Thursday, 5 May 2022

ಬದುಕು... ಬದಲಾಗದೇ...?? ಬಣ್ಣವೂ ಬರಲಾರದೇ?

ಜಂಜಾಟದ ಬದುಕಿನಲ್ಲಿ ನಾವು ಅದೆಷ್ಟು ಸಉಂದರ ಕ್ಷಣಗಳನ್ನು ಕಳೆದುಕೊಂಡು ಬಿಡುತ್ತೇವೆ ಅಲ್ವಾ..? ಏಕೋ ಏನೋ ಬದುಕಿನಲ್ಲಿ ಸುಂದರ ಕ್ಷಣಗಳಿಗೆ ಸಮಯವೇ ಇಲ್ಲವೋ ಅಥವಾ ನಾವು ಸಮಯ ಮಾಡಿಕೊಳ್ಳುತ್ತಿಲ್ಲವೋ ಎಂದು ಭಾಸವಾಗುತ್ತಿದೆ. ಜಂಜಾಟಗಳಿಂದಾಗಿ ನಮ್ಮ ಹವ್ಯಾಸಗಳನ್ನು ನಾವು ಹೇಗೆ ಕಳೆದಕೊಂಡುಬಿಡುತ್ತೇವೆ ಎನ್ನವುದಕ್ಕೆ ಸ್ವತಃ ನಾನೇ ಸಾಕ್ಷಿ…!!!

ಹೌದು ಇಂದು ನಾನು ಬರೆಯಹೊರಟಿರುವುದು ನನ್ನ ಸ್ವಂತ ಕಥೆಯೊಂದನ್ನು.. ಒಬ್ಬ ಮಾತನಾಡಲು ಧೈರ್ಯ ಇಲ್ಲದ, ಸರಿಯಾಗಿ ವ್ಯವಹಾರ ಜ್ಞಾನ ಇಲ್ಲದ ನನ್ನದೇ ಕಥೆಯೊಂದನ್ನು..
 ಸುಮಾರು ನಾಲ್ಕು ವರುಷಗಳ ಹಿಂದೆ ಮನಸ್ಸಿನಲ್ಲಿಸಾವಿರಾರು ಕನಸುಗಳನ್ನು ಹೊತ್ತು ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಹತ್ತಿದ್ದೆ. ಕನಸುಗಳೇನೋ ಇತ್ತು ಆದರೆ ನನಸು ಮಾಡುವಂತಹಾ ಮನಸ್ಥತಿ ಬೇಕಲ್ಲ..? ಕಷ್ಟ, ನಷ್ಟ, ಏನೋ ಗೊತ್ತಿಲ್ಲ ಅಂತೂ ಬೆಂಗಳೂರಿಗೆ ಬಂದಿದ್ದಾಯ್ತು, ಜೀವನಕ್ಕೆಂದು ಒಂದು ಕೆಲಸ ಹಿಡಿದಿದೂ ಆಯ್ತು.. ನಾಲ್ಕು ವರ್ಷಗಳಲ್ಲಿ ನೀನು ದುಡಿದ ಹಣ ಎಷ್ಟು? ನಿನ್ನ ಖಾತೆಯಲ್ಲಿರುವ ಉಳಿತಾಯ ಎಷ್ಟು ಎಂದು ಯಾರಾದ್ರೂ ಕೇಳಿದ್ರೆ ಪೆಚ್ಚುಮೋರೆ ಹಾಕುತ್ತಾ ಒಂದು ನಗುವಿನಿಂದ ನಾಚಿಕೆಯಿಂದ ಉತ್ತರಿಸುತ್ತೇನೆ.. ಶೂನ್ಯ.. ಬರಿ ಶೂನ್ಯ ಅಷ್ಟೇ.. ಹಾಗಾದ್ರೆ ದುಡಿದ ಹಣ ಏನು ಮಾಡ್ತಿದ್ದಿ? ಸಿಕ್ಕ ಸಂಬಳ ಏನಾಯ್ತು? ಎಲ್ಲಾ ಪ್ರಶ್ನೆಗಳಿಗೆ ನನ್ನಲ್ಲೇ ಉತ್ತರ ಇಲ್ಲ. 
