Saturday, 24 September 2022

ಮತ್ತೆ ನೆನಪಾಗಬೇಕಿದೆ ರಾಣಿ ಚೆನ್ನಭೈರಾದೇವಿ...!!! ಇತಿಹಾಸವೂ ಮರೆತ ರಾಣಿಯ ಪೌರುಷದ ಕಥೆಯಿದು..!

 


ಕೆಲವೊಮ್ಮೆ ಭಾರತದಲ್ಲಿ ಆಳ್ವಿಕೆ ನಡೆಸಿದ ಸರ್ಕಾರಗಳ ಮೇಲೆ ನಿಜವಾಗಿಯೂ ಜಿಗುಪ್ಸೆ ಬಂದು ಬಿಡುತ್ತದೆ. ವಿದೇಶಗಳಲ್ಲಿರುವಂತೆ ಭಾರತದಲ್ಲಿ ಇತಿಹಾಸವನ್ನು ಸಂರಕ್ಷಿಸಿ ಇಡುತ್ತಿಲ್ಲವಲ್ಲ ಎಂದು ಬೇಸರವಾಗುತ್ತದೆ. ಭಾರತದಲ್ಲಿ ಇತಿಹಾಸದ ಬಗ್ಗೆ ಯಾವ ಮಟ್ಟಿಗೆ ತಾತ್ಸಾರ ಇದೆ ಅಂದ್ರೆ ಇತಿಹಾಸ ಅಂದ್ರೆ ಕೇವಲ ಗಾಂಧಿ, ಮೊಘಲ್‌ ವಂಶ, ಆದಿಲಶಾಹಿಗಳು, ಟಿಪ್ಪು ಸುಲ್ತಾನ.. ಇಷ್ಟೇ...!!!!!


ಆದ್ರೆ ಅದಕ್ಕೂ ಮೀರಿದ ಹಲವು ಐತಿಹಾಸಿಕ ಕುರುಹುಗಳು ಭಾರತದಲ್ಲಿ ಇದೆ ಅಂದರೆ ನಂಬಲೇಬೇಕು..!!

ನಿಮ್ಮಲ್ಲಿ ನೀವು ಪ್ರಶ್ನೆ ಮಾಡಿಕೊಳ್ಳಿ, ಗೇರುಸೊಪ್ಪೆಯಲ್ಲಿ ರಾಣಿ ಚೆನ್ನಭೈರಾದೇವಿ ಎಂಬವಳು ಒಬ್ಬಳು ಇದ್ದಳು ಎಂದು ನಮ್ಮ ನಿಮ್ಮೆಲ್ಲರಲ್ಲಿ ಅದೆಷ್ಟು ಜನರಿಗೆ ಗೊತ್ತು..? 


ಹೌದು ರಾಣಿ ಚೆನ್ನಭೈರಾದೇವಿಯ ಇತಿಹಾಸ ನನಗೂ ಗೊತ್ತಿಲ್ಲ ಆದ್ರೆ ಪ್ರಾಯಶಃ ನಾನು ದಿಗ್ವಿಜಯ ವಾಹಿನಿಯಲ್ಲಿ ಕೆಲಸ ಮಾಡ್ತಿದ್ದಾಗ ನನ್ನ ಜತೆ ಕೆಲಸ ಮಾಡ್ತಿದ್ದ ಶೈಲಜಾ ಅವರು ಚೆನ್ನಭೈರಾದೇವಿಯ ಬಗ್ಗೆ ಕಥೆಗಳನ್ನ ಹೇಳ್ತಾ ಇದ್ರು. ಆ ಕಥೆಗಳನ್ನ ಕೇಳ್ತಾ ಇದ್ರೆ ಮೈ ರೋಮಾಂಚನ ಅನ್ನಿಸೋದು. ಒಬ್ಬ ರಾಣಿ ಪೋರ್ಚುಗೀಸರು, ಕೆಳದಿ ಅರಸರು, ಬಿಜಾಪುರದ ಸುಲ್ತಾನರ ಆಳ್ವಿಕೆಯ ನಡುವೆಯೇ 54 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಳು ಎಂದರೆ ನಿಜವಾಗಿಯೂ ನಂಬಲು ಅಸಾಧ್ಯ..!



ಇತಿಹಾಸದ ಪ್ರಕಾರ ವಿಜಯನಗರದ ಸಾಳುವ ವಂಶದ ಒಂದು ಶಾಖೆಯ ಅರಸರು ಗೇರುಸೊಪ್ಪೆಯನ್ನು ಆಳುತ್ತಿದ್ದರೆ ಮತ್ತೊಂದು ವಂಶದವರು ಹಾಡುವಳ್ಳಿಯನ್ನು ಆಳುತ್ತಿದ್ದರು. ಗೇರುಸೊಪ್ಪೆಯ ಅರಸ ಇಮ್ಮಡಿ ದೇವರಾಯ (1515-50) ಪೋರ್ಚುಗೀಸರ ಮೇಲೆ ಯುದ್ಧಮಾಡಿದ. ಮಡಗೋವೆಯ ಬಳಿ ೧೫೪೨ರಲ್ಲಿ ನಡೆದ ಭೀಕರ ಯುದ್ಧದಲ್ಲಿ ಆತ ಸೋಲನ್ನಪ್ಪಿದ ಬಳಿಕ ಪೋರ್ಚುಗೀಸರು ಆತನ ರಾಜಧಾನಿ ಭಟ್ಕಳವನ್ನು ಸುಟ್ಟು ಹಾಕಿದರು. ಆತನ ಪತ್ನಿ ಚೆನ್ನಾದೇವಿಯ ತಂಗಿಯೇ ಚೆನ್ನಭೈರಾದೇವಿ. ಪೋರ್ಚುಗೀಸರ ಜೊತೆಗಿನ ಒಪ್ಪಂದದಂತೆ ಕಪ್ಪವನ್ನು ಕೊಡಲಿಲ್ಲವೆಂದೂ,  ಮಹಮದೀಯರ ಹಡಗುಗಳಿಗೆ ಭಟ್ಕಳ ಬಂದರಿನಲ್ಲಿ ಆಶ್ರಯ ಕೊಟ್ಟಿರುವಳೆಂದು ಆರೋಪಿಸಿ, ಪೋರ್ಚುಗೀಸ್ ಕಪ್ತಾನ ಆಲ್ಫನ್ಸೋ ಡಿಸೋಜಾ ಭಟ್ಕಳದ ಮೇಲೆ ದಾಳಿ ಮಾಡಿ ರಾಣಿಯನ್ನು ಸೋಲಿಸಿ ಭಟ್ಕಳವನ್ನು ಸುಟ್ಟುಹಾಕಿದ. ಅಕ್ಕನ ನಂತರ ತಂಗಿ ಚೆನ್ನಭೈರಾದೇವಿಗೆ ಹಾಡುವಳ್ಳಿಯ ಜೊತೆಗೆ ಗೇರುಸೊಪ್ಪೆಯ ಅಧಿಕಾರವೂ ದೊರಕಿತು. 

