Friday, 7 December 2018

ಬೆತ್ತಲೆ ಸಮಾಜ....

ವೇಶ್ಯಾವಾಟಿಕೆ ಈ ಹೆಸರು ಕೇಳಿದೊಡನೆ ಭಾರತೀಯ ಪ್ರಜ್ಞಾವಂತ ಸಮಾಜ ಏನೋ ಒಂದು ರೀತಿಯ ಅಸಹ್ಯದಂತೆ ನೋಡುವಂತಾಗಿದೇ ಆದರೆ ಈ  ವೇಶ್ಯಾಜಗತ್ತಿನ ಆಳ ಅರಿವಿನ ಕುರಿತಾಗಿ ಅಧ್ಯಯನ ಮಾಡ ಹೊರಟಾಗ ಇದೇ ಪ್ರಜ್ಞಾವಂತ ಎಂದು ಕರೆಸಿಕೊಳ್ಳುವ ಸಮಾಜ ಬೆತ್ತಲಾಗುವುದಂತೂ ಸುಳ್ಳಲ್ಲ…

 ವೇಶ್ಯಾಜಗತ್ತಿನ ಕರಾಳ ಜಗತ್ತನ್ನು ಹೊರಗೆಡವುವ ಮೊದಲು ನಾನು ನನಗಾದ ಕೆಲ ಅನುಭವವನ್ನು ಬಿಚ್ಚಿಡುವೆ ಕೇಳಿ...
ಅದು ಒಂದು ರಾತ್ರಿ ಬೆಂಗಳೂರೆಂಬ ಮಹಾನಗರವನ್ನು ಬಿಟ್ಟ ನಾನು ಮಂಗಳೂರಿಗೆ ಹೊರಟಿದ್ದೆ… ಮೆಜಿಸ್ಟಿಕ್ ಬಿ.ಎಂ.ಟಿ.ಸಿ. ಬಸ್ಸಿನಿಂದಿಳಿದ ನಾನು ಸೀದಾ ಫ್ಲೈ ಓವರ್ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ತಲುಪುವ ತವಕದಲ್ಲಿದ್ದೆ. ಅದಾಗಲೇ ನನಗೆ ಒಂದು ಕರೆ ಕೇಳಿದ್ದು.. “ ಸರ್ ಬರ್ತೀರಾ”...... ಈ ಮಾತು ಕೇಳಿದ್ದೇ ತಡ ಒಂದು ಕ್ಷಣ ನಾನು ತತ್ತರಿಸಿ ಹೋಗಿದ್ದೆ.. ಬೆಚ್ಚಿ ಬಿದ್ದು ಬೆವೆತವನಂತಾಗಿ ಅಲ್ಲಿಂದ ಕಾಲ್ಕಿತ್ತೆ...
 ಆದರೆ ನನ್ನ ಮನ ತಡೆಯಲಿಲ್ಲ.. ಈ ವೇಶ್ಯಾಜಗತ್ತಿನ ಕುರಿತಾಗಿ ಸ್ವಲ್ಪ ಸ್ವಲ್ಪವೇ ಅಧ್ಯಯನ ನಡೆಸಬೇಕೆಂದು ತೀರ್ಮಾನಿಸಿದೆ. ಅದನ್ನು ಅಧ್ಯಯನ ಮಾಡ ಹೊರಟಾಗ ದೊರೆತ ಕೆಲ ಮಾಹಿತಿಗಳು ನನ್ನನ್ನೇ ಬೆಚ್ಚಿ ಬೀಳಿಸಿತ್ತು... ಕಾಸಿಗಾಗಿ ಸೆರಗು ಬಿಚ್ಚುವವರೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಮುಗ್ಧ ಮುಖಗಳ ನೈಜ ಜೀವನ ಕಣ್ಣೀರು ತರಿಸುವಂತಿತ್ತು.. ಜೊತೆಗೆ ಸಮಾಜವಾದಿಗಳ ನೈಜ ಮುಖವಾಡ ಕಳಚಿ ಬಿದ್ದಿತ್ತು..  ಜಗತ್ತಿನಲ್ಲಿ ಕಾಣುವುದು ಎಲ್ಲಾ ಸತ್ಯವಲ್ಲ ಎಂಬುದರ ಪ್ರಸ್ತುತತೆ ಅರಿವಾಗಿತ್ತು...