ಹೌದು ಬೆಂಗಳೂರಲ್ಲಿ ಕೆಲವರನ್ನು ನಂಬಿ ತಪ್ಪು ಮಾಡಿರುವೆ ಏನೋ.. ಇನ್ನೂ ನಂಬುತ್ತಾ ತಪ್ಪು ಮಾಡುತ್ತಿರುವೆ ಏನೋ ಎಂದು ನನಗೆ ಇಂದಿಗೂ ಅನಿಸುತ್ತಿದೆ. ಆದ್ರೆ ಉತ್ತರ, ಇಲ್ಲ.. ಅದೇ ವಿಶ್ವಾಸಘಾತುಕರನ್ನು ನಾನು ಇಂದಿಗೂ ನಂಬುತ್ತಿರುವೆ. ಯಾಕೆ..? ಪ್ರಶ್ನೆಗೆ ಇಂದಿಗೂ ಉತ್ತರ ಇಲ್ಲ..
 ಬಲ್ಲವರು ಹೇಳುವುದುಂಟು ಯಾರಾದರೂ ಒಮ್ಮೆ ಕೆಟ್ಟ ಮೇಲೆ ಪಾಠ ಕಲಿಯುತ್ತಾರೆ ಎಂದು.. ಉಹೂಂ.. ಅದೆಷ್ಟು ಬಾರಿ ನಂಬಿಕೆದ್ರೋಹವಾದರೂ ಅದೇ ನಂಬಿಕೆ ದ್ರೋಹಿಗಳನ್ನು ಮತ್ತೆ ಮತ್ತೆ ನಂಬಿ ಅವರ ಕಷ್ಟಗಳಿಗೆ ಮರುಗುತ್ತೇವಲ್ಲಾ.. ಈ ಬೆಂದು, ಬೇಯುತ್ತಿರುವ ಕಾಂಕ್ರೀಟ್ ಕಾಡಿನಲ್ಲಿ ನಾನು ಮಾಡುತ್ತಿರುವ ಅತಿ ದೊಡ್ಡ ತಪ್ಪು ಅದೇ ಏನೋ.. 
ಇರಲಿ ಈ ಹಿಂದೆ ಬರೆದ ಕೆಲವು ಸಾಲುಗಳಲ್ಲಿ ನನಗಾದ ನಂಬಿಕೆ ದ್ರೋಹವನ್ನು ಹಂಚಿಕೊಂಡಿದ್ದೆ, ಆದರೆ ಅದೇ ಮತ್ತೆ ಮುಂದುವರೆದರೆ..?ಹಹ್ಹಾ.. ಮುಂದುವರೆದರೆ ಏನು ಮುಂದುವರೆಯಿತು.
೩ ವರ್ಷದ ಹಿಂದಿನ ಮಾತು ಸಾಕಪ್ಪಾ ಈ ಬೆಂಗಳೂರು ಸಹವಾಸವೇ ಸಾಕು ಎಂದು ನಾನು ಬೆಂಗಳೂನ್ನು ಬಿಟ್ಟು ಮನಶ್ಶಾಂತಿಯನ್ನು ಅರಸಿ ಹೋಗಿದ್ದೆ. ಮತ್ತೆ ಅಪ್ಪನ ಆಶ್ರಯಕ್ಕೆ ಹೋಗಿದ್ದೆ, ಎಲ್ಲಾ ಕಳೆದುಕೊಂಡು ಅಳುತ್ತಾ ಬರಿಗೈಯಲ್ಲಿ ಅಪ್ಪನ ಮುಂದೆ ನಿಂತಿದ್ದೆ. ಬಹುಶಃ ಅಂದು ಅಪ್ಪ ನನಗೆ ಬೈದು ನೀನು ಮನೆಗೆ ಬರಲೇಬೇಡ ಎಂದು ಹೇಳಿದ್ದರೆ ನಾನು ಇಂದು ಏನಾದರೂ ಮೂರು ಕಾಸು ಸಂಪಾದಿಸುತ್ತಿದ್ದೆನೋ ಏನೋ.. ಆದರೆ ಅವರ ರಕ್ತದ ಸಂಬಂಧ ಹಾಗೆ ಹೇಳಲು ಬಿಡಬೇಕಲ್ಲ.. ಮಗನೇ ಬಾ ನಾನು ಜೀವಂತವಾಗಿರುವವರೆಗೂ ನಿನಗೆ ನಾನು ಎರಡು ಹೊತ್ತು ಅನ್ನ ಹಾಕಲಾರೆನೆ ಎಂದು ಬಿಗಿದಪ್ಪಿ ಬರಮಾಡಿಕೊಂಡರು.. ಅಪ್ಪ ಮಾಡಿಟ್ಟ ಆಸ್ತಿಯನ್ನು ಮಗ ನುಂಗಿದ ಅಂತಾರಲ್ಲ.. ಬಹುಶಃ ನನ್ನನ್ನು ನೋಡಿಯೇ ಆ ಮಾತು ಹೇಳಿರಬೇಕು.
