ಪತ್ರಕರ್ತ ಈ ಪದ ಕೇಳಿದ
ತಕ್ಷಣ ಅನೇಕಾನೇಕ ಜನರಲ್ಲಿ ಮೂಡುವ ಒಂದೇ ಭಾವನೆ ಒಂದೇ .. ಪತ್ರಕರ್ತ ಅಂದ್ರೆ ಅವ್ನ ಹತ್ರ ತುಂಬಾ
ಕಾಸಿರುತ್ತೆ ಒಂದು ನ್ಯೂಸ್ ಮಾಡಿದ್ರೆ ಅವ್ನಿಗೆ ಬೇಕಾದಷ್ಟು ಕಾಸ್ ಬರುತ್ತೆ ಅಂತೆಲ್ಲಾ ಆಲೋಚನೆ ಬರೋದು ಸರ್ವೇ ಸಾಮಾನ್ಯ ! ಆದ್ರೆ ನಿಜ
ಜೀವನದಲ್ಲಿ ಪತ್ರಕರ್ತ ಪಡುವ ಬವಣೆಗಳನ್ನು ಯಾರಾದ್ರ ನೋಡಿದ್ರೆ ಇದೇನಾ ಪತ್ರಕರ್ತನ ಜೀವನ ಅಂತ ಬಾಯಿ
ಮೇಲೆ ಬೆರಳಿಟ್ಟುಕೊಳ್ಳದೇ ಇರಲ್ಲ…
ಪತ್ರಕರ್ತ ಈ ಒಂದು ಪದಕ್ಕೆ
ಸಾವಿರಾರು ಮನಸ್ಸುಗಳಲ್ಲಿ ಸಾವಿರಾರು ಅರ್ಥಗಳಿರುತ್ತದೆ. ಆದ್ರೆ ನಿಜವಾಗಿಯೂ ನೋಡಹೊರಟರೆ ಪತ್ರಕರ್ತ
ಅನುಭವಿಸುವ ಕಷ್ಟಗಳನ್ನು ಇನ್ನೊಬ್ಬ ಪತ್ರಕರ್ತ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ! ಯಅಕೆ ಅಂತೀರಾ
ಮುಂದೆ ಓದಿ…
ಈ ಲೇಖನ ಪ್ರಾರಂಭ ಮಾಡೋದಕ್ಕೂ ಮುನ್ನ ಒಂದು ಕಥೆ ಹೇಳ್ತೀನಿ ಕೇಳಿ..
ಒಂದೂರಲ್ಲಿ ಇಬ್ರು ಸ್ನೇಹಿತರು ಇರ್ತಾರೆ.. ಆ ಇಬ್ರಲ್ಲಿ ಒಬ್ಬ ಪತ್ರಕರ್ತ
ಇನ್ನೊಬ್ಬ ವ್ಯಾಪಾರಿ… ಇವ್ರಿಬ್ರು ಎಷ್ಟು ಒಳ್ಳೆ ಫ್ರೆಂಡ್ಸ್ ಅಂದ್ರೆ ಇಬ್ರು ಯಾವಾಗ್ಲೂ ಜೋತೆಲೇ
ಇರ್ತಿದ್ರು.. ಒಂದು ದಿನ ಈ ಪತ್ರಕರ್ತನ ಸ್ನೇಹಿತ ಏನೋ ಭೀಕರ ರಸ್ತೆ ಅಪಘಾತದಲ್ಲಿ ತೀರ್ಕೊಂಡು ಬಿಡ್ತಾನೆ
.. .. ಆದೇ ಸಮಯಕ್ಕೆ ಪತ್ರಕರ್ತನಿಗೆ ಹೆಡ್ ಆಫಿಸಿಂದ ಈ ಅಪಘಾತದ ಬಗ್ಗೆ ಒಂದು ವರದಿ ಮಾಡ್ಬೇಕು ಕೂಡ್ಲೇ
ಹೋಗು ಅಂತ ಹೇಳಿ ಬಿಡ್ತಾರೆ.. ಇಷ್ಟೇ ಕಥೆ ಪತ್ರಕರ್ತ ಅಲ್ಲಿ ತನ್ನ ಗೆಳೆಯನ ಸಾವಿಗೆ ಮರುಗೋದಾ ಅಥವಾ
ತನ್ನ ವೃತ್ತಿ ಮಾಡೋದಾ ? ಇಂತಹಾ ಸಂದಿಗ್ಧ ಸ್ಥಿತಿಯಲ್ಲಿ ನೀವೊಂದು ದಿನ ಇದ್ದು ಬಿಡಿ ಆಗ ನಿಮಗ ಪತ್ರಕರ್ತನ
ಜೀವನ ಅನ್ನುವುದು ಒಂದು ಮುಳ್ಳಿನ ಮೇಲಿನ ನಡಿಗೆ ಅನ್ನುವುದು ಖಂಡಿತಾ ಗೊತ್ತಾಗುತ್ತೆ…