ವೇಶ್ಯೆ ಎಂಬುವುದು ಕೇವಲ ಭೋಗದ ವಸ್ತುವಲ್ಲ ಆಕೆಗೂ ಒಂದು ನಿರ್ಮಲವಾದ ಮನಸ್ಸಿದೆ.. ಆಕೆಯ ಮನಸ್ಸಿನಲ್ಲೂ ಆಸೆಗಳಿವೆ ಕಣ್ಣುಗಳಲ್ಲಿ ನಾಳೆಯ ಕನಸುಗಳಿವೆ ನಮ್ಮಂತೆ ಆಕೆಯ ದೇಹದಲ್ಲೂ ರಕ್ತ ಹರಿಯುತ್ತಿದೆ ಎಂಬುವುದನ್ನು ನಾವು ಮರೆಮಾಚುವಂತಿಲ್ಲ..
ಹೌದು ವೇಶ್ಯಾವಾಟಿಕೆಯ ಕುರಿತಾಗಿ ನಾನು ವಿಮರ್ಶೆ ಮಾಡ ಹೊರಟಾಗ ಅಚ್ಚರಿಯ ಜೊತೆಗೆ ಒಂದು ಬೇಸರವೂ ಕಾದಿತ್ತು , ಬೆಂಗಳೂರಿನ ಬೀದಿಯೋದರಲ್ಲಿ ನಾನು ನಡೆದು ಹೋಗುತ್ತಿದ್ದಾಗ ಅಕಸ್ಮಾತಾಗಿ ಸಿಕ್ಕಿದ , ಮಹಿಳೆಯೊಬ್ಬಳ ಬಳಿಯಲ್ಲಿ ಮಾತನಾಡಿದೆ.  ಆಕೆ ಕೆಲ ಚಿಕ್ಕ ಪುಟ್ಟ ಮಾಹಿತಿಗಳನಷ್ಟೇ ನೀಡಿದಳು.. ಆಕೆ ನೀಡಿದ ಮಾಹಿತಿಯನ್ನು ಲೇಖನದ ಮೂಲಕ ಭಟ್ಟಿ ಇಳಿಸುವ ಕೆಲಸವನ್ನಷ್ಟೇ ನಾನು ಮಾಡಿದ್ದೇನೆ.
ಬೆಂಗಳೂರಿನ ಹಲವಾರು ಕಡೆ ವೇಶ್ಯಾಗೃಹಗಳಿದೆಯಂತೆ ಅಲ್ಲಿ ಏನಿಲ್ಲವೆಂದರೂ ಸರಿಸುಮಾರು 10 ರಿಂದ 15 ಮಂದಿ ಮಹಿಳೆಯರು ಈ ದಂಧೆಯಲ್ಲಿ ತೊಡಗಿದ್ದಾರಂತೆ ಆದರೆ ಈ ಧಂಧೆಯಲ್ಲಿ ತೊಡಗಿದ ಶೇ.60 ರಷ್ಟು ಮಂದಿ ವಿಚಾರದ ಪ್ರಸ್ತುತತೆಯ ಅರಿವಿಲ್ಲದೇ ಈ ದಂಧೆಗಿಳಿದವರು. ಕೇವಲ ತಮ್ಮ ಕುಟುಂಬ ಮುನ್ನಡೆಸುವ ಕಾಯಕಕ್ಕಾಗಿ ಬೇಕಾದಷ್ಟು ಕಾಸು ದೊರೆಯದೇ ಹೋದಾಗ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವೇಶ್ಯಾವೃತ್ತಿಗಿಳಿದವರು ಒಂದೆಡೆಯಾದರೆ ಇನ್ನೂ ಯಾರದ್ದೋ ಮಾತು ಕೇಳಿ ಬೆಂಗಳೂರೆಂಬ ಮಹಾನಗರದೊಳಗೆ ಕಾಲಿಟ್ಟು ಹಿಂದಿರುಗಿ ತಮ್ಮೂರಿಗೆ ಹೊಗಲಾರದೇ ಇತ್ತ ಸರಿಯಾದ ಕೆಲಸವೂ ಇಲ್ಲದೇ ಅಲೆದಾಡುವಂತಹಾ ಪರಿಸ್ಥಿತಿ ಇವೆಲ್ಲಾ ಮುಖ್ಯ ಕಾರಣವೆಂದು ನಿಮಗನಿಸದೇ ಇರಬಹುದು ಆದರೆ ಈ ಹಸಿವೆಂಬ ರಾಕ್ಷಸ ಇದ್ದಾನಲ್ಲ ಆತನಷ್ಟು ಕ್ರೂರಿ ಯಾರೂ ಇಲ್ಲ ಎನ್ನುವುದು ನನ್ನ ಭಾವನೆ.. ಕೈಯಲ್ಲಿ ಕಾಸಿಲ್ಲ ಹೊಟ್ಟೆಗೆ ಹಿಟ್ಟಿಲ್ಲ ಇಂತಹಾ ಸಂದರ್ಭದಲ್ಲಿ ಕೆಲಸವೂ ಇಲ್ಲದಿದ್ದರೆ ಇಂತಹಾ ದಂಧೆಗಿಳಿಯದೆ ಬೇರೆ ವಿಧಿಯೇ ಇಲ್ಲ ಎಂದು ಹೇಳುತ್ತಾರೆ ಅವರು.. ಅವರ ಕಥೆಗಳನ್ನು ಕೇಳಿದಾಗ ಆದ ನೋವು ಅಷ್ಟಿಷ್ಟಲ್ಲ..  ಅವರು ಮುಂದುವರೆದು ಹೇಳುತ್ತಾರೆ, ಸಮಾಜದಲ್ಲಿ ಕೆಲ ಗಣ್ಯ ವ್ಯಕ್ತಿಗಳೆಂದು ಕರೆಸಿಕೊಂಡವರು ಕೆಲವೊಮ್ಮೆ ವೇಶ್ಯಾಗೃಹಗಳಿಗೆ ಬರುವುದಿದೆಯಂತೆ ಅದೂ ಕುಡಿದು ಬಂದು ತಮ್ಮ ಕಾಮತೃಷೆ ತೀರಿಸಿಕೊಳ್ಳುವುದಲ್ಲದೇ ತಮ್ಮ ವಿಕೃತತೆಯನ್ನು ತೀರಿಸಿಕೊಳ್ಳುವುದಿದೆಯಲ್ಲ ಅದು ಇನ್ನೂ ವಿಚಿತ್ರ..  ಸಿಗರೇಟಿನಿಂದ ಸುಡುವುದು, ಹಲ್ಲುಗಳಿಂದ ಕಚ್ಚಿ ಗಾಯಗೊಳಿಸುವಂತಹಾ ಸನ್ನಿವೇಷಗಳೂ ಇವೆಯಂತೆ , ಅದೂ ಹೇಗೆ ಅಂತೀರಾ... ಕೇಳಿದರೆ ನೀವೇ ಬೆಚ್ಚಿ ಬೀಳ್ತೀರಾ..
ಸಿಗರೇಟಿನಿಂದ ಕೈಗಳನ್ನು ಸುಡುವುದು ಮಾತ್ರ ನೀವು ಇಲ್ಲಿಯವರೆಗೆ ಕೇಳಿರಬಹುದು ಆದರೆ ಕೆಲ ವಿಕೃತ ಕಾಮದ ಪುಣ್ಯಾತ್ಮರಿದ್ದಾರಲ್ಲ ಅವರು ಸಿಗರೇಟುಗಳಿಂದ ಹೆಣ್ಣಿನ ಮರ್ಮಾಂಗದ ಬಳಿ , ಮೊಲೆಗಳ ಮೇಲೆ, ಹಾಗೂ ಹೊಟ್ಟೆಯ ಮೇಲೆಲ್ಲಾ ಸುಟ್ಟು ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಾರಂತೆ... ಮಾತ್ರವಲ್ಲ ಈ ಗಾಯದ ಮೇಲೆ ಮತ್ತೆ ಕಚ್ಚಿ ಇನ್ನಷ್ಟು ನೋವು ನೀಡುವಗ ತಡೆದುಕೊಳ್ಳದೇ ಬೇರೆ ವಿಧಿಯೇ ಇಲ್ಲವಂತೆ..
ಇವೆಲ್ಲವನ್ನೂ ತಡೆದುಕೊಂಡರೆ ಸಾಕು ಎಂಬುವುದು ನಿಮ್ಮ ವಾದವೇ ?? ಹಾಗಾದರೆ ನಿಮ್ಮ ನಿಲುವು ಸುಳ್ಳು .. ಇತ್ತ ಗಿರಾಕಿಗಳ ಕಾಟ ಮಾತ್ರವಲ್ಲ ಕೆಲ ಪೋಲಿ ಸರ ಕಾಟ ಬೇರೆ.. ಅವರ ಬಾಯಿಂದ ಕೇಳಿದ ಮಾತುಗಳನ್ನು ಕೇಳಿ ನನ್ನ ಮನಸ್ಸಿನಲ್ಲಿ ನನಗರಿವಿಲ್ಲದಂತೆಯೇ ಬೇಸರ ಛಾಯೆ ಹುಟ್ಟಿ ಕಣ್ಣಾಲಿಗಳಿಂದ ಒಂದೆರಡು ಹನಿಗಳು ಧರೆ ಸೇರಿದವು...