ಅಂದಿನಿಂದ ಇನ್ನೊಂದೆರಡು ತಿಂಗಳು ಮನೆಯಲ್ಲೇ ತಿಂದುಂಡುಕೊಂಡು ಆರಾಮವಾಗಿ ಜೀವನ ನಡೆಸುತ್ತಿದ್ದೆ. ಅದೇನಾಯ್ತೋ ಗೊತ್ತಿಲ್ಲ ಹತಾತ್ತನೇ ಬೆಂಗಳೂರಿಗೆ ಹೊರಟು ನಿಂತು ಬಿಟ್ಟೆ, ೧೫ ಸಾವಿರ ಸಂಬಳದ ಕೆಲಸ ಬಿಟ್ಟು ೫ ಸಾವಿರ ಸಂಬಳಕ್ಕಾಗಿ ಅದೊಂದು ವಾರ್ತಾ ವಾಹಿತಿನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ಅಲ್ಲೋ ತಿಂಗಳಿಗೆ ಸರಿಯಾಗಿ ಸಂಬಳ ಸಿಗಲ್ಲ,ಕೆಲವೊಮ್ಮೆ ಊಟ ತಿಂಡಿಗೂ ಪರದಾಟ ಏನಾದ್ರೂ ಮಾಡೋಣ ಎಂದರೆ ಅದೇ ಭಯ..!!! ಆ ಸಮಯದಲ್ಲಿ ದೇವಮಾನವ ಯಾರಾದ್ರೂ ಸಿಕ್ಕಿದ್ರೆ ಅದು ಮಧು ಮಾತ್ರ, ಇರಲು ಒಂದು ಸೂರು, ೩ ಹೊತ್ತಿನ ಊಟಕ್ಕೆ ತೊಂದರೆ ಇಲ್ಲದ ಬದುಕು. ತಿಂಗಳ ಬಾಡಿಗೆ ಅದೂ ಗೆಳೆಯರ ಒತ್ತಾಯದಿಂದ ಆತ ನನ್ನ ಬಳಿ ಕೇಳಿದ್ದ ಅಷ್ಟೇ..

 ಇದೇ ವೇಳೆ ಒಕ್ಕರಿಸಿಕೊಂಡಿತು ನೋಡಿ, ಮಹಾಮಾರಿ, ಮಹಾಮೃತ್ಯು, ಅದೇನೋ ಪಿಶಾಚಿ ಕೊರೊನಾ.. ಅದೆಷ್ಟು ಜನರ ಜೀವನ ಹಾಳು ಮಾಡಿದೆಯೋ ಗೊತ್ತಿಲ್ಲ ನನ್ನ ಜೀವನ ಹಾಳು ಮಾಡಿದ್ದಂತೂ ಸ್ಪಷ್ಟ. ಕೊರೊನಾ ಪ್ರಾರಂಭದ ವೇಳೆ ಸಂಬಳ ನನಗೆ ೫ ಸಾವಿರದಿಂದ ೧೨ಸಾವಿರಕ್ಕೆ ಏರಿಕೆ ಆಗಿತ್ತು. ಆಗಿದ್ದಾಗಲಿ ತಿಂಗಳಿಗೆ ೧ ಸಾವಿರ ಆದರೂ ಉಳಿಸೋಣ ಎಂದುಕೊAಡು ಇದ್ದವನಿಗೆ ಕರೊನಾ ಅಕ್ಷರಶಃ ದೊಡ್ಡ ಹೊಡೆತ ನೀಡಿತ್ತು. ಎಲ್ಲರಿಗೂ ವರ್ಕ್ ಫ್ರಂ ಹೋಂ ಘೋಷಣೆ ಆಗಿತ್ತಲ್ಲ, ಎಲ್ಲರೂ ಊರಿಗೆ ಹೊರಟು ನಿಂತಾಗ ರೂಮಲ್ಲಿ ಏಕಾಂಗಿ ಬದುಕು.. ಹೋಟೆಲ್ ಅನ್ನ ತಿನ್ನು, ದಿನಾ ೧೪ ಕಿ.