, ನಾವೆಲ್ಲರೂ ಸೂರ್ಯವಂಶಸ್ತರಾಗಿಬಿಟ್ಟೆವು ಅರ್ಥಾತ್ ಸೂರ್ಯ ಉದಯದ ಬಳಿಕ ನಮ್ಮ ದಿನ ಪ್ರಾರಂಭವಾಗತೊಡಗಿತು, ಮನೆಯಲ್ಲಿ ಗಂಟೆಯ ಸದ್ದಿಲ್ಲ ಏನೂ ಇಲ್ಲ.. ಹಿರಿಯ ಜೀವಗಳಿಗೆ ಬೆಲೆಯೂ ಇಲ್ಲದಂತಾಯಿತು.  ದಿನನಿತ್ಯ ಮನೆಮಂದಿಯೆಲ್ಲಾ ಕೂಡಿ ಮಾಡುತ್ತಿದ್ದ ಭಜನೆಗಳು ಶುಕ್ರವಾರಕ್ಕೆ ಸೀಮಿತವಾಯಿತು. ಆದರೆ ಒಂದತೂ ಸತ್ಯ ಈಗ ಕೆಲ ಬುದ್ಧಿಜೀವಿಗಳಿದ್ದಾರೆ ಕೇಳುತ್ತಾರೆ, ನಾವ್ಯಾಕೆ ಭಜನೆ ಮಾಡಬೇಕು?? ಭಜನೆ ಮಾಡುವುದರಿಂದ ಏನು ಪ್ರಯೋಜನ ಎಂದು ಆದರೆ ಪ್ರಯೋಜನ ಖಂಡಿತಾ ಇದೆ, ವೈಜ್ಞಾನಿಕವಾಗಿ ಭಜನೆಯ ಮಹತ್ವವನ್ನು ಉಲ್ಲೇಖಿಸಹೊರಟರೆ ಅದಕ್ಕೆ ಒಂದು ನೂರು ಪುಟಗಳು ಸಾಲಬಹುದೇನೋ...
ಭಜನೆಯ ಸಂದರ್ಭದಲ್ಲಿ ಮನೆಮಂದಿಯೆಲ್ಲಾ ಒಟ್ಟಾಗುವುದರಿಂದ ನಾವೆಲ್ಲಾ ಒಂದೇ ಎಂಬ ಭಾವನೆ ಬಂದು ನಾವೆಲ್ಲಾ ಒಗ್ಗೂಡಿ ಇರುತ್ತೇವೆ ಆದ್ದರಿಂದ ಸಮಾಜದಲ್ಲಿ ಒಡಕಿಗೆ ಆಸ್ಪದವಿರುವುದಿಲ್ಲ
ಭಜನೆಯಿಂದ ನಮ್ಮ ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತದೆ,
¨ಪ್ರತಿದಿನ ಭಜನೆ ಮಾಡುವುದರಿಂದ ದೇವರ ನಾಮಜಪದೊಂದಿಗೆ ನಾವು ನಮ್ಮತನವನಗ್ನು ಉಳಿಸುವುದರೊಂದಿಗೆ , ಹೆಣ್ಣನ್ನು ಗೌರವವಾಗಿ ಕಾಣುತ್ತೇವೆ
ಆರೋಗ್ಯದ ಮೇಲೂ ಭಜನೆ ಉತ್ತಮ ವಾತಾವರಣ ಕಲ್ಪಿಸುತ್ತದೆ.
ಆದ್ದರಿಂದ ನಮ್ಮ ಸ್ವಾಸ್ಥ್ಯಕ್ಕಾಗಿ ನಮದಮ ಬದುಕಿಗಾಗಿ ನಾವು ಭಜಿಸೋಣ
ಸಮಾಜದ ಉನ್ನತಿಗೆ ಶ್ರಮಿಸೋಣ
ಜೈ ಹಿಂದ್
ಶ್ರೀ ರಾಮಕೃಷ್ಣಾರ್ಪಣಮಸ್ತು

ಇಂತಿ
ಅಕ್ಷಯ್

Tuesday, 25 June 2019

ಓಂ ನಮೋ ಮಾತಾ

ದೇವರು ಬರೆದ ಕಥೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ... ಹೌದು ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಖಂಡಿತವಾಗಿಯೂ ಸಾಧ್ಯವಿಲ್ಲ.. ತಾಯಿ ಎನ್ನುವುದು ಕೇವಲ ಒಂದು ಪದವಲ್ಲ ಅದೊಂದು ಉಸಿರು.. ಒಬ್ಬ ಮಗುವನ್ನು ತಾಯಿಗಿಂತ ಹೆಚ್ಚಾಗಿ ಯಾರೂ ಪ್ರೀತಿಸಲಾರರು.. ಮಾತೃ ಎಂಬ ಪದಕ್ಕೆ ಇರುವಂತಹಾ ಮಹತ್ವ ವರ್ಣಿಸಲಸಾಧ್ಯ.. ಭಾರತೀಯ ಪರಂಪರೆಯಲ್ಲಿ ತಾಯಿಗೆ ಮಹತ್ತರ ಸ್ಥಾನವಿದೆ.. ನಮ್ಮನ್ನು ಎಲ್ಲಾ ಹೊತ್ತಿರುವ ಭೂಮಿಯನ್ನು ತಾಯಿ ಎಂದು ಸಂಭೋದಿಸುತ್ತೇವೆ.. ವಿಧ್ಯೆಗೆ ಅಧಿಪತಿಯಾಗಿರುವ ಶಾರದೆ ಆಕೆಯನ್ನು ತಾಯಿ ಎಂದೇ ಸಂಭೋಧಿಸುತ್ತೇವೆ.. ತಾಯಿಯ ಎದೆಹಾಲು ಸೇವಿಸಿ ಬೆಳೆದ ನಾವುಗಳು ಬಳಿಕ ಸೇವಿಸುವುದೇ ಕಾಮಧೇನುವಿನ ಹಾಲನ್ನು ಅದಕ್ಕಾಗಿಯೇ ಆಕೆಗೂ ಗೋಮಾತೆ ಎಂಬ ಸ್ಥಾನವಿದೆ ನಾವೆಷ್ಟೇ ತಪ್ಪು ಮಾಡಿದರೂ ಎಷ್ಟೇ ನೋವು ನೀಡಿದರೂ ಅದನ್ನೆಲ್ಲಾ ಸಹಿಸಿಕೊಳ್ಳುವಳು ತಾಯಿ ಅದಕ್ಕಾಗಿಯೇ ಆಕೆಗೆ ಮಹತ್ತರ ಸ್ಥಾನ…