ಇವಿಷ್ಟು ಕೇವಲ ವೇಶ್ಯೆ ಎಂದು ಕರೆಯಲ್ಪಡುವ ಮಾತೆಯ ನೋವಿನ ಟ್ರೈಲರ್ ಅಷ್ಟೇ ಇನ್ನೂ ನಿಮಗೆ ವೇಶ್ಯೆಯರ ಜೀವನದ ಬಗ್ಗೆ ತಿಳಿದುಕೊಳ್ಳಬೇಕಾದರೆ ನನಗೆ ಹೇಳಿ ನಾನು ಇನ್ನೂ ಬರೆಯುತ್ತೇನೆ.. ಇನ್ನಷ್ಟು ವಿಚಾರ ತಿಳಿಸುವ ಪ್ರಯತ್ನ ಮಾಡುತ್ತೇನೆ..

ಇಂತಿ
ಪ್ರೀತಿಯಿಂದ
   ಅಕ್ಷಯ್ ಜಿ ಭಟ್

Wednesday, 3 October 2018

ಹಳೇಯ ನೆನಪು ಹೊಸದಾದಾಗ

ಯೂಟ್ಯೂಬ್‍ನಲ್ಲಿ ಗೀತೆಗಳನ್ನು ಕೇಳುತ್ತಲಿದ್ದ ನನಗೆ  ಜನನಿ ಜನನಿ ಜನನಿ......  ಈ ಹಾಡಿನ ಸಾಲುಗಳನ್ನು ಕೇಳುತ್ತಲೇ ನನ್ನ ಮನಃಪಲ್ಲಟದಲ್ಲಿ ನನ್ನ ಬಾಲ್ಯದ ಜೀವನವನ್ನು ನೆನಪಿಸಿತ್ತು. . .  ಮಾತ್ರವಲ್ಲ ನನ್ನ ಜೀವನದಲ್ಲಿ  ಬಂದು ಹೋದ  ಅನೇಕ ಗೆಳಯ ಗೆಳತಿಯರ ನೆನಪನ್ನು ಮಾಡಿಸಿತ್ತು...ಹೌದು ಅದು ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕಲಿಯುತ್ತಿದ್ದಂತಹಾ ಸಮಯ. ನಾವೆಲ್ಲರೂ ಕಾಯುತ್ತಿದ್ದುದ್ದೇ ಆ ಶನಿವಾರದ ಕೊನೆಯ ಎರಡು ತರಗತಿಗಾಗಿ... ಕಲ್ಚರಲ್ ಆಕ್ಟಿವಿಟಿ ಎಂಬ ಆ ಕ್ಲಾಸ್ ಗಳಲ್ಲಿ ಎಂಜಾಯ್ ಮಾಡುವುದೆಂದರೆ ನಮಗೆ ಎಲ್ಲಿಲ್ಲದ ಸಂಭ್ರಮ.. ಅದರಲ್ಲೂ ಮುಖ್ಯವಾಗಿ ನಾವೆಲ್ಲರೂ ಕಾಯುತ್ತಿದ್ದುದ್ದು ಆ ದುಂಡು ಮುಖದ ಡಿಂಪಲ್ ಚೆಲುಚೆ ಲಿಖಿತಾ ಅವರ ಗೀತೆಗಳಿಗಾಗಿ ಮಾತ್ರ.....