ಹೌದು ಪತ್ರಕರ್ತನೂ ಮನುಷ್ಯನೇ ! ಆತನಿಗೂ ಒಂದು ಮನಸ್ಸಿದೆ ಆತನ
ಮನಸ್ಥಿತಿಯನ್ನು ನಾವೆಲ್ಲ ಅರಿತು ಅರ್ಥ ಮಾಡಿಕೊಳ್ಳಬೇಕಿದೆ.. ಯಾವುದೋ ಪತ್ರಕರ್ತ ಯಾವುದೋ ಒಂದು ಸುದ್ದಿ
ಮಾಡ್ತಾನೆ ಅಂದ್ರೆ ಆತನಿಗಿರುವಂತಹಾ ಒತ್ತಡವನ್ನು ನಾವೆಲ್ಲಾ ಗಮನಿಸಲೇ ಬೇಕಿದೆ. ಈ ಸ್ಪರ್ಧಾತ್ಮಕ
ಯುಗದಲ್ಲಿ ಬ್ರೇಕಿಂಗ್ ಗಳ ನಡುವಿನ ಆಟೋಟಗಳಲ್ಲಿ ಪತ್ರಕರ್ತನ ಬಗೆಗಿನ ಕಾಳಜಿಯನ್ನು ಯಾರು ಮಾಡ್ತಾರೆ
ಹೇಳಿ?? ಇಂದು ಪತ್ರಿಕಾ ರಂಗದಲ್ಲಿ ದುಡಿಯುತ್ತಿರುವ ಶೇಖಡಾ 40 ರಷ್ಟು ಮಂದಿ ಸಮಯಕ್ಕೆ ಸರಿಯಾಗಿ ಊಟ
ಮಾಡಲೂ ಆಗದೇ ಹೊಟ್ಟೆಯುಬ್ಬರದ ಸಮಸ್ಯೆಯಿಂದ ನಲುಗತ್ತಿದ್ದಾರೆ. ಇನ್ನು ಮೆಟ್ರೋ ಸಿಟಿಗಳಲ್ಲಿ ವರದಿಗೆ
ತೆರಳಿದ ಎಷ್ಟೋ ವರದಿಗಾರರು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ರೆ ಅವರೆಲ್ಲರ ಬಗ್ಗೆ ಯೋಚಿಸಲು
ಯಾರಿದ್ದಾರೆ? ನಮ್ಮ ನಿಮ್ಮೆಲ್ಲರಿಗೂ ಇರುವಂತೆ ಪತ್ರಕರ್ತನಿಗೂ ಆತನದ್ದೇ ಆದ ಕುಟುಂಬವಿದೆ ಆದ್ರೆ
ಎಷ್ಟು ಪತ್ರಕರ್ತ ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಾನೆ ಯಾರಿಗಾದರೂ ಗೊತ್ತಾ?? ಸಮಯ ರಾತ್ರಿ
12 ಅಂತಿಲ್ಲ ಬೆಳಗ್ಗೆ 01 ಅಂತಿಲ್ಲಾ… ಸುದ್ದಿ ಇದ್ದಲ್ಲಿಗೆ ಓಡಿ ಹೋಗಲೇ ಬೇಕು… ನಡುವೆ ಈ ವರದಿಗಾರ
ಸತ್ತರೂ ಕೇಳುವವರಿಲ್ಲ…
ಏನೋ ಹುಮ್ಮಸ್ಸಿನಲ್ಲಿ ನಾನು ಪತ್ರಕರ್ತನಾಗುತ್ತೇನೆ , ಪತ್ರಕರ್ತನಾಗಬೇಕು
ಎಂದು ಬಂದ ಅದೆಷ್ಟೋ ಆಕಾಂಕ್ಷಿಗಳು ಸರಿಯಾದ ಸಮಯಕ್ಕೆ
ಸಂಬಳ ಸಿಗದೇ ಬೆಂಗಳೂರಿನ ರಸ್ತೆ ಬದಿಯಲ್ಲಿ ಮಲಗಿದ್ದ ಬಗ್ಗೆ ಯಾರೂ ಮಾತನಾಡುವುದಿಲ್ಲ… ಸಂಬಳ ಸಿಗದೇ
ಇದ್ದಾಗ ಗೆಳೆಯರ ಬಳಿಯಲ್ಲಿ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೇ ಇದ್ದ ಬಗೆಯೂ ಯಾರಿಗೂ ತಿಳಿದಿಲ್ಲ..