ತಾಯಿ ತಾನೇ ಮೊದಲ ಗುರು
ಪ್ರೀತಿ ಪಾಠ ಆಕೆಯಿಂದ ಶುರು
ಅಮ್ಮನ ಹೃದಯದಿ ನನ್ನ ವಿಹಾರ
ಅಮ್ಮನ ನೆನೆದರೆ ಕಷ್ಟಗಳೇ ಪರಿಹಾರ
ಈ ಮಾತು ಎಷ್ಟು ಸತ್ಯ .. ಒಂದು ಮಗು ತೊದಲುತ್ತಾ ಮದಲು ನುಡಿಯುವ ಮಾತೇ ಅಮ್ಮಾ.. ನೋವಿರಲು ಸಂತಸವಿರಲಿ ಮಗುವಿಗೆ ತಿಳಿದಿರುವ ಒಂದೇ ಮಾತು.. ಅಮ್ಮಾ.. ಅಂತೆಯೇ ಬಾಲ್ಯದಲ್ಲಿಯೇ ಮಗುವಿಗೆ ಉತ್ತಮ ಸಂಸ್ಕಾರವನ್ನು ಕಲಿಸುವಲ್ಲಿ ತಾಯಿ ಮಹತ್ತರ ಪಾತ್ರ ವಹಿಸುತ್ತಾಳೆ , ಮಗುವಿನ ಅಕ್ಷರಾಭ್ಯಾಸದಿಂದ ಹಿಡಿದು ಮಗುವಿನ ಸರ್ವತೋಮುಖ ಏಳಿಗೆಯ ವರೆಗೂ ತಾಯಿ ಶಮ ವಹಿಸುತ್ತಾಳೆ ಎಂದರೆ ತಪ್ಪಾಗಲಾರದು.
ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲು ಖಂಡಿತವಾಗಿಯೂ ಸಾಧ್ಯವಿಲ್ಲ.. ಒಂಬತ್ತು ತಿಂಗಳು ಗರ್ಭದಲ್ಲಿ ತನ್ನ ಮಗುವನ್ನು ಹೊತ್ತು ತಿರುಗುವ ಮಾತೆ ಎಂದಿಗೂ ತನ್ನ ನೋವಿಗೆ ಬೇಸರಿಸುವವಳಲ್ಲ.. ಇನ್ನು ಮಗುವಿಗೆ ಜನ್ಮ ನೀಡುವಂತಹಾ ಸಂದರ್ಭದಲ್ಲಿ ದೇಹದಲ್ಲಿ ಇರುವ ಎಲ್ಲಾ ಮೂಳೆಗಳು ಮುರಿದು ಹೋಗುವಂತೆ ನೋವಾದರೂ ತಾಯಿ ಮಗುವಿನ ನಗುವಲ್ಲಿ ತನ್ನ ನೋವನ್ನೇಲ್ಲಾ ಮರೆಯುತ್ತಾಳೆ.. ಮಗುವಿನ ನಗುವಲ್ಲಿ ತನ್ನ ಸಂತಸವನ್ನು ಕಾಣುವವಳೇ ತಾಯಿ... ತನಗೆ ಎಷ್ಟೇ ನೋವಾದರೂ ತನಗೆ ಎಷ್ಟೇ ಬೇಸರವಾದರೂ ತನ್ನ ಕಂದಮ್ಮನಿಗೆ ಏನೂ ಆಗಬಾರದೆಂಬಂತೆ ತನ್ನ ಎದೆಯ ಗೂಡಿನಲ್ಲಿ ಬಚ್ಚಿಟ್ಟುಕೊಂಡು ತನ್ನ ಕಂದಮ್ಮನ್ನನ್ನು ಕಾಪಾಡುವವರು ತಾಯಿ ಮಾತ್ರ... ತನ್ನೆಲ್ಲಾ ನೋವನ್ನು ಬದಿಗೊತ್ತಿ ಮಗುವಿನ ಸಾರ್ಥಕ್ಯಕ್ಕಾಗಿ ಜೀವ ಸವೆಸುತ್ತಾಳಲ್ಲಾ ಆ ತಾಯಿ ನಿಜವಾಗಿಯೂ ಪ್ರಶಂಸನಾರ್ಹಳೇ ಸರಿ..
ಅಮ್ಮ ನೀಡುವ ಕೈತುತ್ತು ಅಮೃತವಿದ್ದಂತೆ ಎಂಬ ಮಾತಿದೆ... ಅಮ್ಮನ ಅಡುಗೆ ರುಚಿಯನ್ನು ಯಾವುದೇ 5 ಸ್ಟಾರ್ ಹೋಟೆಲ್ ನೀಡಲಾರದು... ಪ್ರೀತಿಯಿಂದ ತಾಯಿ ನೀಡುವ ಒಂದು ತುತ್ತು ನಮಗೆ ಸ್ವರ್ಗ ಸಮಾನ, ತಾನು ಉಪವಾಸವಿದ್ದರೂ ಪರವಾಗಿಲ್ಲ ತನ್ನ ಮಕ್ಕಳ ಹೊಟ್ಟೆ ತಣ್ಣಗಿರಲಿ ಎಂದು ಭಾವಿಸಲು ತಾಯಿಗೆ ಮಾತ್ರ ಸಾಧ್ಯ.
ಆದರೆ ಇಂದು ಪಾಶ್ಚಿಮಾತ್ಯರ ಅನುಕರಣೆಯಿಂದ ನಾವು ತಾಯಿಯ ಮಹತ್ವವನ್ನೇ ಮರೆತಿದ್ದೇವೆ.. ತನಗೊಂದು ಮಾತು ಬೈದಳೆಂದು ತಾಯಿಯ ಬಳಿ ಮಾತು ಬಿಟ್ಟಂತವರು ನಮ್ಮ ನಡುವೆ ಎಷ್ಟೋ ಜನಗಳಿರಬಹುದು, ತಾನು ಕೇಳಿದ್ದನ್ನು ತಾಯಿ ತೆಗೆದುಕೊಡಲಿಲ್ಲ ಎಂದು ಅತ್ತೂ ಕರೆದು ತಾಯಿಯ ಮೇಲೆ ಕೋಪಿಸಿಕೊಂಡವರೂ ನಮ್ಮ ನಡುವೆ ಇರಬಹುದು. ತಾಯಿ ತನ್ನ ಮಾತನ್ನು ವಿರೋಧಿಸಿದಳೆಂದು ಆಕೆಯ ಮೇಲೆ ಕೈ ಮಾಡಿದ ಎಷ್ಟೋ ಮಂದಿ ನಮ್ಮ ನಡುವಿರಬಹುದು, ಆದರೆ ಇಂತಹಾ ಕೃತ್ಯಗಳನ್ನು ಮಾಡುವ ಮುಂಚೆ ಯೋಚಿಸಿ, ತಾಯಿ ನಿಮ್ಮನ್ನು ಬೆಳೆಸಲು ಪಟ್ಟ ಶ್ರಮವನ್ನು ಒಮ್ಮೆ ನೆನಪಿಸಿ, ನಿಮ್ಮನ್ನು ಸಾಕಿ ಸಲಹುವಲ್ಲಿ ಆಕೆ ಪಟ್ಟ ಶ್ರಮವನ್ನೊಮ್ಮೆ ನೆನಪಿಸಿ.. ಬಾಲ್ಯದಲ್ಲಿ ನೀವು ಎಲ್ಲೆಂದರಲ್ಲಿ ಅಲೆದಾಡುವಾಗ ತನ್ನ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ಸಾಕಿದ್ದನ್ನೊಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಜನ್ಮದ ಸಂದರ್ಭದಲ್ಲಿ ತಾಯಿ ಪಟ್ಟ ನೋವನ್ನೊಮ್ಮೆ ನೆನಪಿಸಿಕೊಳ್ಳಿ.. ಇಂತಹಾ ಪ್ರೀತಿಯನ್ನು ನೀಡಿದ ತಾಯಿಯನ್ನು ನೀವು ದೂಷಿಸುವುದಾದರೆ ದೂಷಿಸಿ.. ಹೇಳುವ ಮಾತು ಹೇಳಿಯಾಯಿತು ಇನ್ನು ತರ್ಕ ನಿಮಗೆ ಬಿಟ್ಟದ್ದು..
ಜೈ ಮಾತಾ..
ಕೊನೆಯದಾಗಿ ಮಾತಾ ಶ್ರೀ ಶಾರದಾದೇವಿ ಹಾಗೂ ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನೆಯುತ್ತಾ ಮಾತಿಗೆ ವಿರಾಮ ಇಡಲಿಚ್ಛಿಸುತ್ತೇನೆ
ಮಾತಾ ಮೇ ಶಾರಾದಾದೇವಿ ರಾಮಕೃಷ್ಣಪ್ರಭುಃ ಪಿತಾ
ಬಾಂಧವಾಃ ಸಕಲಾ ಭಕ್ತಾಃ ಸ್ವದೇಶೋ ಭುವನತ್ರಯಂ
ಜಗತ್ತಿಗೆ ಮಾತೆ ಶ್ರೀ ಶಾರದಾದೇವಿಯೆನಿಸಿದ್ದರೆ , ಪಿತಾಸ್ವರೂಪಿ ಶ್ರೀ ರಾಮಕೃಷ್ಣರು, ಭಕ್ತಜನರೆಲ್ಲರೂ ಮಕ್ಕಳಂತೆಂದಾದಾಗ , ತ್ರಿಲೋಕವೂ ಸ್ವದೇಶವೇ ಆಗಿದೆ..
ಶ್ರೀ ಕೃಷ್ಣಾರ್ಪಣಮಸ್ತು..