  ಹೌದು ನಾನೀಗ ಹೇಳಹೊರಟಿರುವುದು ಆ ದುಂಡು ಮುಖದ ಕುಳ್ಳಿ ಲಿಖಿತಾ ಬಗ್ಗೆ ಈಕೆ ನೋಡಲು ಕೊಂಚ ಗಿಡ್ಡವಾಗಿದ್ದರೂ ಈಕೆಯ ಪ್ರತಿಭೆ ಅಪಾರ.. 07 ವರುಷಗಳ ಕಾಲ ನಾವು ಜೊತೆಯಾಗಿಯೇ ಕಲಿತರೂ ನಾವಿಬ್ಬರೂ ಮಾತನಾಡಿದ್ದು ಬಹಳ ವಿರಳ.. ಹಲವಾರು ಗೆಳತಿಯರ ಬಳಗದಲ್ಲಿದ್ದ ಆ ಸುಂದರಿ ಬಾಯ್ತುಂಬ ವಟವಟ ಎಂದು ಮಾತನಾಡುತ್ತಿದ್ದರೂ ಬಾಲಕರ ಬಳಿಯಲ್ಲಿ ಆಕೆಯ ಮಾತುಕತೆ ಸ್ವಲ್ಪ ಕಡಿಮೆಯೇ ಇತ್ತು ಬಿಡಿ...
ಕಂಚಿನ ಕಂಠದ ಚೆಲುವೆ ಕಲ್ಚರಲ್ ಆಕ್ಟಿವಿಟಿ ಪಿರಿಯಡ್ಡಿನಲ್ಲಿ ವೇದಿಕೆ ಹತ್ತಿದಳೆಂದರೆ ಈಕೆಯ ಹಾಡು ಕೇಳಲು ಇಡೀಯ ತರಗತಿಗೆ ತರಗತಿಯೇ ನಿಶ್ಯಬ್ಧವಾಗಿ ಕುಳಿತು ಈಕೆಯ ಹಾಡಿಗೆ ತಲೆದೂಗುತ್ತಿತು..  ಆಕೆಯ ಕಂಠದ ಮಾಧುರ್ಯವೆ ಆ ರೀತಿಯಾಗಿತ್ತು.  ಬಾಲ್ಯದಿಂದಲೇ ಸಂಗೀತವನ್ನು ಅಭ್ಯಸಿಸಿಕೊಂಡು ಬಂದಹಾ ಈಕೆಯು ಸಂಗೀತವನ್ನೇ ತನ್ನ ಉಸಿರಾಗಿಸಿಕೊಂಡದ್ದಂತೂ ಸುಳ್ಳಲ್ಲ.. ಅಂದಿನಿಂದ ಇಂದಿನ ವರೆಗೂ ಸಂಗೀತವನ್ನು ಒಂದು ದೇವತೆಯಂತೆಯೇ ಪೂಜಿಸಿಕೊಂಡು ಬಂದಿರುವ ಈಕೆಯ ಸ್ವರ ಮಾಧುರ್ಯ ನಿಜವಾಗಿಯೂ ಕೇಳುಗರನ್ನು ಒಂದು ಕ್ಷಣ ಕೇಳುವಂತೆಯೇ ಮಾಡುತ್ತದೆ..
ಅದಿರಲಿ...  ಇನ್ನು ಈಕೆಯ ನೆನಪು ಇಂದು ನನಗಾಗಲು ಇನ್ನೂ ಒಂದು ಕಾರಣವಿದೆ.. ಉಜಿರೆಯಲ್ಲಿ ನನ್ನ ಪ್ರಾಥಮಿಕ ವಿದ್ಯಾಬ್ಯಾಸವನ್ನು ಕೊನೆಗೊಳಿಸಿದ ನಾನು ನನ್ನ ಪ್ರೌಢ ವಿದ್ಯಾಭ್ಯಾಸಕ್ಕಾಗಿ ಮಂಗಳೂರೆಂಬ ಮಾಯಾನಗರಿಗೆ ಕಾಲಿಟ್ಟಿದ್ದೆ , ಹೊಸ ಜಾಗ ಹೊಸ ಗೆಳೆಯರ ನಡುವೆ ನನ್ನ ಹಳೆಯ ಸ್ನೇಹವನ್ನೇಲ್ಲಾ ಮರೆತಿದ್ದೆ... ಎಂಟು ವರುಷಗಳ ಸಮಯದಲ್ಲಿ ನಾನು ಅನೇಕಾನೇಕ ಹೊಸ ಗೆಳೆಯ ಗೆಳತಿಯರ ಸಂಪಾದಿಸಿದ್ದೆ. ಇವೆಲ್ಲದರ ನಡುವೆ ನಾನು ನನ್ನ ಪದವಿ ಜೀವನಕ್ಕೆ ಕಾಲಿಟ್ಟಿದ್ದೆ. .