ಚೆನ್ನಭೈರಾದೇವಿ ದಕ್ಷಿಣ ಗೋವಾದಿಂದ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಭಟ್ಕಳ, ಮಲ್ಪೆ,ಹೊನ್ನಾವರ, ಮಿರ್ಜಾನ್, ಅಂಕೋಲಾ, ಬೈಂದೂರು, ಕಾರವಾರಗಳಲ್ಲಿ ಆಳ್ವಿಕೆ ನಡೆಸುತ್ತಿದ್ದಳು ಎಂಬ ಮಾಹಿತಿ ಇದೆ. ಕರಾವಳಿಯ ಈ ಪ್ರಾಂತ್ಯಗಳ ಜತೆ ಘಟ್ಟದ ಮೇಲಿನ ಭಾರಂಗಿ, ಮರಬಿಡಿ, ಕರೂರು,ಹನ್ನಾರ, ಬಿದನೂರು, ಸೌಳನಾಡು, ಆವಿನಹಳ್ಳಿ ಸೀಮೆಗಳು ಚೆನ್ನಭೈರಾದೇವಿಯ ಆಡಳಿತಕ್ಕೆ ಒಳಪಟ್ಟಿದ್ದವು ಎಂದು ಹೇಳಲಾಗುತ್ತಿದೆ. ಚೆನ್ನಭೈರಾದೇವಿಯ ಆಳ್ವಿಕೆಯ ಅವಧಿಯಲ್ಲಿ ಯುರೋಪಿನ ರಾಷ್ಟ್ರಗಳಿಗೆ ಕಾಳುಮೆಣಸು, ದಾಲ್ಚಿನ್ನಿ, ಅಡಿಕೆ, ಶುಂಠಿ, ಗಂಧಗಳನ್ನು ರಫ್ತು ಮಾಡಲಾಗುತ್ತಿತ್ತಂತೆ.


 ಚೆನ್ನಭೈರಾದೇವಿಯ ಕಾಲದ ಮಿರ್ಜಾನ್ ಕೋಟೆ, ಕಾನೂರು ಕೋಟೆಗಳು ಈಗಲೂ ಕಾಣಬಹುದು ಆದ್ರೆ ಕಾಡಿನ ನಡುವೆ ಇರುವ ಈ ಕೋಟೆ ಸರಿಯಾದ ನಿರ್ವಹಣೆ ಇಲ್ಲದೇ ಪಾಳುಬಿದ್ದಿದೆ. ಪೋರ್ಚುಗೀಸರ ಮತಾಂತರದಿಂದ ತಪ್ಪಿಸಿಕೊಳ್ಳಲು ಚೆನ್ನಭೈರಾದೇವಿಯ ರಾಜ್ಯಕ್ಕೆ ಆಶ್ರಯ ಕೋರಿ ಬಂದ ಸಾರಸ್ವತ ಬ್ರಾಹ್ಮಣರು ಮತ್ತು ಕೊಂಕಣಿಗರಿಗೆ ರಾಣಿ ಚೆನ್ನಭೈರಾದೇವಿ ತನ್ನ ರಾಜ್ಯದಲ್ಲಿ ಆಶ್ರಯ ನೀಡಿದ್ದಳು ಎಂದು ಹೇಳಲಾಗ್ತಿದೆ. ಜೈನ ಮತದವಳಾದ ರಾಣಿ ಅನೇಕ ಶೈವ, ವೈಷ್ಣವ ಮತ್ತು ಶಕ್ತಿ ದೇಗುಲಗಳನ್ನು ಕಟ್ಟಲು, ಜೀರ್ಣೋದ್ದಾರಕ್ಕೂ ನೆರವು ನೀಡಿದ್ದಳು ಎಂದು ಹೇಳಲಾಗುತ್ತಿದೆ . ಬಿದರೂರು ಅಥವಾ ವೇಣುಪುರದ ಯೋಗಾನರಸಿಂಹ ಸ್ವಾಮಿ ದೇಗುಲ ಮತ್ತು ವರ್ಧಮಾನ ಬಸದಿಗಳ ಜೀರ್ಣೋದ್ದಾರಕ್ಕೂ ರಾಣಿ ಚೆನ್ನಭೈರಾದೇವಿ ನೆರವು ನೀಡಿದ್ದಳು. "ಕರ್ನಾಟಕ ಶಬ್ದಾನುಶಾಸನ " ಎಂಬ ವ್ಯಾಕರಣ ಗ್ರಂಥ ರಚನಾಕಾರ, ಸ್ವಾದಿ ದಿಗಂಬರ ಜೈನ ಮಠದ ಯತಿ ಅಭಿನವ ಭಟ್ಟಾಕಲಂಕರು ಈ ರಾಣಿಯ ಆಶ್ರಯದಲ್ಲಿದ್ದರು ಎಂಬ ಐಹಿತ್ಯವಿದೆ. 