Monday, 17 June 2019

ಗಾಡಿನ ಎಲ್ಲೆಲ್ಲೋ ಬಿಡ್ಬೇಡ್ರೀ...



ಯಾರಿಗೊತ್ತು ಜೀವನ ಹೇಗಿರುತ್ತೆ ಅಂತ ಇವತ್ತು ನಮ್ದಾಗಿದ್ದು ನಾಳೆ ನಿಮ್ದಾಗ್ಬೋದು ಸ್ವಾಮಿ , ಸ್ವಲ್ಪ ಎಚ್ಚರ ಅಷ್ಟೇ. ಯಾಕೋ ಗೊತ್ತಿಲ್ಲ ಕಣ್ರಿ ಈ ಜೀವನ ಅನ್ನೋದು, ಪೆಟ್ರೋಲ್ ಕಾಲಿ ಆಗಿರೋ ಬೈಕ್ ತರ ಅನ್ಸೋಕೆ ಸ್ಟಾರ್ಟ್ ಆಗಿ ಬಿಟ್ಟಿದೆ, ಕಿಕ್ ಮೇಲೆ ಕಿಕ್ ಹೊಡುದ್ರೂ ಸ್ಟಾರ್ಟ್ ಅಂತೂ ಖಂಡಿತಾ ಆಗಲ್ಲ.. ಆದ್ರೂ ಈ ಬೈಕ್ ನ ಅಲ್ಲೇ ಬಿಡೋಕೂ ಆಗ್ದೇ, ಅತ್ಲಾಗೆ ತಳ್ಳೋಕೂ ಆಗ್ದೆ, ಬಿಡೋದಾ ತಳ್ಳೋದಾ ಅನ್ನೋ ಯೋಚ್ನೆ ಮಾಡಿ ಮುಗ್ಸೋದ್ರೊಳಗೆ, ಇರೋ ಚಾನ್ಸೂ ಮುಗ್ದು ಹೋಗಿರುತ್ತೆ ಅಷ್ಟೇ.. ಆದ್ರೂ ಸ್ವಾಮಿ ಬೈಕ್ ನ ಇರೋ ಕಡೆ ಪಾರ್ಕ್ ಮಾಡ್ಬೇಡಿ, ಸ್ವಲ್ಪ ದೂರ ತಳ್ಕೊಂಡು ಹೋಗಿ, ಯಾವ್ದಾದ್ರೂ ಪೆಟ್ರೋಲ್ ಬಂಕ್ ಸಿಕ್ರೂ ಸಿಗ್ಬೋದು.

