Saturday 24 September 2022

ಮತ್ತೆ ನೆನಪಾಗಬೇಕಿದೆ ರಾಣಿ ಚೆನ್ನಭೈರಾದೇವಿ...!!! ಇತಿಹಾಸವೂ ಮರೆತ ರಾಣಿಯ ಪೌರುಷದ ಕಥೆಯಿದು..!

 


ಕೆಲವೊಮ್ಮೆ ಭಾರತದಲ್ಲಿ ಆಳ್ವಿಕೆ ನಡೆಸಿದ ಸರ್ಕಾರಗಳ ಮೇಲೆ ನಿಜವಾಗಿಯೂ ಜಿಗುಪ್ಸೆ ಬಂದು ಬಿಡುತ್ತದೆ. ವಿದೇಶಗಳಲ್ಲಿರುವಂತೆ ಭಾರತದಲ್ಲಿ ಇತಿಹಾಸವನ್ನು ಸಂರಕ್ಷಿಸಿ ಇಡುತ್ತಿಲ್ಲವಲ್ಲ ಎಂದು ಬೇಸರವಾಗುತ್ತದೆ. ಭಾರತದಲ್ಲಿ ಇತಿಹಾಸದ ಬಗ್ಗೆ ಯಾವ ಮಟ್ಟಿಗೆ ತಾತ್ಸಾರ ಇದೆ ಅಂದ್ರೆ ಇತಿಹಾಸ ಅಂದ್ರೆ ಕೇವಲ ಗಾಂಧಿ, ಮೊಘಲ್‌ ವಂಶ, ಆದಿಲಶಾಹಿಗಳು, ಟಿಪ್ಪು ಸುಲ್ತಾನ.. ಇಷ್ಟೇ...!!!!!


ಆದ್ರೆ ಅದಕ್ಕೂ ಮೀರಿದ ಹಲವು ಐತಿಹಾಸಿಕ ಕುರುಹುಗಳು ಭಾರತದಲ್ಲಿ ಇದೆ ಅಂದರೆ ನಂಬಲೇಬೇಕು..!!

ನಿಮ್ಮಲ್ಲಿ ನೀವು ಪ್ರಶ್ನೆ ಮಾಡಿಕೊಳ್ಳಿ, ಗೇರುಸೊಪ್ಪೆಯಲ್ಲಿ ರಾಣಿ ಚೆನ್ನಭೈರಾದೇವಿ ಎಂಬವಳು ಒಬ್ಬಳು ಇದ್ದಳು ಎಂದು ನಮ್ಮ ನಿಮ್ಮೆಲ್ಲರಲ್ಲಿ ಅದೆಷ್ಟು ಜನರಿಗೆ ಗೊತ್ತು..? 


ಹೌದು ರಾಣಿ ಚೆನ್ನಭೈರಾದೇವಿಯ ಇತಿಹಾಸ ನನಗೂ ಗೊತ್ತಿಲ್ಲ ಆದ್ರೆ ಪ್ರಾಯಶಃ ನಾನು ದಿಗ್ವಿಜಯ ವಾಹಿನಿಯಲ್ಲಿ ಕೆಲಸ ಮಾಡ್ತಿದ್ದಾಗ ನನ್ನ ಜತೆ ಕೆಲಸ ಮಾಡ್ತಿದ್ದ ಶೈಲಜಾ ಅವರು ಚೆನ್ನಭೈರಾದೇವಿಯ ಬಗ್ಗೆ ಕಥೆಗಳನ್ನ ಹೇಳ್ತಾ ಇದ್ರು. ಆ ಕಥೆಗಳನ್ನ ಕೇಳ್ತಾ ಇದ್ರೆ ಮೈ ರೋಮಾಂಚನ ಅನ್ನಿಸೋದು. ಒಬ್ಬ ರಾಣಿ ಪೋರ್ಚುಗೀಸರು, ಕೆಳದಿ ಅರಸರು, ಬಿಜಾಪುರದ ಸುಲ್ತಾನರ ಆಳ್ವಿಕೆಯ ನಡುವೆಯೇ 54 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಳು ಎಂದರೆ ನಿಜವಾಗಿಯೂ ನಂಬಲು ಅಸಾಧ್ಯ..!