ರಾಣಿ ಚೆನ್ನಭೈರಾದೇವಿಯ ಆಳ್ವಿಕೆಯ ಕಾಲದಲ್ಲಿ ಈಗಿನ ಕೇರಳದ ಕೊಚ್ಚಿನ್‌ ಬಂದರು ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಿತ್ತು. ಕೊಚ್ಚಿನ್‌ ಬಂದರಿನ ಕ್ಯಾಪ್ಟನ್‌ ಪೋರ್ಚುಗಲ್‌ನ ಆಲ್ಫೋನ್ಸೋ ಮೆಕ್ಸಿಯ ಎಂಬ ಪ್ರಾಂತ್ಯದ ರಾಜನಿಗೆ ಬರೆದ ಪತ್ರದಲ್ಲಿ "ಬಟಿಕಳ(ಭಟ್ಕಳ) ಮತ್ತು ಗೋವಾಗಳ ನಡುವೆ ಒನೋರ್(ಕಾನೂರು),ಮರ್ಜೆನ್(ಮಿರ್ಜಾನ್) ಮತ್ತು ಅಂಕೋಲಾಗಳೆಂಬ ಜಾಗಗಳಿವೆ. ಅವುಗಳಿಂದ ವಾರ್ಷಿಕ ೫೦೦೦ ಕ್ರೂಜೇಡೋಸ್(ಹದಿನೈದನೆದ ಶತಮಾನದಲ್ಲಿದ್ದ ಪೋರ್ಚುಗೀಸ್ ಬಂಗಾರದ ನಾಣ್ಯ)ಗಳಷ್ಟು ಕಾಳು ಮೆಣಸು ವಾರ್ಷಿಕವಾಗಿ ರಫ್ತಾಗುತ್ತಿದೆ ಎಂದು ನಾನು ಕೇಳಿದ್ದೇನೆ. ಈ ಜಾಗಗಳು ಗೇರುಸೊಪ್ಪೆಯ ರಾಣಿ(ಚೆನ್ನಭೈರಾದೇವಿ)ಯ ಆಳ್ವಿಕೆಗೆ ಒಳಪಟ್ಟಿದೆ. ಈ ಕಾಳುಮೆಣಸು ಕೊಚ್ಚಿನ್ನಿನ ಕಾಳುಮೆಣಸಿಗಿಂತ ದಪ್ಪವೂ, ಕಮ್ಮಿ ತೂಕ ಮತ್ತು ಖಾರದ್ದೂ ಆಗಿವೆ. ಈ ಜಾಗಗಳನ್ನು ನಮ್ಮ ವಶಕ್ಕೆ ಪಡೆಯಬೇಕು" ಎಂದು ಬರೆಯುತ್ತಾನೆ. ಆ ಬಳಿಕ 1606ರಲ್ಲಿ ಕೆಳದಿ ಮತ್ತು ಬಿಳಗಿಯ ಅರಸರು ಒಟ್ಟು ಸೇರಿ ಗೇರುಸೊಪ್ಪೆಯ ಮೇಲೆ ಆಕ್ರಮಣ ಮಾಡುತ್ತಾರೆ. ಈ ಸಂದರ್ಭದಲ್ಲಿ ನಡೆದ  ಯುದ್ಧದಲ್ಲಿ ತನ್ನ ಸೇನಾಧಿಪತಿ ಗೊಂಡನಾಯಕನ ಮೋಸದಿಂದಾಗಿ ರಾಣಿ ಚೆನ್ನಭೈರಾದೇವಿ ಸೋಲುತ್ತಾಳೆ. ಈ ಸೋಲಿನ ಬಳಿಕ ಗೇರುಸೊಪ್ಪೆ ಕೆಳದಿ ಸಾಮ್ರಾಜ್ಯದ ಭಾಗವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

 ಇವಿಷ್ಟು ಮಾತ್ರವಲ್ಲದೇ ರಾಣಿ ಚೆನ್ನಭೈರಾದೇವಿ ತನ್ನ ಆಳ್ವಿಕೆಯ ಕಾಲದಲ್ಲಿ ಅನೇಕ ಯುದ್ಧಗಳನ್ನು ನಡೆಸಿದ್ದರು ಎಂದು ಹೇಳಲಾಗಿದೆ. 1559 ಮತ್ತು 1570ರಲ್ಲಿ ಪೋರ್ಚುಗೀಸರ ವಿರುದ್ಧ ನಡೆದ ಯುದ್ಧಗಳಲ್ಲಿ ರಾಣಿ ಚೆನ್ನಭೈರಾದೇವಿ ಗೆಲುವು ಸಾಧಿಸಿದ್ದಳು ಎಂದು ಹೇಳಲಾಗಿದೆ. ಇದಷ್ಟೇ ಅಲ್ಲದೇ 1671ರಲ್ಲಿ ನಡೆದ ಯದ್ಧದ ಸಂಯುಕ್ತ ಸೇನೆಯ ನಾಯಕತ್ವವನ್ನು ರಾಣಿ ಚೆನ್ನಭೈರಾದೇವಿ ವಹಿಸಿದ್ದಳು ಎಂದು ಹೇಳಲಾಗುತ್ತಿದೆ, ಈ ಸಂಯುಕ್ತ ಸೇನೆಗೆ ಗುಜರಾತ್‌, ಬೀದರ್‌ನ ಸುಲ್ತಾನರ ಬಿಜಾಪುರದ ಆದಿಲ್‌ಶಾಹಿಗಳು ಹಾಗೂ ಕೇರಳದ ಜಾಮೋರಿನ್‌ ದೊರೆಗಳನ್ನು ಒಳಗೊಂಡಂತೆ ಹಲವು ರಾಜರು ಈ ಸಂಯುಕ್ತ ಸೇನೆಯಲ್ಲಿದ್ದರು ಎಂಬ ಉಲ್ಲೇಖವಿದೆ.