        ನನ್ ಜೀವನ ಅನ್ನೋ ಗಾಡಿದೂ ಇದೇ ಅವಸ್ಥೆ, ಬೆಂಗಳೂರು ಅನ್ನೋ ಜಾಗಕ್ಕೆ ಬಂದು ನೆಟ್ಟಗೆ 2 ವರ್ಷ ಆಗ್ತಾ ಬಂತೂ, ಬಂದ ಒಂದೈದು ತಿಂಗಳು ನನ್ನ ಬೈಕ್ ಪೆಟ್ರೋಲು ಕಾಲಿ ಅಗ್ತಿರ್ಲಿಲ್ಲ, ಅತ್ತಾಗೆ ಮೈಲೇಜೂ ಚೆನ್ನಾಗಿತ್ತು.  ಯಾವಾಗ ಈ ಬರಹ ಅನ್ನೋ ಎಂಜಿನ್ ಆಯಿಲ್ ಸ್ವಲ್ಪ ಸ್ವಲ್ಪ ವೀಕಾಗೋಕೆ ಸ್ಟಾರ್ಟ್ ಆಯ್ತೋ ಅಷ್ಟೇ ನಮ್ ಕಥೆ, ನಮ್ ಗಾಡೀನೂ ಸ್ವಲ್ಪಾನೆ ಕೈ ಕೊಡೋಕೆ ಸ್ಟಾರ್ಟ್ ಆಯ್ತು, ಇತ್ತಾಗೆ ಹಂಗೋ ಹಿಂಗೋ ಏನೋ ಮಾಡಿ ಸ್ವಲ್ಪ ಸಮಯ ಗಾಡಿ ಓಡ್ಸಣ ಅಂತ ಅನ್ಕೋಡೆ ಯಾಕಂದ್ರೆ ವಿಧಿ ಇಲ್ಲ ನೋಡಿ, ಗಾಡಿ ಓಡಿದ್ರೇನೆ ಗಾಡಿಗೆ ಒಂದು ಗತ್ತಿರುತ್ತೆ, ನಿಂತಲ್ಲೇ ನಿಂತಿದ್ರೇ ಧೂಳು ಹಿಡಿಯುತ್ತೆ ಅಷ್ಟೇ.. ಈ ಸಂಬಂಧಿಕರು ಅನ್ನೋ ಧೂಳು ಗಾಡಿನ ಹಾಳು ಮಾಡೋಕು ಹೇಸಲ್ಲ ಕಣ್ರೀ… ಏನಾದ್ರೂ ನಮದು ಗಾಡಿನ ಒಂದು ತಿಂಗ್ಳು ನಿಲ್ಸಿದ್ವಾ ಮುಗೀತು ಕಥೆ, ಅವರ ಬಾಯಲ್ಲಿ ಮಾತು ಶುರು “ ಅಲ್ಲ ಅಕ್ಷಯ್ ಏನೋ ಕಿತ್ತು ಗುಡ್ಡೆ ಹಾಕ್ತೀನಿ ಅಂತ ಬೆಂಗ್ಳೂರಿಗೆ ಹೋದ್ನಂತೆ ಆದರೆ ಕೆಲ್ಸ ಬಿಟ್ನಂತೆ ಅಂತ” ಅಲ್ಲಿಗೆ ಕತೆ ಮುಗಿತು, ಒಬ್ಬನ ಕಡೆಯಿಂದ ಇನ್ನೊಬ್ಬನ ಕಡೆ ಹೋಗೋವಾಗ ಈ ವಾರ್ತೆಗೆ ಇನ್ನೊಂದು ವಾರ್ತೆ ಸೇರಿ ನಮ್ ಜೀವನ ಹಾಳ್ ಮಾಡೋ ಮಟ್ಟಕ್ಕೆ ಬಂದಿರುತ್ತೆ ಅಷ್ಟೇ.. ಈ ಒಂದೇ ಕಾರಣಕ್ಕೆ ಇಷ್ಟ ಇಲ್ಲ ಅಂದರೂ ನಮ್ ಗಾಡೀನ ಇನ್ನು ನಿಲ್ಲಿಸ್ದೆ ಮೈಲೇಜ್ ಕಡ್ಮೆ ಆದ್ರೂನೂ ಅದೇ ಗಾಡೀನ ಓಡಿಸ್ತಾ ಇದ್ದೀನಿ ಅಷ್ಟೇ.. ಆದ್ರೂ ಹಾಳಾಗಿರೋ ಗಾಡಿನಾ ಎಷ್ಟು ಅಂತ ಓಡುಸ್ತೀರಾ?? ಅದಿಕ್ಕೂ ಲಿಮಿಟ್ ಅಂತ ಇರುತ್ತಲ್ವ? ಹಾಗೆ ನನ್ ಗಾಡಿ ಲಿಮಿಟ್ ಮುಗಿತಾ ಬಂತೂ ಆಯುಷ್ಯವೆಂಬ ವಾಹಿನಿಯಲ್ಲಿ ನನ್ ಕಥೆ ಮುಗಿತಾ  ಬಂತು, ನನ್ ಪೆಟ್ರೋಲ್ ಮುಗ್ದು ಆಗ್ಲೆ ಒಂದೈದು ತಿಂಗಳಾಗ್ತಾ ಬಂತು ಆದ್ರೂ ಹಂಗೋ ಹಿಂಗೋ ಗಾಡಿ ತಳ್ಕೊಂಡು ಹೋಗ್ತಾ ಇದ್ದೆ ಅಂತ ಅನ್ನಿಸ್ತು, ಫೈನಲಿ ಮೊನ್ನೆ 6ನೇ ತಾರೀಖು ಅದೇನಾಯ್ತೋ ಗೊತ್ತಿಲ್ಲ, ಗಾಡಿ ಸರ್ರಕ್ ಅಂತ ಬಂದ್ ಬಿದ್ಬಿಡ್ತಪ್ಪಾ.. ಅಲ್ಲಿಗೆ ನಮ್ ಕಥೆ ಮುಗಿತು, ಗಾಡಿನ ಸ್ವಲ್ಪ ದಿನ ಅಂದ್ರೆ ಒಂದು ತಿಂಗ್ಳು ರಿಪೇರಿ ಕೊಡ್ಬೇಕು ಅಂತ ಅನ್ನುಸ್ತು ಹಂಗೆ ಒಂದು ಸೈಡಲ್ಲಿ ನಮ್ಮ ಆಫಿಸಿನ ಹೆಚ್. ಆರ್. ಅನ್ನೋ ಗ್ಯಾರೇಜ್ ಗೆ ರಾಜಿನಾಮೆ ಪತ್ರ ಕೊಟ್ಬಿಟ್ಟು ಬಂದ್ಬಿಟ್ಟೆ, ಈ ಗಾಡಿ ಯಾವಾಗ ರಿಪೇರಿಯಾಗುತ್ತೋ ಗೊತ್ತಿಲ್ಲ, ಅದರ ಬಗ್ಗೆ ಸ್ವಲ್ಪನೂ ಯೋಚ್ನೆ ಇಲ್ಲ, ನೋಡಣ ಏನಾಗುತ್ತೆ ಅಂತ... ಇನ್ನೊಂದು ಮಾತು ಈ ಗಾಡಿನ ನಾನಂತೂ ಬಿಡಲ್ಲ, ಇನ್ನೊಂದು ತಿಂಗಳು ಬಿಟ್ಟು ಗಾಡಿ ಹಾಳಾದ್ರೆ ತಳ್ಕೊಂಡು ಹೋಗ್ತೀನಿ, ರಿಪೇರಿ ಆದ್ರೆ ಪೆಟ್ರೋಲ್ ಹಾಕೊಂಡು ಓಡುಸ್ತೀನಿ ಅಷ್ಟೇ...