ಅದು ನನ್ನ ಅಂತಿಮ ಪದವಿಯ ತರಗತಿಗಳ ಸಮಯ ನಮ್ಮ ಕಾಲೇಜಿನಲ್ಲಿ ಪ್ರತಿ ವರುಷದಂತೆ ನಡೆಯುವ ಅಂತರ ಕಾಲೇಜು ಸ್ಪರ್ಧೆಗೆ ನಿರೂಪಕನಾಗಿ ನನ್ನ ಕಾರ್ಯ ನಾನು ನಿರ್ವಹಿಸುತಲಿದ್ದೆ. ಆಗಷ್ಟೇ ಉಜಿರೆಯ ಖಾಸಗಿ ಕಾಲೇಜಿನ ಬಸ್ಸಿನಿಂದ ಸ್ಫರ್ದಿಗಳು ನಮ್ಮ ಕಾಲೇಜಿನ ಪ್ರಾಂಗಣದೊಳಗೆ ಕಾಲಿಟ್ಟಿದ್ದರು. . .  ಬಸ್ಸಿನಿಂದಿಳಿದೆಲ್ಲರನ್ನು ನೋಡುತ್ತಿದ್ದ ನನಗೆ ಮತ್ತದೇ ಕುಳ್ಳಿಯನ್ನು ಕಂಡು ಆಶ್ಚರ್ಯವಾಯಿತು. ಹೌದು ಮುಖದಲ್ಲಿ ಒಂದಿನಿತೂ ವ್ಯತ್ಯಾಸವಿಲ್ಲ. . . ಹೈ ಹೀಲ್ಸ್ ಚಪ್ಪಲಿ ಹಾಕಿದ್ದು ಬಿಟ್ಟರೆ ಎತ್ತರವಂತೂ ಆಗಿಲ್ಲ.. . ಅದೇ ಲಿಖಿತ ಎಂಟು ವರುಷಗಳ ಹಿಂದೆ ನಮ್ಮ ತರಗತಿಯಲ್ಲಿ ಓದುತ್ತಿದ್ದ ಲಿಖಿತ... ತಮ್ಮ ಕಾಲೇಜಿನ ಪರವಾಗಿ ಹಾಡಲು ಬಂದಿದ್ದಳು , ಆಕೆಯನ್ನು ಕಂಡು ಮತ್ತೊಮ್ಮೆ ಆಕೆ ಹೌದೋ ಅಲ್ಲವೋ ಎಂದು ಪರಿಶೀಲಿಸಿ ಮಾತನಾಡಿಸಿದೆ. . ಆಗ ಆಕೆಯ ನಗುಮೊಗದಲ್ಲಿ ಮತ್ತದೇ ಗುಳಿಯ ಕಂಡೆ.. ಆಕೆ ಕೇವಲ ಗಾಯಕಿಯಲ್ಲ ಒಬ್ಬ ಉತ್ತಮ ಗಾಯಕಿ , ಜಾನಪದ ಶೈಲಿಯ ಗೀತೆಗಳನ್ನು ಆಕೆ ಎಷ್ಟು ಸೊಗಸಾಗಿ ಹಾಡುವಳೆಂದರೆ ಕೇಳುವವರ ಮೈಮನದಲ್ಲಿ ಆ ಹಳ್ಳಿಯ ಸೊಗಡಿನ ಕಂಪನ್ನು ಬೀರುವಂತಹಾ ಸ್ವರ ಮಾಧುರ್ಯ ಇನ್ನು ಆಕೆಗಿರುವ ಗೀಳೆಂದರೆ ಡಬ್ಮ್ಯಾಶ್.. ಚಿಕ್ಕ ಬಾಲೆಯಂತೆ ಕಾಣುವ ಆಕೆಯ ಮೊಗ ನೋಡುವಾಗ ನಗುವುಕ್ಕಿ ಬರುತ್ತಿದೆ. .  ಪ್ರಸ್ತುತ ಮಂಗಳೂರಿನಲ್ಲಿ ಕಾನೂನು ಪದವಿ ಅಭ್ಯಸಿಸುತ್ತಿರುವ ಈಕೆಗೆ ಶುಭ ಹಾರೈಕೆಗಳು. .  ಗೆಳತಿ ಉತ್ತಮ ಲಾಯರ್ ಆಗಿ ಉತ್ತಮ ಹಾಡುಗಾರ್ತಿಯಾಗಿ ಉತ್ತಮ ನಟಿಯಾಗಿ ಜೀವನದಲ್ಲಿ ಉತ್ತುಂಗ ಶಿಖರಕ್ಕೇರುವಂತಾಗಲಿ.. .