 ಈ ಕರುನಾಡಿನ ಹೆಮ್ಮೆಯ ರಾಣಿಯ ಕುರಿತಾಗಿ ವಿದೇಶದಲ್ಲಿರುವ ಕೃತಿಗಳಲ್ಲಿ ಉಲ್ಲೇಖಗಳಿವೆ. ಅಮೆರಿಕದ ಟೆಕ್ಸಾಸ್‌ ವಿಶ್ವವಿದ್ಯಾನಿಲಯದ ಆಂಗ್ಲಭಾಷಾ ಪ್ರಾಧ್ಯಾಪಕಿ ಮತ್ತು ದಕ್ಷಿಣ ಏಷ್ಯಾ ಇನ್ಸ್ಟಿಟ್ಯೂಟಿನಲ್ಲಿ ತೌಲನಿಕ ಸಾಹಿತ್ಯ ಮುಖ್ಯಸ್ಥೆಯಾಗಿರುವ ಹನ್ನಾಚಾಪೆಲ್ಲೆ ವೋಜಿಹೋಸ್ಕಿ ತಮ್ಮ ಪ್ರಬಂಧಗಳಲ್ಲಿ ರಾಣಿ ಚೆನ್ನಭೈರಾದೇವಿಯ ಸಾಹಸಗಳನ್ನು ಉಲ್ಲೇಖಿಸಿದ್ದಾರೆ. "ರಾಣಿ ಚೆನ್ನಭೈರಾದೇವಿಯೂ ಇಂಗ್ಲೆಂಡ್‌ ರಾಣಿ ಎಲಿಜಬೆತ್‌ರ ಸಮಕಾಲೀನರು ಮತ್ತು ಅನೇಕ ವಿಚಾರಗಳಲ್ಲಿ ರಾಣಿ ಎಲಿಜಬೆತ್‌ಗೂ ಮಿಗಿಲಾದವರು, ತನ್ನ ಚಾಣಾಕ್ಷತನದ ಮೈತ್ರಿಗಳು ಮತ್ತು ತನ್ನ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮೇಲುಗೈಯನ್ನ ಬಿಟ್ಟುಕೊಡದೇ ಸಮರ್ಥವಾಗಿ ಆಳ್ವಿಕೆ ನಡೆಸಿದ್ದಳು" ಎಂದು ಬರೆದಿದ್ದಾರೆ. ಇಷ್ಟು ಮಾತ್ರವಲ್ಲದೇ 1623ರಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್‌ ಪ್ರವಾಸಿಗ ಪೀಟ್ರೋ ಡೆಲ್ಲಾವಿಲ್ಲೆ ಚೆನ್ನಭೈರಾದೇವಿಯ ಕಥೆಗಳನ್ನು ತನ್ನ ಸಾಹಸ ಕಥನಗಳಲ್ಲಿ ದಾಖಲಿಸುತ್ತಾನೆ. 



ಯುದ್ಧದಲ್ಲಿ ರಾಣಿ ಚೆನ್ನಭೈರಾದೇವಿಯನ್ನು ಮೋಸದಲ್ಲಿ ಸೆರೆಹಿಡಿದ ಕೆಳದಿ ನಾಯಕ ವೆಂಕಟಪ್ಪನಾಯಕ ಆಕೆಯನ್ನ ಸಾವಿನವರೆಗೂ ನಗಿರೆಯ ಸೆರೆಮನೆಯಲ್ಲಿ ಹಿಡಿದಿಟ್ಟಿದ್ದ ಮತ್ತು ತನಗೆ ಸಹಾಯ ಮಾಡಿದ ಗೊಂಡನಾಯಕನನ್ನು ವೆಂಕಟಪ್ಪನಾಯಕ ಕೊಲ್ಲಿಸಿದ ಎಂದು ಇತಿಹಾಸಕಾರ, ಲೇಖಕ, ಡಾ | ಗಜಾನನ ಶರ್ಮ ತಮ್ಮ ಪುಸ್ತಕ ಚೆನ್ನಭೈರಾದೇವಿಯಲ್ಲಿ ಉಲ್ಲೇಖಿಸುತ್ತಾರೆ. ಅದೇನೆ ಇರಲಿ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ರಾಣಿ ಚೆನ್ನಭೈರಾದೇವಿಯ ಬಗ್ಗೆ ನಮ್ಮಲ್ಲೇ ಅನೇಕರಿಗೆ ತಿಳಿಯದಿರುವುದು ವಿಪರ್ಯಾಸವೇ ಸರಿ.!!! ಆಕೆ ಕಟ್ಟಿಸಿದ ಕಾನೂರಿನ ಕೋಟೆ ಇಂದಿಗೂ ಪಾಳುಬಿದ್ದು ನಿಧಿಯ ಆಸೆಗೆ ನಿಧಿ ಚೋರರ ಅತಿಯಾಸೆಗೆ ಹಾಳಾಗಿ ಹೋಗಿದೆ. ಮತ್ತು ಅಲ್ಲಿನ ವಿಗ್ರಹಗಳೆಲ್ಲವೂ ಅಳಿವಿನ ಅಂಚಿಗೆ ಹೋಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ.