ಇತಿಹಾಸದ ಪ್ರಕಾರ ವಿಜಯನಗರದ ಸಾಳುವ ವಂಶದ ಒಂದು ಶಾಖೆಯ ಅರಸರು ಗೇರುಸೊಪ್ಪೆಯನ್ನು ಆಳುತ್ತಿದ್ದರೆ ಮತ್ತೊಂದು ವಂಶದವರು ಹಾಡುವಳ್ಳಿಯನ್ನು ಆಳುತ್ತಿದ್ದರು. ಗೇರುಸೊಪ್ಪೆಯ ಅರಸ ಇಮ್ಮಡಿ ದೇವರಾಯ (1515-50) ಪೋರ್ಚುಗೀಸರ ಮೇಲೆ ಯುದ್ಧಮಾಡಿದ. ಮಡಗೋವೆಯ ಬಳಿ ೧೫೪೨ರಲ್ಲಿ ನಡೆದ ಭೀಕರ ಯುದ್ಧದಲ್ಲಿ ಆತ ಸೋಲನ್ನಪ್ಪಿದ ಬಳಿಕ ಪೋರ್ಚುಗೀಸರು ಆತನ ರಾಜಧಾನಿ ಭಟ್ಕಳವನ್ನು ಸುಟ್ಟು ಹಾಕಿದರು. ಆತನ ಪತ್ನಿ ಚೆನ್ನಾದೇವಿಯ ತಂಗಿಯೇ ಚೆನ್ನಭೈರಾದೇವಿ. ಪೋರ್ಚುಗೀಸರ ಜೊತೆಗಿನ ಒಪ್ಪಂದದಂತೆ ಕಪ್ಪವನ್ನು ಕೊಡಲಿಲ್ಲವೆಂದೂ,  ಮಹಮದೀಯರ ಹಡಗುಗಳಿಗೆ ಭಟ್ಕಳ ಬಂದರಿನಲ್ಲಿ ಆಶ್ರಯ ಕೊಟ್ಟಿರುವಳೆಂದು ಆರೋಪಿಸಿ, ಪೋರ್ಚುಗೀಸ್ ಕಪ್ತಾನ ಆಲ್ಫನ್ಸೋ ಡಿಸೋಜಾ ಭಟ್ಕಳದ ಮೇಲೆ ದಾಳಿ ಮಾಡಿ ರಾಣಿಯನ್ನು ಸೋಲಿಸಿ ಭಟ್ಕಳವನ್ನು ಸುಟ್ಟುಹಾಕಿದ. ಅಕ್ಕನ ನಂತರ ತಂಗಿ ಚೆನ್ನಭೈರಾದೇವಿಗೆ ಹಾಡುವಳ್ಳಿಯ ಜೊತೆಗೆ ಗೇರುಸೊಪ್ಪೆಯ ಅಧಿಕಾರವೂ ದೊರಕಿತು. 

ಚೆನ್ನಭೈರಾದೇವಿ ದಕ್ಷಿಣ ಗೋವಾದಿಂದ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಭಟ್ಕಳ, ಮಲ್ಪೆ,ಹೊನ್ನಾವರ, ಮಿರ್ಜಾನ್, ಅಂಕೋಲಾ, ಬೈಂದೂರು, ಕಾರವಾರಗಳಲ್ಲಿ ಆಳ್ವಿಕೆ ನಡೆಸುತ್ತಿದ್ದಳು ಎಂಬ ಮಾಹಿತಿ ಇದೆ. ಕರಾವಳಿಯ ಈ ಪ್ರಾಂತ್ಯಗಳ ಜತೆ ಘಟ್ಟದ ಮೇಲಿನ ಭಾರಂಗಿ, ಮರಬಿಡಿ, ಕರೂರು,ಹನ್ನಾರ, ಬಿದನೂರು, ಸೌಳನಾಡು, ಆವಿನಹಳ್ಳಿ ಸೀಮೆಗಳು ಚೆನ್ನಭೈರಾದೇವಿಯ ಆಡಳಿತಕ್ಕೆ ಒಳಪಟ್ಟಿದ್ದವು ಎಂದು ಹೇಳಲಾಗುತ್ತಿದೆ. ಚೆನ್ನಭೈರಾದೇವಿಯ ಆಳ್ವಿಕೆಯ ಅವಧಿಯಲ್ಲಿ ಯುರೋಪಿನ ರಾಷ್ಟ್ರಗಳಿಗೆ ಕಾಳುಮೆಣಸು, ದಾಲ್ಚಿನ್ನಿ, ಅಡಿಕೆ, ಶುಂಠಿ, ಗಂಧಗಳನ್ನು ರಫ್ತು ಮಾಡಲಾಗುತ್ತಿತ್ತಂತೆ.