ಎಲ್ಲರ ಕಣ್ಣಿಗೆ ಕಾಣುವುದು ಒಂದೇ ದೃಶ್ಯ ಹೇಳುವುದು ಒಂದೇ ಮಾತು !!!! ಬ್ರೇಕಿಂಗ್ ನ್ಯೂಸ್ !!!
ಪತ್ರಿಕೋದ್ಯಮವನ್ನು ಸಾಗಾಸರಾಗವಾಗಿ ದೂಷಿಸುವ ಸಾಮಾಜಿಕ ಜಾಲತಾಣದ ಕೆಲವು
ಅತೃಪ್ತ ಆತ್ಮಗಳೇ ನಿಮ್ಮಲ್ಲಿ ಒಂದು ಪ್ರಶ್ನೆಯಿದೆ… ಇತ್ತೀಚೆಗೆ ಮಂಗಳೂರಿನಲ್ಲಿ ಡೆಂಘಿ ಜ್ವರ ಮಿತಿ
ಮೀರಿದ ಬಗ್ಗೆ ಮತ್ತು ಆ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆಯಲು ಹೋದ ಖಾಸಗಿ ವಾಹಿನಿಯೊಂದರ ವರದಿಗಾರ
ನಾಗೇಶ್ ಮೃತಪಟ್ಟವರ ಬಗ್ಗೆ ಎಷ್ಟು ಜನರಿಗೆ ತಿಳಿದಿದೆ ಸ್ವಾಮಿ?? ಇನ್ನು ಅದೇ ಸಂದರ್ಭದಲ್ಲಿ ಜ್ವರಕ್ಕೆ
ತುತ್ತಾದ ಪ್ರಣಾಮ್ ಒಂದು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದದ್ದು ಯಾರಿಗೆ ತಿಳಿದಿದೆ??? ನೋ ವೇ
ಛಾನ್ಸೇ ಇಲ್ಲ ಯಾರಿಗೂ ನೆನಪಿರಲು ಸಾಧ್ಯವೇ ಇಲ್ಲ…. ಯಾಕಂದ್ರೆ ಅವರೆಲ್ಲ ತೆರೆಮರೆಯ ಹೀರೋಗಳು ಅಷ್ಟೇ
!!
ಕೊನೇ ಮಾತು : ವಾಹಿನಿಗಳ ಬಗ್ಗೆ ಬೈಯುವವರು ಒಂದು ಬಾರಿ ಯೋಚಿಸಿ, ಒಂದು
ವಾಹಿನಿಯನ್ನು ನಂಬಿಕೊಂಡು ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿರುತ್ತವೆ.. ಆ ನೂರಾರು ಕುಟುಂಬಗಳ
ಸಂಬಳ ಬರಬೇಕಾದರೆ ಟಿ.ಆರ್.ಪಿ ಅಗತ್ಯ.. ಟಿ.ಆರ್.ಪಿ ಇದ್ರೆ ಬ್ಯುಸಿನೆಸ್ ಇಲ್ಲಾಂದ್ರೆ ಬ್ಯುಸಿನೆಸ್
ಇಲ್ಲ… ಆ ಟಿ.ಆರ್.ಪಿ.ಗೋಸ್ಕರ ನಾವು ಕೆಲವು ನಾಟಕ ಮಾಡಲೇ ಬೇಕು !! ನೆನಪಿಡಿ… ಯಾವುದೇ ವಾಹಿನಿ ತನ್ನ
ವೃತ್ತಿಧರ್ಮವನ್ನು ಎಂದಿಗೂ ಮರೆತಿಲ್ಲ.. ಅಷ್ಟೇ !!! ನಮಗೂ ನಿಯತ್ತಿದೆ ನಮ್ಮಲ್ಲೂ ಮಾನವೀಯತೆ ಇದೆ ಅಷ್ಟೇ.…