Thursday, 5 May 2022

ಬದುಕು... ಬದಲಾಗದೇ...?? ಬಣ್ಣವೂ ಬರಲಾರದೇ?

ಜಂಜಾಟದ ಬದುಕಿನಲ್ಲಿ ನಾವು ಅದೆಷ್ಟು ಸಉಂದರ ಕ್ಷಣಗಳನ್ನು ಕಳೆದುಕೊಂಡು ಬಿಡುತ್ತೇವೆ ಅಲ್ವಾ..? ಏಕೋ ಏನೋ ಬದುಕಿನಲ್ಲಿ ಸುಂದರ ಕ್ಷಣಗಳಿಗೆ ಸಮಯವೇ ಇಲ್ಲವೋ ಅಥವಾ ನಾವು ಸಮಯ ಮಾಡಿಕೊಳ್ಳುತ್ತಿಲ್ಲವೋ ಎಂದು ಭಾಸವಾಗುತ್ತಿದೆ. ಜಂಜಾಟಗಳಿಂದಾಗಿ ನಮ್ಮ ಹವ್ಯಾಸಗಳನ್ನು ನಾವು ಹೇಗೆ ಕಳೆದಕೊಂಡುಬಿಡುತ್ತೇವೆ ಎನ್ನವುದಕ್ಕೆ ಸ್ವತಃ ನಾನೇ ಸಾಕ್ಷಿ…!!!