Tuesday, 11 June 2019

ಇಷ್ಟೇ ರೀ ನಮ್ ಕಥೆ..

ಮನಸು ವಿಹ್ವಲವಾಗಿತ್ತು, ಯೋಚನಾಲಹರಿಯಿಲ್ಲದೆ ಮನಸ್ಸು ಉಪ್ಪು ಹುಳಿ ಖಾರವಿಲ್ಲದ ಚಿತ್ರಾನ್ನದಂತಾಗಿತ್ತು, ಆಫೀಸಿನ ನಾಲ್ಕು ಗೋಡೆಯೊಳಗೆ ಕುಳಿತು ಬೇಸರವಾದಂತಾಗಿ , ಇನ್ನೇನು ನನ್ನ ಕೊನೇಯ ಕೆಲಸವನ್ನೆಲ್ಲಾ ಮುಗಿಸಿ ಹೊರಡೋಣವೆಂದಿದ್ದೆ.. ಆಗಲೇ ಕಂಡಿದ್ದು ಆ ಪುಣ್ಯಾತ್ಮನ ಮುಖವನ್ನು.. ಸ್ವಲ್ಪ ಹೊತ್ತಿನಲ್ಲೇ ಬರುವೆನೆಂದು ಆತನೇನೋ ಹೊರಟು ಹೋದ ಆದರೆ, ನಮ್ಮ ಪಾಡು ಕೇಳುವವರಾರು? ಈ ಚಿತ್ರಾನ್ನವನ್ನು ಅತ್ತ ಎಸೆಯಲೂ ಆಗದೇ ತಿನ್ನಲೂ ಆಗದೆ, ಸುಮ್ಮನೆ ಕುಳಿತಿರಲು, ಮನದ ಚಿಂತೆಗಳು ಪಲ್ಲಟವಾಗಬಹುದೇನೋ ಎಂದುಕೊಂಡು , ಚಹಾ ಸೇವನೆಗಾಗಿ ಪಕ್ಕದಲ್ಲಿನ ಅಂಗಡಿಯತ್ತ ಮನವಿಲ್ಲದ ತನುವು ಹೊರಟು ಹೋಯಿತು.
        ಕೈಯಲ್ಲಿ ಚಹಾದ ಗ್ಲಾಸನ್ನು ಹಿಡಿದಿದ್ದರೆ, ಮನಸ್ಸು ಪಾಕಿಸ್ಥಾನವೋ ಅಮೇರಿಕಾವೋ ಎಲ್ಲಾ ಕಡೆ ಸುತ್ತಾಡುತ್ತಲಿತ್ತು, ಥತ್ತೇರಿಕೆ, ಏಕೆ ಹೀಗಾಗುತ್ತಿದೆ ಎಂದು ಯೋಚಿಸುವುದಕ್ಕೂ ವ್ಯವಧಾನವಿಲ್ಲ, ತನ್ನಿಂದ ತಾನೆ ಮನಸ್ಸು ವಿಹ್ವಲವಾದಂತೆ ಭಾಸ. ಕಣ್ಣೋಟವಂತೂ ಮುಂದಿರುವ ಅಯ್ಯಂಗಾರ್ ಬೇಕರಿಯ ಕಡೆಗಿದ್ದರೆ, ಮನಸ್ಸು ಮಾತ್ರ ಎಲ್ಲೆಲ್ಲೋ ಓಡುತ್ತಿತ್ತು. ಕೈ ನನಗರಿವಿಲ್ಲದೇ ಇನ್ನೊಂದು ಗ್ಲಾಸ್ ಚಹಾ ಸೇವಿಸಬೇಕೆಂಬ ಆಜ್ಞೆ ನೀಡಿದಂತೆ ಭಾಸವಾಗಿ, ಇನ್ನೊಂದು ಗ್ಲಾಸ್  ಚಹಾ ಸೇವಿಸಿದ್ದೂ ಆಯಿತು. ಕನಸುಗಳ ಬೆನ್ನತ್ತಿ ಹೋಗಬೇಕಾದ ಮನಸ್ಸು ಭಾವನೆಗಳ ಬೆನ್ನತ್ತಿ ಹೋಗುತ್ತಿದೆ ಏನೋ ಎಂದು ಭಾಸವಾದಂತಿದೆ.

  ಅತ್ತ ಧರೆ ಇತ್ತ ಪುಲಿ ಎಂಬಂತಿದೆ ಬದುಕು, ಮುಂದೆ ಹೋದರೆ ಬಾಳುವೆನೋ ಬೀಳುವೆನೋ ಎಂಬ ಯೋಚನೆ ಒಂದೆಡೆಯಾದರೆ ಇಲ್ಲೇ ನಿಂತರೆ ನಿಂತ ನೀರಾಗಿಬಿಡುವೆನೋ ಎಂಬ ಭಾಸ, ಮನ ಕೇಳದು ನಿಂತ ನೀರಾಗಲೂ ಆಗದು ಅತ್ತ ಪುಲಿಯ ಬಾಯಿಗೆ ಬೀಳಲಾಗದು ಏನಾಗುವುದೋ ಬಲ್ಲವರಾರು? ದೇವನೊಬ್ಬನಿದ್ದಾನೆ, ದೇವದೂತನೂ ಇದ್ದಾನೆ, ಆತ ದಾರಿ ತೋರಿಸಬಹುದೇನೋ ಏನಾಗುತ್ತೋ ಕಾದು ನೋಡಬೇಕಾಗಿದೆ ಅಷ್ಟೇ..
        ಜೀವನವೆಂಬುವುದು ನಿಂತ ನೀರಾಗಬಾರದಷ್ಟೇ..
        ಭೋರ್ಗರೆಯುವ ಸಮುದ್ರವಾಗಿ, ಅತ್ತ ಉಪ್ಪಿಗೆ ಉಪ್ಪಾಗೆ
        ಇತ್ತ ಮಳೆಹನಿಯ ತರುವ ಮೋಡವಾಗಿ,
        ನಾಲ್ಕಾರು ಜನರಿಗೆ ಸಹಾಯವಾದರೆ ಸಾಕಷ್ಟೆ.


                                                          ಇಂತಿ ನಿಮ್ಮವ
                                                                   ಅಕ್ಷಯ್
 

                                           



Thursday, 6 June 2019

ಮರೆಯದ ಮೌನದ ಮಾತು..

ಕೈ ನಡುಗುತ್ತಲಿದೆ.. ಮನ ಬೇಡ ಬೇಡವೆಂದರೂ ಒಂದು ವರುಷದ  ಹಿಂದಿನ ನೆನಪಿನಂಗಳದತ್ತ ಜಾರುತ್ತಲಿದೆ..  ಬಹುಷಃ ಈ ಲೇಖನ ಮುಗಿಯುವ ಹೊತ್ತಿಗೆ ಕಣ್ಣಾಲಿಗಳು ತೇವಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.. ಭವನೆಗಳಿಗಿದು ಜಾಗವಲ್ಲ, ಭಾವನಾತ್ಮಕ ಲೋಕಕ್ಕೂ ಇಲ್ಲಿಗೂ ಸಂಬಂಧವೇ ಇಲ್ಲವೇನೋ ಎಂದೆನಿಸುವ ಕಾಲ ಸನ್ನಿಹಿತವಾಗಿದೆ. ಹೌದು ಈಜು ಬರದಿದ್ದರೂ ಕೆರೆಯೊಳಗೆ ಧುಮುಕಿದ ಮೇಲೆ ಈಜು ಕಲಿಯಲೇ ಬೇಕು ತಾನೆ..?
            ಒಂದುವರೆ ವರುಷದ ಹಿಂದಿನ ಮಾತದು. ಕಿಸೆಯಲ್ಲಿತ್ತು 6 ಸಾವಿರ ರುಪಾಯಿಗಳು, ಅದೂ ಕೂಡಾ ನನ್ನ ಸ್ವಂತದ್ದಲ್ಲ.. ಅಪ್ಪನ ದುಡಿಮೆಯ ಕಾಸು. ಮಾಧ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ತೊಟ್ಟು ಬಂದ ನನಗೆ ದಾರಿದೀಪದಂತೆ ಭಾಸವಾದುದ್ದು, ಅದೇ ಆಯುಷ್ ಟಿವಿ.