ಮೀ ಪ್ರಯಾಣ ಮಾಡು. ಇನ್ನೆಲ್ಲಿಯ ಉಳಿತಾಯ???? ಇಷ್ಟೇಲ್ಲಾ ಸಮಸ್ಯೆಗಳ ನಡುವೆ ಅದೇನೋ ಗೊತ್ತಿಲ್ಲ ಅಪ್ಪ ನನ್ನ ಕೈಬಿಟ್ಟಿರಲಿಲ್ಲ ಏನಾದರೂ ಬೇಕಾದ್ರೆ ಕಾಲ್ ಮಾಡು ಅಂತಿದ್ರು. ಆದರೆ ನಾನು ಮಾಡಿರಲಿಲ್ಲವೇನೋ... ಇಷ್ಟೆಲ್ಲಾ ಕಷ್ಟಗಳ ನಡುವೆ ಅತಿ ಆಸೆ ಗತಿ ಕೇಡು ಎಂಬಂತೆ, ನಾನು ಕೆಲಸ ಮಾಡ್ತಿದ್ದ ಕಂಪನಿಯ ನಿರ್ದೇಶಕ ಭಂಡ ಕೆಲಸಕ್ಕೆ ಕೈ ಹಾಕಿದ್ದ, ಇತ್ತ ಬರಬೇಕಿದ್ದ ಸುಮಾರು ೨ ತಿಂಗಳ ಸಂಬಳ ಬಾಕಿ ಇತ್ತು ಅತ್ತ ಸಿಎಂ ಪುತ್ರನ ಹಗರಣ ಬಯಲಿಗೆ ಎಳೆಯುತ್ತೇನೆ ಎಂದು ಪುಂಗುತ್ತಾ ಅದೊಂದು ಕಾರ್ಯಕ್ರಮ ಶುರು ಮಾಡಿದ, ಶುರು ಮಾಡಿದ್ದೇ ತಡ. ಖೇಲ್ ಖತಂ ನಾಟಕ್ ಬಂದ್.. ಎಲ್ಲಿ ಇತ್ತ ಸಂಬಳವೂ ಇಲ್ಲ, ಅತ್ತ ಎಂಡಿ ಅನ್ನಿಸಿಕೊಂಡವ ಪರಾರಿ.. ಏನು ಮಾಡುವುದು ಎಂದು ತಿಳಿಯದೇ ಕಳೆದುಹೋಗಿಬಿಟ್ಟೆ. ಅದೇ ಸಮಯದಲ್ಲಿ ಇನ್ನೊಬ್ಬರು ಕರೆದು ಕೆಲಸವನ್ನೇನೋ ಕೊಟ್ಟರು ಆದ್ರೆ ಸಂಬಳ.. ಹೆಚ್ಚೇನೂ ಇಲ್ಲ ೧೫ ಸಾವಿರ ಕೊಡಿಸುವ ವ್ಯವಸ್ಥೆ ಮಾಡಿಸಿದ್ರು. ಜೀವನ ಹೇಗೋ ಸಾಗಿತ್ತು.
ಹಾ ಇಷ್ಟೆಲ್ಲಾ ಮಾತುಕತೆ ಯಾಕೆ..? ಅಲ್ಲ ಎಂದೂ ಬರೆಯದ ನಾನು ಇಷ್ಟು ಬರೆದಿದ್ದು ಏಕೆ..? ನಂಗೆ ಗೊತ್ತಿಲ್ಲ ಕಥೆ ಹೇಳಲು ಹೊರಟರೆ ಇನ್ನೂ ಇರಬಹುದು ಆದರೆ ಇಂದಿಗೆ ಕಥೆಗೆ ಅಲ್ಪವಿರಾಮ ಇಟ್ಟು ಮುಖ್ಯಭೂಮಿಕೆಗೆ ಬರೋಣ..