ಹೌದು ಇಂದು ನಾನು ಬರೆಯಹೊರಟಿರುವುದು ನನ್ನ ಸ್ವಂತ ಕಥೆಯೊಂದನ್ನು.. ಒಬ್ಬ ಮಾತನಾಡಲು ಧೈರ್ಯ ಇಲ್ಲದ, ಸರಿಯಾಗಿ ವ್ಯವಹಾರ ಜ್ಞಾನ ಇಲ್ಲದ ನನ್ನದೇ ಕಥೆಯೊಂದನ್ನು..
 ಸುಮಾರು ನಾಲ್ಕು ವರುಷಗಳ ಹಿಂದೆ ಮನಸ್ಸಿನಲ್ಲಿಸಾವಿರಾರು ಕನಸುಗಳನ್ನು ಹೊತ್ತು ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಹತ್ತಿದ್ದೆ. ಕನಸುಗಳೇನೋ ಇತ್ತು ಆದರೆ ನನಸು ಮಾಡುವಂತಹಾ ಮನಸ್ಥತಿ ಬೇಕಲ್ಲ..? ಕಷ್ಟ, ನಷ್ಟ, ಏನೋ ಗೊತ್ತಿಲ್ಲ ಅಂತೂ ಬೆಂಗಳೂರಿಗೆ ಬಂದಿದ್ದಾಯ್ತು, ಜೀವನಕ್ಕೆಂದು ಒಂದು ಕೆಲಸ ಹಿಡಿದಿದೂ ಆಯ್ತು.. ನಾಲ್ಕು ವರ್ಷಗಳಲ್ಲಿ ನೀನು ದುಡಿದ ಹಣ ಎಷ್ಟು? ನಿನ್ನ ಖಾತೆಯಲ್ಲಿರುವ ಉಳಿತಾಯ ಎಷ್ಟು ಎಂದು ಯಾರಾದ್ರೂ ಕೇಳಿದ್ರೆ ಪೆಚ್ಚುಮೋರೆ ಹಾಕುತ್ತಾ ಒಂದು ನಗುವಿನಿಂದ ನಾಚಿಕೆಯಿಂದ ಉತ್ತರಿಸುತ್ತೇನೆ.. ಶೂನ್ಯ.. ಬರಿ ಶೂನ್ಯ ಅಷ್ಟೇ.. ಹಾಗಾದ್ರೆ ದುಡಿದ ಹಣ ಏನು ಮಾಡ್ತಿದ್ದಿ? ಸಿಕ್ಕ ಸಂಬಳ ಏನಾಯ್ತು? ಎಲ್ಲಾ ಪ್ರಶ್ನೆಗಳಿಗೆ ನನ್ನಲ್ಲೇ ಉತ್ತರ ಇಲ್ಲ. 
ಹೌದು ಬೆಂಗಳೂರಲ್ಲಿ ಕೆಲವರನ್ನು ನಂಬಿ ತಪ್ಪು ಮಾಡಿರುವೆ ಏನೋ.. ಇನ್ನೂ ನಂಬುತ್ತಾ ತಪ್ಪು ಮಾಡುತ್ತಿರುವೆ ಏನೋ ಎಂದು ನನಗೆ ಇಂದಿಗೂ ಅನಿಸುತ್ತಿದೆ. ಆದ್ರೆ ಉತ್ತರ, ಇಲ್ಲ.. ಅದೇ ವಿಶ್ವಾಸಘಾತುಕರನ್ನು ನಾನು ಇಂದಿಗೂ ನಂಬುತ್ತಿರುವೆ. ಯಾಕೆ..? ಪ್ರಶ್ನೆಗೆ ಇಂದಿಗೂ ಉತ್ತರ ಇಲ್ಲ..
 ಬಲ್ಲವರು ಹೇಳುವುದುಂಟು ಯಾರಾದರೂ ಒಮ್ಮೆ ಕೆಟ್ಟ ಮೇಲೆ ಪಾಠ ಕಲಿಯುತ್ತಾರೆ ಎಂದು.. ಉಹೂಂ.. ಅದೆಷ್ಟು ಬಾರಿ ನಂಬಿಕೆದ್ರೋಹವಾದರೂ ಅದೇ ನಂಬಿಕೆ ದ್ರೋಹಿಗಳನ್ನು ಮತ್ತೆ ಮತ್ತೆ ನಂಬಿ ಅವರ ಕಷ್ಟಗಳಿಗೆ ಮರುಗುತ್ತೇವಲ್ಲಾ.. ಈ ಬೆಂದು, ಬೇಯುತ್ತಿರುವ ಕಾಂಕ್ರೀಟ್ ಕಾಡಿನಲ್ಲಿ ನಾನು ಮಾಡುತ್ತಿರುವ ಅತಿ ದೊಡ್ಡ ತಪ್ಪು ಅದೇ ಏನೋ.. 
ಇರಲಿ ಈ ಹಿಂದೆ ಬರೆದ ಕೆಲವು ಸಾಲುಗಳಲ್ಲಿ ನನಗಾದ ನಂಬಿಕೆ ದ್ರೋಹವನ್ನು ಹಂಚಿಕೊಂಡಿದ್ದೆ, ಆದರೆ ಅದೇ ಮತ್ತೆ ಮುಂದುವರೆದರೆ..?ಹಹ್ಹಾ.. ಮುಂದುವರೆದರೆ ಏನು ಮುಂದುವರೆಯಿತು.
೩ ವರ್ಷದ ಹಿಂದಿನ ಮಾತು ಸಾಕಪ್ಪಾ ಈ ಬೆಂಗಳೂರು ಸಹವಾಸವೇ ಸಾಕು ಎಂದು ನಾನು ಬೆಂಗಳೂನ್ನು ಬಿಟ್ಟು ಮನಶ್ಶಾಂತಿಯನ್ನು ಅರಸಿ ಹೋಗಿದ್ದೆ. ಮತ್ತೆ ಅಪ್ಪನ ಆಶ್ರಯಕ್ಕೆ ಹೋಗಿದ್ದೆ, ಎಲ್ಲಾ ಕಳೆದುಕೊಂಡು ಅಳುತ್ತಾ ಬರಿಗೈಯಲ್ಲಿ ಅಪ್ಪನ ಮುಂದೆ ನಿಂತಿದ್ದೆ. ಬಹುಶಃ ಅಂದು ಅಪ್ಪ ನನಗೆ ಬೈದು ನೀನು ಮನೆಗೆ ಬರಲೇಬೇಡ ಎಂದು ಹೇಳಿದ್ದರೆ ನಾನು ಇಂದು ಏನಾದರೂ ಮೂರು ಕಾಸು ಸಂಪಾದಿಸುತ್ತಿದ್ದೆನೋ ಏನೋ.. ಆದರೆ ಅವರ ರಕ್ತದ ಸಂಬಂಧ ಹಾಗೆ ಹೇಳಲು ಬಿಡಬೇಕಲ್ಲ.. ಮಗನೇ ಬಾ ನಾನು ಜೀವಂತವಾಗಿರುವವರೆಗೂ ನಿನಗೆ ನಾನು ಎರಡು ಹೊತ್ತು ಅನ್ನ ಹಾಕಲಾರೆನೆ ಎಂದು ಬಿಗಿದಪ್ಪಿ ಬರಮಾಡಿಕೊಂಡರು.. ಅಪ್ಪ ಮಾಡಿಟ್ಟ ಆಸ್ತಿಯನ್ನು ಮಗ ನುಂಗಿದ ಅಂತಾರಲ್ಲ.. ಬಹುಶಃ ನನ್ನನ್ನು ನೋಡಿಯೇ ಆ ಮಾತು ಹೇಳಿರಬೇಕು.
ಅಂದಿನಿಂದ ಇನ್ನೊಂದೆರಡು ತಿಂಗಳು ಮನೆಯಲ್ಲೇ ತಿಂದುಂಡುಕೊಂಡು ಆರಾಮವಾಗಿ ಜೀವನ ನಡೆಸುತ್ತಿದ್ದೆ. ಅದೇನಾಯ್ತೋ ಗೊತ್ತಿಲ್ಲ ಹತಾತ್ತನೇ ಬೆಂಗಳೂರಿಗೆ ಹೊರಟು ನಿಂತು ಬಿಟ್ಟೆ, ೧೫ ಸಾವಿರ ಸಂಬಳದ ಕೆಲಸ ಬಿಟ್ಟು ೫ ಸಾವಿರ ಸಂಬಳಕ್ಕಾಗಿ ಅದೊಂದು ವಾರ್ತಾ ವಾಹಿತಿನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ಅಲ್ಲೋ ತಿಂಗಳಿಗೆ ಸರಿಯಾಗಿ ಸಂಬಳ ಸಿಗಲ್ಲ,ಕೆಲವೊಮ್ಮೆ ಊಟ ತಿಂಡಿಗೂ ಪರದಾಟ ಏನಾದ್ರೂ ಮಾಡೋಣ ಎಂದರೆ ಅದೇ ಭಯ..!!! ಆ ಸಮಯದಲ್ಲಿ ದೇವಮಾನವ ಯಾರಾದ್ರೂ ಸಿಕ್ಕಿದ್ರೆ ಅದು ಮಧು ಮಾತ್ರ, ಇರಲು ಒಂದು ಸೂರು, ೩ ಹೊತ್ತಿನ ಊಟಕ್ಕೆ ತೊಂದರೆ ಇಲ್ಲದ ಬದುಕು. ತಿಂಗಳ ಬಾಡಿಗೆ ಅದೂ ಗೆಳೆಯರ ಒತ್ತಾಯದಿಂದ ಆತ ನನ್ನ ಬಳಿ ಕೇಳಿದ್ದ ಅಷ್ಟೇ..