ಇಂತಿ
 ಅಕ್ಷಯ್

Monday, 1 October 2018

ವೃತ್ತಿ ಕುದುರೆಯ ಬೆನ್ನೇರಿ.....

ಹೌದು ಅದು ಇಂದಿಗೆ ಸರಿಯಾಗಿ ಒಂದು ವರುಷದ ಹಿಂದಿನ ಮಾತು...ಆಗಷ್ಟೇ ರೆಕ್ಕೆ ಬಲಿತ ಹಕ್ಕಿಯು ಸ್ವಚ್ಛಂದವಾಗಿ ಹಾರಾಡಲು ಕನವರಿಸುವಂತೆ, ಆಗಷ್ಟೇ ನನ್ನ ಪದವಿ ಶಿಕ್ಷಣ ಮುಗಿಸಿದ ನಾನು, ಮಾಧ್ಯಮವೆಂಬ ಜಗತ್ತಿಗೆ ಹಾರಾಡಬೇಕೆಂಬ ಅಭಿಲಾಷೆಯಿಂದ ಹಾರಾಡುತಲಿದ್ದೆ...

ಮಂಗಳೂರಿನಲ್ಲೇ ಒಂದು ಪುಟ್ಟ ಸುದ್ದಿ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದ ನನಗೆ ದೂರದ ಮಾಯಾನಗರಿ ಬೆಂಗಳೂರಿನಿಂದ ಕರೆಯೊಂದು ಬಂದಿತ್ತು... ಬೆಂಗಳೂರಿನಲ್ಲಿ ವಾಹಿನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನನ್ನ ಗುರುಗಳಿಂದ ಕೆಲಸದ ಬಗ್ಗೆ ಮಾಹಿತಿಯೊಂದು ಬಂದಿತ್ತು ಅಂತೂ ಇಂತೂ ಬೆಂಗಳೂರೆಂಬ ಮಾಯಾನಗರಕ್ಕೆ ಕಾಲಿಡುತ್ತಿದ್ದೇನಲ್ಲಾ ಎಂಬ ಖುಷಿ... ಜೊತೆಗೆ ನಾನು ಇಷ್ಟ ಪಡುವ ಸ್ವಾಮೀಜಿಯವರಿಗೆ ಬೇಸರ ಪಡಿಸುತ್ತಿದ್ದೇನೆಂಬ ನೋವು ಎಲ್ಲಾ ಸೇರಿ ಮನದೊಳಗೊಂದು ಚಿತ್ರಾನ್ನವೆಂಬ ಮೃಷ್ಟಾನ್ನ ಭೋಜನ ಸಿದ್ಧವಾಗಿತ್ತು.. ನಾನು ಕೆಲಸ ನಿರ್ವಹಿಸುತ್ತಿದ್ದ ಸುದ್ದಿ ಜಾಲತಾಣದ ಮುಖ್ಯಸ್ಥರ ಅನುಮತಿ ಪಡೆದು, ಸ್ವಾಮಿಜಿಯ ಕಾಲುಗಳಿಗೆರಗಿ ನಮಸ್ಕರಿಸಿ  ಬೆಂಗಳೂರಿನ ಬಸ್ಸನ್ನೇರಿ ಹೊರಟೇ ಬಿಟ್ಟೆ... ಹೊರಡುವುದಕ್ಕೂ ಮೊದಲು ನನಗೆ ಅತ್ಯಂತ ಪ್ರಿಯವಾದ ಒಬ್ಬ ಗೆಳೆಯ ರೋಹಿತ್ ಅಣ್ಣನ ಬಳಿ ನನ್ನೆಲ್ಲಾ ದುಗುಡಗಳನ್ನು ಹಂಚಿಕೊಳ್ಳುವಾಗ ಅವರು ಹೇಳಿದ ಮಾತು ಇಂದಿಗೂ ಮಾರ್ದನಿಸುತ್ತದೆ. “ಈರ್ ಬೆಂಗಳೂರು ಪೋಲೆ, ಅಲ್ಪ ಈರೆಗ್ ಎಡ್ಡೆ ಆಪುಂಡು, ಫಸ್ಟ್‍ಗ್ ಒಂಜಿ ಪತ್ತ್ ಸಾರದ ಉಲಾಯ್ ಸಂಬಳ ಈರೇಗ್ ತಿಕ್ಕುಂಡು, ಬೊಕ್ಕ ಒಂತೆನೆ ಜಾಸ್ತಿ ಆವು, ಪುರಲ್ದಪ್ಪೆ ಈರೆಗ್ ಎಡ್ಡೆ ಮನ್ಪಡ್” ಎಂದು ಹೇಳಿ ನನ್ನ ಬೀಳ್ಕೊಟ್ಟಿದ್ದರು.. ಗುರುತು ಪರಿಚಯವಿಲ್ಲದ ಜಾಗ, ನನ್ನೂರಿಗಿಂತ ನೂರು ಪಟ್ಟು ಹಿರಿದಾದ ಊರು ಬೆಂಗಳೂರು, ಹೇಗೋ ಬಂದಾಗಿದೆ ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಎಂಬ ಜಾಗ ಬಿಟ್ಟರೆ ಮತ್ಯಾವುದೂ ಗೊತ್ತಿಲ್ಲ.. ಆಗ ನನ್ನ ನೆರವಿಗೆ ಬಂದವನೇ ಮೌಲಾನ, ಬಾರಪ್ಪಾ ಗೆಳೆಯಾ ನನ್ನ ರೂಮಿದೆ, ಬೇಕಾದರೆ ಅಲ್ಲೇ ಇರು ಎಂದು ಅವನು ಪ್ರೀತಿಯಿಂದ ಮಾತನಾಡಿಸಿದ. ಆಗಲೇ ಕೊಂಚ ಧೈರ್ಯ ಬಂದದ್ದು.
ಇನ್ನು 3 ನೇ ತಾರೀಖಿನಿಂದ ಕೆಲಸಕ್ಕೆ ಜಾಯಿನ್ ಆಗಬೇಕಿತ್ತು.. ಏನು ಮಾಡೋಣ ನನ್ನ ಆಫೀಸಿನ ಬಳಿಯಲ್ಲಂತೂ ರೂಂ, ಪಿ.ಜಿ. ಯಾವುದೂ ಸೆಟ್ ಆಗಲಿಲ್ಲ, ಸ್ವಲ್ಪ ದಿನ ಮುಂಜಾನೆ 05: ಕ್ಕೆ ಮೌಲಾನನ ರೂಂನಿಂದ ಬಂದರೆ ಮರಳೀ ಹೋಗುವುದು ರಾತ್ರಿ 12:30ಕ್ಕೆ.. ಹೀಗಿತ್ತು ನನ್ನ ದೈನಂದಿನ ದಿನಚರಿ...ಆಯಾಸ ಸುಸ್ತು, ಇವೆಲ್ಲದರ ನಡುವೆ ಏನಾದರೂ ಸಾಧನೆ ಮಾಡಬೇಕೆನ್ನುವ ತುಡಿತ. ಕೇವಲ 4000 ರುಪಾಯಿಗಳನ್ನು ಹಿಡಿದುಕೊಂಡು ಬೆಂಗಳೂರಿಗೆ ಬಂದ ನಾನು ಅನುಭವಿಸಿದ ಕೆಲ ಹಸಿವಿನ ನೋವು ಇಂದಿಗೂ ನನ್ನ ಕಣ್ಮುಂದಿದೆ... ಬೆಳಗ್ಗೆ ತಿಂಡಿ ತಿಂದರೆ ಮಧ್ಯಾಹ್ನ ಊಟಕ್ಕೆ ಕಾಸಿಲ್ಲ.. ಹೀಗೆ ಒಂದೆರಡು ದಿನ ಕಾಲಿ ನೀರು ಕುಡಿದು ಜೀವಿಸಿದ್ದು ಇದೆ. ಈ ನೋವಿನಲ್ಲೂ ಸಾಧನೆ ಮಾಡಬೇಕೆಂಬ ಛಲ ನನ್ನನ್ನು ಬೆಂಗಳೂರಿನಲ್ಲಿ ಕಟ್ಟಿ ಹಾಕಿ ಬಿಡುವಂತೆ ಮಾಡಿದೆ. ಇಂದು ನನ್ನ ಸ್ಯಾಲರಿ ಸ್ವಲ್ಪ ಏರಿಕೆಯಾಗಿದೆ ಆದರೂ ನನ್ನಲ್ಲೊಂದು ಕೊರಗಿದೆ... ಬೆಂಗಳೂರಿಗೆ ಬಂದು ಏನೂ ಸಾಧನೆ ಮಾಡಲಾಗಲಿಲ್ಲ.. ಜೊತೆಗೆ ಕೈಯಲ್ಲಿ ನಯಾಪೈಸೆಯೂ ಉಳಿಯಲಿಲ್ಲ...
ಈ ಸಂದರ್ಭದಲ್ಲಿ ನನಗೆ ಬೆಂಗಳೂರಿನಲ್ಲಿ ಸಹಕರಿಸಿದ ಎಲ್ಲರಿಗೂ ಪ್ರೀತಿಯ ಅಭಿನಂದನೆಗಳನ್ನು ತಿಳಿಸಲೇ ಬೇಕು



ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!

ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...