ಜಂಜಾಟ.. ಎಲ್ಲರಿಗೂ ಇದ್ದದ್ದೇ, ಈ ಜಂಜಾಟದ ಮಧ್ಯೆ ನನ್ನತನವನ್ನು ನಾನು ಮರೆತೆ ಎಂದು ಅನ್ನಿಸುತ್ತಿದೆ. ಅದೇನು ಮಾಡಲಿ ನನ್ನತನವನ್ನು ಎಂದೋ ನಾನು ಅಡವಿಟ್ಟಾಗಿದೆ. ಪುಸ್ತಕ, ಓದು ಅಂದರೆ ನನಗೆ ಎಲ್ಲಿಲ್ಲದ ಗೀಳು, ಪ್ರೀತಿ. ಆದರೆ ಪುಸ್ತಕ ಓದುವುದು ಬಿಡಿ ಒಂದು ಪುಟ ತಿರುವದೇ ತಿಂಗಳು ೬ ಕಳೆದಿರಬಹುದೇನೋ.. ಪ್ರತಿದಿನ ಯಂತ್ರದಂತೆ ಕಚೇರಿಗೆ ಹೋಗು, ಅದೇ ಕೀಬೋರ್ಡ್ ಮೇಲೆ ಕೈಯಾಡಿಸು, ಮತ್ತೆ ಬಂದು ಮಲಗು... ಇಷ್ಟೇ ಜೀವನ ಎಂದು ಆಗಿಬಿಟ್ಟಿದೆ. ಭೈರಪ್ಪನವರ ಕಾದಂಬರಿಗಳನ್ನು ಆಸ್ಥೆಯಿಂದ ಓದುತ್ತಿದ್ದ ನಾನು ಪುಸ್ತಕ ಕಂಡರೆ ಮಾರುದ್ಧ ಓಡುವಂತಾಗಿದೆ. ಬದುಕು ಗೊಜಲಾಗಿದೆ. ಅಕ್ಷರಗಳೆಲ್ಲವೂ ಅಷ್ಪಷ್ಟವಾಗಿದೆ. ಅದು ಯಾಕೆ ಇಷ್ಟು ಆಲಸ್ಯವೋ ಗೊತ್ತಿಲ್ಲ. ಸ್ಥಳ ಬದಲಾದರೂ ವಿಧಿ ಬದಲಾಗದು. ಮೊಬೈಲ್, ಕಂಪ್ಯೂಟರ್ ನನ್ನನ್ನು ಕೆಡಿಸಿತಾ..? ಅಥವಾ ನಾನು ಅಷ್ಟು ಕಳೆದುಹೋದೆನಾ..? ಉತ್ತರ ಇಂದಿಗೂ ಶೂನ್ಯ... ಆಗಿದ್ದಾಗಲಿ ಮತ್ತೆ ಹಳೆ ಬದುಕಿನತ್ತ ವಾಲಬೇಕಿದೆ, ಮತ್ತೆ ಮೇಲೆ ಏಳಬೇಕಿದೆ. ಮತ್ತೆ ಅದೇನೋ ಹಚ್ಚುತನದ ಬೆನ್ನು ಹತ್ತಬೇಕಿದೆ. ಬೆಂಗಳೂರಲ್ಲಿ ನೋಡಬೇಕಾದ ಸ್ಥಳಗಳು ಬಹಳಷ್ಟಿದೆ. ಅವೆಲ್ಲವನ್ನು ನೋಡಬೇಕಿದೆ, ಜತೆಗೆ ಕಳೆದುಹೋದ ಕ್ಷಣಗಳ ಬಗ್ಗೆ ಮೆಲುಕು ಹಾಕಬೇಕಿದೆ..
ನಿಲುಕದ ನಕ್ಷತ್ರಗಳನ್ನು ಹೇಗಾದರೂ ಮಾಡಿ ಹಿಡಿಯಲೇಬೇಕಿದೆ..
ಜೀವನ ತೂಗುಯ್ಯಾಲೆ..
ಒಮ್ಮೆ ಏಳು ಮತ್ತೊಮ್ಮೆ ಬೀಳು..
ಒಂದು ದಡದಿಂದ ಮತ್ತೊಂದು ದಡ ಸೇರುವ ಮುನ್ನ
ತೂಗುಯ್ಯಾಲೆಯೇ ಮುರಿದು ಬಿದ್ದರೆ..?
ಹಹ್ಹಾ.. ಉಯ್ಯಾಲೆಯೂ ಇಲ್ಲ, ಬದುಕಿಗೆ ಅರ್ಥವೂ ಇಲ್ಲ..
ನಿಲ್ಲು ಆಲಸ್ಯವನ್ನು ಮೀರಿ ನಿಲ್ಲು..
ಗೆಲ್ಲು, ವಿರೋಧಿಗಳ ವಿಶ್ವಾಸವನ್ನೂ ಗೆಲ್ಲು..
ಒಳಿತಾಗಲಿ..
ಇಂತಿ,
ಲೇಖನಿಯ ಸಂಗಾತಿ..


ಓದದೇ,ಬರೆಯದೇ, ಬರಹದ ಶೈಲಿಯಲ್ಲಿ ವ್ಯತ್ಯಾಸವಾಗಿರಬಹುದು. ಒಂದಷ್ಟು ತಿಂಗಳುಗಳ ಬಳಿಕ ಬರೆಯಲು ಪ್ರೋತ್ಸಾಹಿಸಿದ ನನ್ನ ಹಿತೈಷಿಗೆ ಪ್ರೀತಿಯ ನಮನಗಳು..!

ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!

ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...