 ಚೆನ್ನಭೈರಾದೇವಿಯ ಕಾಲದ ಮಿರ್ಜಾನ್ ಕೋಟೆ, ಕಾನೂರು ಕೋಟೆಗಳು ಈಗಲೂ ಕಾಣಬಹುದು ಆದ್ರೆ ಕಾಡಿನ ನಡುವೆ ಇರುವ ಈ ಕೋಟೆ ಸರಿಯಾದ ನಿರ್ವಹಣೆ ಇಲ್ಲದೇ ಪಾಳುಬಿದ್ದಿದೆ. ಪೋರ್ಚುಗೀಸರ ಮತಾಂತರದಿಂದ ತಪ್ಪಿಸಿಕೊಳ್ಳಲು ಚೆನ್ನಭೈರಾದೇವಿಯ ರಾಜ್ಯಕ್ಕೆ ಆಶ್ರಯ ಕೋರಿ ಬಂದ ಸಾರಸ್ವತ ಬ್ರಾಹ್ಮಣರು ಮತ್ತು ಕೊಂಕಣಿಗರಿಗೆ ರಾಣಿ ಚೆನ್ನಭೈರಾದೇವಿ ತನ್ನ ರಾಜ್ಯದಲ್ಲಿ ಆಶ್ರಯ ನೀಡಿದ್ದಳು ಎಂದು ಹೇಳಲಾಗ್ತಿದೆ. ಜೈನ ಮತದವಳಾದ ರಾಣಿ ಅನೇಕ ಶೈವ, ವೈಷ್ಣವ ಮತ್ತು ಶಕ್ತಿ ದೇಗುಲಗಳನ್ನು ಕಟ್ಟಲು, ಜೀರ್ಣೋದ್ದಾರಕ್ಕೂ ನೆರವು ನೀಡಿದ್ದಳು ಎಂದು ಹೇಳಲಾಗುತ್ತಿದೆ . ಬಿದರೂರು ಅಥವಾ ವೇಣುಪುರದ ಯೋಗಾನರಸಿಂಹ ಸ್ವಾಮಿ ದೇಗುಲ ಮತ್ತು ವರ್ಧಮಾನ ಬಸದಿಗಳ ಜೀರ್ಣೋದ್ದಾರಕ್ಕೂ ರಾಣಿ ಚೆನ್ನಭೈರಾದೇವಿ ನೆರವು ನೀಡಿದ್ದಳು. "ಕರ್ನಾಟಕ ಶಬ್ದಾನುಶಾಸನ " ಎಂಬ ವ್ಯಾಕರಣ ಗ್ರಂಥ ರಚನಾಕಾರ, ಸ್ವಾದಿ ದಿಗಂಬರ ಜೈನ ಮಠದ ಯತಿ ಅಭಿನವ ಭಟ್ಟಾಕಲಂಕರು ಈ ರಾಣಿಯ ಆಶ್ರಯದಲ್ಲಿದ್ದರು ಎಂಬ ಐಹಿತ್ಯವಿದೆ. 