 ಇದೇ ವೇಳೆ ಒಕ್ಕರಿಸಿಕೊಂಡಿತು ನೋಡಿ, ಮಹಾಮಾರಿ, ಮಹಾಮೃತ್ಯು, ಅದೇನೋ ಪಿಶಾಚಿ ಕೊರೊನಾ.. ಅದೆಷ್ಟು ಜನರ ಜೀವನ ಹಾಳು ಮಾಡಿದೆಯೋ ಗೊತ್ತಿಲ್ಲ ನನ್ನ ಜೀವನ ಹಾಳು ಮಾಡಿದ್ದಂತೂ ಸ್ಪಷ್ಟ. ಕೊರೊನಾ ಪ್ರಾರಂಭದ ವೇಳೆ ಸಂಬಳ ನನಗೆ ೫ ಸಾವಿರದಿಂದ ೧೨ಸಾವಿರಕ್ಕೆ ಏರಿಕೆ ಆಗಿತ್ತು. ಆಗಿದ್ದಾಗಲಿ ತಿಂಗಳಿಗೆ ೧ ಸಾವಿರ ಆದರೂ ಉಳಿಸೋಣ ಎಂದುಕೊAಡು ಇದ್ದವನಿಗೆ ಕರೊನಾ ಅಕ್ಷರಶಃ ದೊಡ್ಡ ಹೊಡೆತ ನೀಡಿತ್ತು. ಎಲ್ಲರಿಗೂ ವರ್ಕ್ ಫ್ರಂ ಹೋಂ ಘೋಷಣೆ ಆಗಿತ್ತಲ್ಲ, ಎಲ್ಲರೂ ಊರಿಗೆ ಹೊರಟು ನಿಂತಾಗ ರೂಮಲ್ಲಿ ಏಕಾಂಗಿ ಬದುಕು.. ಹೋಟೆಲ್ ಅನ್ನ ತಿನ್ನು, ದಿನಾ ೧೪ ಕಿ.ಮೀ ಪ್ರಯಾಣ ಮಾಡು. ಇನ್ನೆಲ್ಲಿಯ ಉಳಿತಾಯ???? ಇಷ್ಟೇಲ್ಲಾ ಸಮಸ್ಯೆಗಳ ನಡುವೆ ಅದೇನೋ ಗೊತ್ತಿಲ್ಲ ಅಪ್ಪ ನನ್ನ ಕೈಬಿಟ್ಟಿರಲಿಲ್ಲ ಏನಾದರೂ ಬೇಕಾದ್ರೆ ಕಾಲ್ ಮಾಡು ಅಂತಿದ್ರು. ಆದರೆ ನಾನು ಮಾಡಿರಲಿಲ್ಲವೇನೋ... ಇಷ್ಟೆಲ್ಲಾ ಕಷ್ಟಗಳ ನಡುವೆ ಅತಿ ಆಸೆ ಗತಿ ಕೇಡು ಎಂಬಂತೆ, ನಾನು ಕೆಲಸ ಮಾಡ್ತಿದ್ದ ಕಂಪನಿಯ ನಿರ್ದೇಶಕ ಭಂಡ ಕೆಲಸಕ್ಕೆ ಕೈ ಹಾಕಿದ್ದ, ಇತ್ತ ಬರಬೇಕಿದ್ದ ಸುಮಾರು ೨ ತಿಂಗಳ ಸಂಬಳ ಬಾಕಿ ಇತ್ತು ಅತ್ತ ಸಿಎಂ ಪುತ್ರನ ಹಗರಣ ಬಯಲಿಗೆ ಎಳೆಯುತ್ತೇನೆ ಎಂದು ಪುಂಗುತ್ತಾ ಅದೊಂದು ಕಾರ್ಯಕ್ರಮ ಶುರು ಮಾಡಿದ, ಶುರು ಮಾಡಿದ್ದೇ ತಡ. ಖೇಲ್ ಖತಂ ನಾಟಕ್ ಬಂದ್.. ಎಲ್ಲಿ ಇತ್ತ ಸಂಬಳವೂ ಇಲ್ಲ, ಅತ್ತ ಎಂಡಿ ಅನ್ನಿಸಿಕೊಂಡವ ಪರಾರಿ.. ಏನು ಮಾಡುವುದು ಎಂದು ತಿಳಿಯದೇ ಕಳೆದುಹೋಗಿಬಿಟ್ಟೆ. ಅದೇ ಸಮಯದಲ್ಲಿ ಇನ್ನೊಬ್ಬರು ಕರೆದು ಕೆಲಸವನ್ನೇನೋ ಕೊಟ್ಟರು ಆದ್ರೆ ಸಂಬಳ.. ಹೆಚ್ಚೇನೂ ಇಲ್ಲ ೧೫ ಸಾವಿರ ಕೊಡಿಸುವ ವ್ಯವಸ್ಥೆ ಮಾಡಿಸಿದ್ರು. ಜೀವನ ಹೇಗೋ ಸಾಗಿತ್ತು.
ಹಾ ಇಷ್ಟೆಲ್ಲಾ ಮಾತುಕತೆ ಯಾಕೆ..? ಅಲ್ಲ ಎಂದೂ ಬರೆಯದ ನಾನು ಇಷ್ಟು ಬರೆದಿದ್ದು ಏಕೆ..? ನಂಗೆ ಗೊತ್ತಿಲ್ಲ ಕಥೆ ಹೇಳಲು ಹೊರಟರೆ ಇನ್ನೂ ಇರಬಹುದು ಆದರೆ ಇಂದಿಗೆ ಕಥೆಗೆ ಅಲ್ಪವಿರಾಮ ಇಟ್ಟು ಮುಖ್ಯಭೂಮಿಕೆಗೆ ಬರೋಣ..