        ಗ್ರಾಫಿಕ್ಸ್ ಏನೆಂದು ಗೊತ್ತಿಲ್ಲ.. ಎಡಿಟಿಂಗ್ ಅಂದರೆ ಏನೆಂದು ಗೊತ್ತಿಲ್ಲ ಒಟ್ಟಿನಲ್ಲಿ ಮಾಧ್ಯಮ ಕ್ಷೇತ್ರವೇ ಹೊಸದು.. ಇರಲು ಸರಿಯಾದ ಸ್ಥಳವಿಲ್ಲ, ಎಲ್ಲಿರುವುದು ಎಂದು ಯೋಚಿಸುತ್ತಿರುವಾಗಲೇ ದೇವಲೋಕದ ದೇವದೂತನಾದವನು ಮೌಲಾನ, ಸುಮಾರು 2 ಗಂಟೆಯ ದಾರಿಯಾದರೂ ತತ್ಕಾಲಕ್ಕೆ ಅಲ್ಲಿಂದ ಆಫೀಸಿಗೆ ಬರುವುದು ಎಂದು ತೀರ್ಮಾನಿಸಿಬಿಟ್ಟೆ.
    ಬೆಳಗ್ಗೆ 05:30ಕ್ಕೆ ಇಲೆಕ್ಟ್ರಾನಿಕ್ ಸಿಟಿಯಿಂದ ಹೊರಟರೆ ಆಫಿಸ್ ತಲುಪುವುದು 09:00 ಗಂಟೆಗೆ ಆದರೂ ಹಾಗೋ ಹೀಗೋ ಎಂಬಂತೆ ಆಫೀಸು ಸೇರಿ ಕೆಲಸ ಮಾಡುತ್ತಿದ್ದವನು ನಾನು, ನನಗೋ ಕಂಪ್ಯೂಟರಿನ ಮುಂದೆ ಕುಳಿತು ನುಡಿಯಲ್ಲಿ ಕ್ಲಿಕ್ಕಿಸುವುದು ಬಿಟ್ಟರೆ ಬೇರೆನೂ ಬರದು, ನನ್ನ ಕಾಯಕ ಅಷ್ಟೇ.. ದಿನಗಳುರುಳುತ್ತಿದ್ದವು.. ಕೈಯಲ್ಲಿ ತಂದ ಕಾಸು ಮುಗಿಯುವ ಹಂತಕ್ಕೆ ಬಂದಿತ್ತು. ಆದರೂ ಈ ನಡುವೆ ಒಂದು ವಿಚಾರವಂತೂ ಹೇಳಲೇಬೇಕು, ಪ್ರತಿದಿನ ಬೆಳಗ್ಗೆ ಆಫೀಸಿಗೆ ಚಹಾ ಕಾಫಿ ತರುವ ಹುಡುಗನೊಬ್ಬನಿದ್ದ ಆದರೆ ಅವನ ಬಳಿ ಚಹಾ ಸೇವಿಸಬೇಕಾದರೆ ನಾನು 01 ವಾರಗಳ ಕಾಲ ಕಾದಿದ್ದೇನೆ, ಕಾರಣವಿಷ್ಟೇ, ನಾನಂತೂ ಪಕ್ಕಾ ಹಳ್ಳಿಗ, ಒಂದೊಂದು ಪೈಸೆಗೂ ಲೆಕ್ಕ ಇಡುವವನು, ಆಫೀಸಿನೊಳಗೆ ಸಿಗುವ ಚಹಾ ಬಿಟ್ಟಿಯದ್ದೋ ಅಥವಾ ನಾವು ಹಣ ನೀಡಬೇಕೋ ಎಂದು ತಿಳಿಯಲು ಒಂದು ವಾರ ಚಹಾ ಸೇವಿಸಲಿಲ್ಲ ಅಷ್ಟೇ..  ಇನ್ನೂ ಆ ಚಹಾಗೂ ನಾವೇ ಹಣ ನೀಡಬೇಕಾದರೆ ನನ್ನಲ್ಲಿರುವ ಅಲ್ಪ ಕಾಸೂ ವ್ಯರ್ಥವಾಗಿ ಬೇಗನೇ ಭಿಕ್ಷುಕನಾಗಬೇಕಾದ ಪರಿಸ್ಥಿತಿ ಬರಬಹುದು ಎಂದು ಅಷ್ಟೇ..
 ಇವೆಲ್ಲದರ ನಡುವೆ ಒಂದು ವಿಚಾರವಿದೆ, ತಂದಿರುವ ಕಾಸು 15 ದಿನಕ್ಕೆ ಖರ್ಚಾಗಿ ಬಿಟ್ಟಿದೆ, ಇನ್ನೊಬ್ಬರ ಬಳಿ ಕೇಳುವಷ್ಟು ಸ್ನೇಹವಿಲ್ಲ, ಏನು ಮಾಡೋಣ ಊಟಕ್ಕೂ ಕಾಸಿಲ್ಲ, ಈಗ ನನಗೆ ನಗು ಬರುವಂತಿದೆ, ಆದರೆ ಅಂದಿನ ನನ್ನ ಪರಿಸ್ಥಿತಿ ನನಗೇ ಕಣ್ಣೀರು ತರಿಸುತ್ತಿತ್ತು, ಮಧ್ಯಾಹ್ನದ ಹೊತ್ತಿಗೆ ಎಲ್ಲರೂ ಊಟಕ್ಕೆಂದು ತೆರಳಿದರೆ ಆನು ಹೋಟೆಲ್‍ಗೆ ಹೋಗಿ ಊಟ ಮಾಡುತ್ತೇನೆಂದು ಹೋಗುತ್ತಿದ್ದುದ್ದು ದೇವಸಂದ್ರ ಬಸ್ ನಿಲ್ದಾಣಕ್ಕೆ, ಅಲ್ಲಿ ಒಂದೈದು ನಿಮಿಷ ಕುಳಿತು ಹಸಿವಿನ ಮನದಲ್ಲೇ ಕಣ್ಣೀರಾಗಿದ್ದೂ ಇದೆ. ಬಳಿಕ ಆಫೀಸಿಗೆ ಮರಳಿ ಬಂದು ಊಟವಾಯಿತೆಂದು ಸುಳ್ಳು ಹೇಳಿದ್ದೂ ಇದೆ.