ರಾಣಿ ಚೆನ್ನಭೈರಾದೇವಿಯ ಆಳ್ವಿಕೆಯ ಕಾಲದಲ್ಲಿ ಈಗಿನ ಕೇರಳದ ಕೊಚ್ಚಿನ್‌ ಬಂದರು ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಿತ್ತು. ಕೊಚ್ಚಿನ್‌ ಬಂದರಿನ ಕ್ಯಾಪ್ಟನ್‌ ಪೋರ್ಚುಗಲ್‌ನ ಆಲ್ಫೋನ್ಸೋ ಮೆಕ್ಸಿಯ ಎಂಬ ಪ್ರಾಂತ್ಯದ ರಾಜನಿಗೆ ಬರೆದ ಪತ್ರದಲ್ಲಿ "ಬಟಿಕಳ(ಭಟ್ಕಳ) ಮತ್ತು ಗೋವಾಗಳ ನಡುವೆ ಒನೋರ್(ಕಾನೂರು),ಮರ್ಜೆನ್(ಮಿರ್ಜಾನ್) ಮತ್ತು ಅಂಕೋಲಾಗಳೆಂಬ ಜಾಗಗಳಿವೆ. ಅವುಗಳಿಂದ ವಾರ್ಷಿಕ ೫೦೦೦ ಕ್ರೂಜೇಡೋಸ್(ಹದಿನೈದನೆದ ಶತಮಾನದಲ್ಲಿದ್ದ ಪೋರ್ಚುಗೀಸ್ ಬಂಗಾರದ ನಾಣ್ಯ)ಗಳಷ್ಟು ಕಾಳು ಮೆಣಸು ವಾರ್ಷಿಕವಾಗಿ ರಫ್ತಾಗುತ್ತಿದೆ ಎಂದು ನಾನು ಕೇಳಿದ್ದೇನೆ. ಈ ಜಾಗಗಳು ಗೇರುಸೊಪ್ಪೆಯ ರಾಣಿ(ಚೆನ್ನಭೈರಾದೇವಿ)ಯ ಆಳ್ವಿಕೆಗೆ ಒಳಪಟ್ಟಿದೆ. ಈ ಕಾಳುಮೆಣಸು ಕೊಚ್ಚಿನ್ನಿನ ಕಾಳುಮೆಣಸಿಗಿಂತ ದಪ್ಪವೂ, ಕಮ್ಮಿ ತೂಕ ಮತ್ತು ಖಾರದ್ದೂ ಆಗಿವೆ. ಈ ಜಾಗಗಳನ್ನು ನಮ್ಮ ವಶಕ್ಕೆ ಪಡೆಯಬೇಕು" ಎಂದು ಬರೆಯುತ್ತಾನೆ. ಆ ಬಳಿಕ 1606ರಲ್ಲಿ ಕೆಳದಿ ಮತ್ತು ಬಿಳಗಿಯ ಅರಸರು ಒಟ್ಟು ಸೇರಿ ಗೇರುಸೊಪ್ಪೆಯ ಮೇಲೆ ಆಕ್ರಮಣ ಮಾಡುತ್ತಾರೆ. ಈ ಸಂದರ್ಭದಲ್ಲಿ ನಡೆದ  ಯುದ್ಧದಲ್ಲಿ ತನ್ನ ಸೇನಾಧಿಪತಿ ಗೊಂಡನಾಯಕನ ಮೋಸದಿಂದಾಗಿ ರಾಣಿ ಚೆನ್ನಭೈರಾದೇವಿ ಸೋಲುತ್ತಾಳೆ. ಈ ಸೋಲಿನ ಬಳಿಕ ಗೇರುಸೊಪ್ಪೆ ಕೆಳದಿ ಸಾಮ್ರಾಜ್ಯದ ಭಾಗವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

 ಇವಿಷ್ಟು ಮಾತ್ರವಲ್ಲದೇ ರಾಣಿ ಚೆನ್ನಭೈರಾದೇವಿ ತನ್ನ ಆಳ್ವಿಕೆಯ ಕಾಲದಲ್ಲಿ ಅನೇಕ ಯುದ್ಧಗಳನ್ನು ನಡೆಸಿದ್ದರು ಎಂದು ಹೇಳಲಾಗಿದೆ. 1559 ಮತ್ತು 1570ರಲ್ಲಿ ಪೋರ್ಚುಗೀಸರ ವಿರುದ್ಧ ನಡೆದ ಯುದ್ಧಗಳಲ್ಲಿ ರಾಣಿ ಚೆನ್ನಭೈರಾದೇವಿ ಗೆಲುವು ಸಾಧಿಸಿದ್ದಳು ಎಂದು ಹೇಳಲಾಗಿದೆ. ಇದಷ್ಟೇ ಅಲ್ಲದೇ 1671ರಲ್ಲಿ ನಡೆದ ಯದ್ಧದ ಸಂಯುಕ್ತ ಸೇನೆಯ ನಾಯಕತ್ವವನ್ನು ರಾಣಿ ಚೆನ್ನಭೈರಾದೇವಿ ವಹಿಸಿದ್ದಳು ಎಂದು ಹೇಳಲಾಗುತ್ತಿದೆ, ಈ ಸಂಯುಕ್ತ ಸೇನೆಗೆ ಗುಜರಾತ್‌, ಬೀದರ್‌ನ ಸುಲ್ತಾನರ ಬಿಜಾಪುರದ ಆದಿಲ್‌ಶಾಹಿಗಳು ಹಾಗೂ ಕೇರಳದ ಜಾಮೋರಿನ್‌ ದೊರೆಗಳನ್ನು ಒಳಗೊಂಡಂತೆ ಹಲವು ರಾಜರು ಈ ಸಂಯುಕ್ತ ಸೇನೆಯಲ್ಲಿದ್ದರು ಎಂಬ ಉಲ್ಲೇಖವಿದೆ.