ಜಂಜಾಟ.. ಎಲ್ಲರಿಗೂ ಇದ್ದದ್ದೇ, ಈ ಜಂಜಾಟದ ಮಧ್ಯೆ ನನ್ನತನವನ್ನು ನಾನು ಮರೆತೆ ಎಂದು ಅನ್ನಿಸುತ್ತಿದೆ. ಅದೇನು ಮಾಡಲಿ ನನ್ನತನವನ್ನು ಎಂದೋ ನಾನು ಅಡವಿಟ್ಟಾಗಿದೆ. ಪುಸ್ತಕ, ಓದು ಅಂದರೆ ನನಗೆ ಎಲ್ಲಿಲ್ಲದ ಗೀಳು, ಪ್ರೀತಿ. ಆದರೆ ಪುಸ್ತಕ ಓದುವುದು ಬಿಡಿ ಒಂದು ಪುಟ ತಿರುವದೇ ತಿಂಗಳು ೬ ಕಳೆದಿರಬಹುದೇನೋ.. ಪ್ರತಿದಿನ ಯಂತ್ರದಂತೆ ಕಚೇರಿಗೆ ಹೋಗು, ಅದೇ ಕೀಬೋರ್ಡ್ ಮೇಲೆ ಕೈಯಾಡಿಸು, ಮತ್ತೆ ಬಂದು ಮಲಗು... ಇಷ್ಟೇ ಜೀವನ ಎಂದು ಆಗಿಬಿಟ್ಟಿದೆ. ಭೈರಪ್ಪನವರ ಕಾದಂಬರಿಗಳನ್ನು ಆಸ್ಥೆಯಿಂದ ಓದುತ್ತಿದ್ದ ನಾನು ಪುಸ್ತಕ ಕಂಡರೆ ಮಾರುದ್ಧ ಓಡುವಂತಾಗಿದೆ. ಬದುಕು ಗೊಜಲಾಗಿದೆ. ಅಕ್ಷರಗಳೆಲ್ಲವೂ ಅಷ್ಪಷ್ಟವಾಗಿದೆ. ಅದು ಯಾಕೆ ಇಷ್ಟು ಆಲಸ್ಯವೋ ಗೊತ್ತಿಲ್ಲ. ಸ್ಥಳ ಬದಲಾದರೂ ವಿಧಿ ಬದಲಾಗದು. ಮೊಬೈಲ್, ಕಂಪ್ಯೂಟರ್ ನನ್ನನ್ನು ಕೆಡಿಸಿತಾ..? ಅಥವಾ ನಾನು ಅಷ್ಟು ಕಳೆದುಹೋದೆನಾ..? ಉತ್ತರ ಇಂದಿಗೂ ಶೂನ್ಯ... ಆಗಿದ್ದಾಗಲಿ ಮತ್ತೆ ಹಳೆ ಬದುಕಿನತ್ತ ವಾಲಬೇಕಿದೆ, ಮತ್ತೆ ಮೇಲೆ ಏಳಬೇಕಿದೆ. ಮತ್ತೆ ಅದೇನೋ ಹಚ್ಚುತನದ ಬೆನ್ನು ಹತ್ತಬೇಕಿದೆ. ಬೆಂಗಳೂರಲ್ಲಿ ನೋಡಬೇಕಾದ ಸ್ಥಳಗಳು ಬಹಳಷ್ಟಿದೆ. ಅವೆಲ್ಲವನ್ನು ನೋಡಬೇಕಿದೆ, ಜತೆಗೆ ಕಳೆದುಹೋದ ಕ್ಷಣಗಳ ಬಗ್ಗೆ ಮೆಲುಕು ಹಾಕಬೇಕಿದೆ..
ನಿಲುಕದ ನಕ್ಷತ್ರಗಳನ್ನು ಹೇಗಾದರೂ ಮಾಡಿ ಹಿಡಿಯಲೇಬೇಕಿದೆ..
ಜೀವನ ತೂಗುಯ್ಯಾಲೆ..
ಒಮ್ಮೆ ಏಳು ಮತ್ತೊಮ್ಮೆ ಬೀಳು..
ಒಂದು ದಡದಿಂದ ಮತ್ತೊಂದು ದಡ ಸೇರುವ ಮುನ್ನ
ತೂಗುಯ್ಯಾಲೆಯೇ ಮುರಿದು ಬಿದ್ದರೆ..?
ಹಹ್ಹಾ.. ಉಯ್ಯಾಲೆಯೂ ಇಲ್ಲ, ಬದುಕಿಗೆ ಅರ್ಥವೂ ಇಲ್ಲ..
ನಿಲ್ಲು ಆಲಸ್ಯವನ್ನು ಮೀರಿ ನಿಲ್ಲು..
ಗೆಲ್ಲು, ವಿರೋಧಿಗಳ ವಿಶ್ವಾಸವನ್ನೂ ಗೆಲ್ಲು..
ಒಳಿತಾಗಲಿ..
ಇಂತಿ,
ಲೇಖನಿಯ ಸಂಗಾತಿ..


ಓದದೇ,ಬರೆಯದೇ, ಬರಹದ ಶೈಲಿಯಲ್ಲಿ ವ್ಯತ್ಯಾಸವಾಗಿರಬಹುದು. ಒಂದಷ್ಟು ತಿಂಗಳುಗಳ ಬಳಿಕ ಬರೆಯಲು ಪ್ರೋತ್ಸಾಹಿಸಿದ ನನ್ನ ಹಿತೈಷಿಗೆ ಪ್ರೀತಿಯ ನಮನಗಳು..!

ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!

ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...