        6 ತಿಂಗಳ ಬಳಿಕ ನನ್ನಲ್ಲಿ ಏನೋ ಒಂದು ಪ್ರತಿಭೆ ಇದೆ ಎಂದು ಯಾರೋ ಗುರುತಿಸಿದರೆಂದು ಕಾಣುತ್ತದೆ, ನನ್ನನ್ನು ಪ್ರೋಮೋ ಡಿಪಾರ್ಟ್‍ಮೆಂಟ್ ಗೆ ವರ್ಗಾವಣೆ ಮಾಡಿದ್ದರೋ, ಈ ಸಾಫ್ಟ್‍ವೇರ್ ಗಳ ತಲೆ ಬುಡವೇ ನನಗೆ ತಿಳಿದಿಲ್ಲ ಏನು ಮಾಡಲಿ ಎಂದು ಯೋಚಿಸುತ್ತಿದ್ದೆ , ಆಗ ದೇವದೂತರಾದದ್ದು ನಾಗೇಂದ್ರನ್ ಸರ್, ಮತ್ತು ಪ್ರಸನ್ನ ಸರ್, ನಾ ಹೇಳುವುದಕ್ಕೂ ಮುನ್ನವೇ ಅವರೇ ಎಲ್ಲ ಕಾರ್ಯಗಳನ್ನು ಮನಗಂಡು ಮಾಡಿ ಮುಗಿಸುತ್ತಿದ್ದರು, ಆದರೂ ಈ ಪುಣ್ಯಾತ್ಮನನ್ನು ವೈಜ್ಞಾನಿಕವಾಗಿ ಹೇಗಾದರೂ ಮುಂದಡಿ ಇಡಿಸಬೇಕೆಂದು ಛಲ ತೊಟ್ಟ ನಾಗೇಂದ್ರನ್ ಸರ್ ಅಂತೂ ಇಂತೂ ಪ್ರೀಮಿಯರ್ ಪ್ರೋ ಸಾಫ್ಟ್‍ವೇರ್ ಕಲಿಸುವ ಪ್ರಯತ್ನ ಮಾಡಿದರ , ಇರುವ ಕೊಂಚ ಸಮಯದಲ್ಲಿ ಅಲ್ಪಸ್ವಲ್ಪ ಪ್ರಿಮಿಯರ್ ಪ್ರೋ ನಾ ಕಲಿತಿರುವೆ.
        ಆಯುಷ್ ವಾಹಿನಿಯಲ್ಲಿ ಒಂದುವರೆ ವರುಷಗಳಿಂದ ದುಡಿಯುತ್ತಿದ್ದ ನನಗೆ ಅದೇಕೋ ಆಯುಷ್ ವಾಹಿನಿಯಿಂದ ನಿರ್ಗಮಿಸುವ ಮನಸ್ಸಾಯಿತು, ರಾಜಿನಾಮೆ ನಿರ್ಧಾರವನ್ನು ಕೊನೆಗೂ ತಿಳಿಸಿದೆ, ಸ್ವಂತ ಕುಟುಂಬದ ಸದಸ್ಯರಂತೆ ಪ್ರೀತಿಸುವ ಸಹೋದ್ಯೋಗಿಗಳನ್ನು ಬಿಟ್ಟು ತೆರಳುವುದು ಕೊಂಚ ಕಷ್ಟದ ವಿಚಾರವೇ, ಆದರೇನು ಮಾಡಲಿ, ನಿರ್ಧಾರ ಕೈಗೊಂಡಾಗಿದೆ, ನಾನು ಸಾಧಿಸಬೇಕಾದ ಕಾರ್ಯ ಬಹಳಷ್ಟಿವೆ, ಇರುವುದು ಅಲ್ಪ ಸಮಯ ಅದರಲ್ಲಿ ಏನಾದರೂ ಸಾಧನೆ ಮಾಡುವ ಹಂಬಲ..
         ಈ ಆಯುಷ್ ವಾಹಿನಿಯ ಪಯಣದಲ್ಲಿ ನನ್ನೊಂದಿಗೆ ನನ್ನವರೆಂದು ಇದ್ದವರು, ಶಮಾ ಮೇಡಂ. ನನ್ನೊಲವಿನ ರಂಜಿನಿ ಮೇಡಂ, ನಾಗೇಂದ್ರನ್ ಸರ್, ಪ್ರಸನ್ನ ಸರ್, ದುರ್ಗಾಧರನ್ ಸರ್, ಸುಂದರಮ್ ಸರ್, ಇಂಚರಾ, ತಲ್ವಾರ್ ಸರ್,ಭಾರತಿ ಮೇಡಂ ಉಮೇಶ್, ಮಂಜು ಸರ್ ಸುಬ್ಬು ಸರ್, ಸತೀಶ್ ಸರ್, ಸಂಧ್ಯಾ ಮೇಡಂ, ಭರತ್ ಸರ್, ಮನೀಷಾ, ಬಾಲಾಜಿ ಸರ್, ಶ್ರೀಕಾಂತ್ ಸರ್ ಇವರೆಲ್ಲರಿಗೂ ಕೃತಜ್ಞತಾಪೂರ್ವಕ ಧನ್ಯವಾದ..


ಭೂಮಿ ಇಲ್ಲ ಚೌಕಾಕಾರ
ಇರುವುದು ಅದು ಗೋಲಾಕಾರ..
ಈ ಗೋಳು ತುಂಬಿದ ಗೋಲಿಯಲ್ಲಿ
ನಾವೆಲ್ಲರೂ ಭೇಟಿಯಾಗಲೇ ಬೇಕು
ಒಂದಲ್ಲಾ ಒಂದು ದಿನ ಭೇಟಿ
ಖಂಡಿತಾ.. ಆದರೆ ಆ ಭೇಟಿಯಲ್ಲಿ ನಾ ಹೇಳುವ ಒಂದೇ ಮಾತು
“ ಜೀವನದ ಹಾದಿ ತೋರಿದ ನಿಮಗೆಲ್ಲಾ ಪ್ರೀತಿಯ ಧನ್ಯವಾದ”

ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!

ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...