 ಈ ಕರುನಾಡಿನ ಹೆಮ್ಮೆಯ ರಾಣಿಯ ಕುರಿತಾಗಿ ವಿದೇಶದಲ್ಲಿರುವ ಕೃತಿಗಳಲ್ಲಿ ಉಲ್ಲೇಖಗಳಿವೆ. ಅಮೆರಿಕದ ಟೆಕ್ಸಾಸ್‌ ವಿಶ್ವವಿದ್ಯಾನಿಲಯದ ಆಂಗ್ಲಭಾಷಾ ಪ್ರಾಧ್ಯಾಪಕಿ ಮತ್ತು ದಕ್ಷಿಣ ಏಷ್ಯಾ ಇನ್ಸ್ಟಿಟ್ಯೂಟಿನಲ್ಲಿ ತೌಲನಿಕ ಸಾಹಿತ್ಯ ಮುಖ್ಯಸ್ಥೆಯಾಗಿರುವ ಹನ್ನಾಚಾಪೆಲ್ಲೆ ವೋಜಿಹೋಸ್ಕಿ ತಮ್ಮ ಪ್ರಬಂಧಗಳಲ್ಲಿ ರಾಣಿ ಚೆನ್ನಭೈರಾದೇವಿಯ ಸಾಹಸಗಳನ್ನು ಉಲ್ಲೇಖಿಸಿದ್ದಾರೆ. "ರಾಣಿ ಚೆನ್ನಭೈರಾದೇವಿಯೂ ಇಂಗ್ಲೆಂಡ್‌ ರಾಣಿ ಎಲಿಜಬೆತ್‌ರ ಸಮಕಾಲೀನರು ಮತ್ತು ಅನೇಕ ವಿಚಾರಗಳಲ್ಲಿ ರಾಣಿ ಎಲಿಜಬೆತ್‌ಗೂ ಮಿಗಿಲಾದವರು, ತನ್ನ ಚಾಣಾಕ್ಷತನದ ಮೈತ್ರಿಗಳು ಮತ್ತು ತನ್ನ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮೇಲುಗೈಯನ್ನ ಬಿಟ್ಟುಕೊಡದೇ ಸಮರ್ಥವಾಗಿ ಆಳ್ವಿಕೆ ನಡೆಸಿದ್ದಳು" ಎಂದು ಬರೆದಿದ್ದಾರೆ. ಇಷ್ಟು ಮಾತ್ರವಲ್ಲದೇ 1623ರಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್‌ ಪ್ರವಾಸಿಗ ಪೀಟ್ರೋ ಡೆಲ್ಲಾವಿಲ್ಲೆ ಚೆನ್ನಭೈರಾದೇವಿಯ ಕಥೆಗಳನ್ನು ತನ್ನ ಸಾಹಸ ಕಥನಗಳಲ್ಲಿ ದಾಖಲಿಸುತ್ತಾನೆ. 



ಯುದ್ಧದಲ್ಲಿ ರಾಣಿ ಚೆನ್ನಭೈರಾದೇವಿಯನ್ನು ಮೋಸದಲ್ಲಿ ಸೆರೆಹಿಡಿದ ಕೆಳದಿ ನಾಯಕ ವೆಂಕಟಪ್ಪನಾಯಕ ಆಕೆಯನ್ನ ಸಾವಿನವರೆಗೂ ನಗಿರೆಯ ಸೆರೆಮನೆಯಲ್ಲಿ ಹಿಡಿದಿಟ್ಟಿದ್ದ ಮತ್ತು ತನಗೆ ಸಹಾಯ ಮಾಡಿದ ಗೊಂಡನಾಯಕನನ್ನು ವೆಂಕಟಪ್ಪನಾಯಕ ಕೊಲ್ಲಿಸಿದ ಎಂದು ಇತಿಹಾಸಕಾರ, ಲೇಖಕ, ಡಾ | ಗಜಾನನ ಶರ್ಮ ತಮ್ಮ ಪುಸ್ತಕ ಚೆನ್ನಭೈರಾದೇವಿಯಲ್ಲಿ ಉಲ್ಲೇಖಿಸುತ್ತಾರೆ. ಅದೇನೆ ಇರಲಿ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ರಾಣಿ ಚೆನ್ನಭೈರಾದೇವಿಯ ಬಗ್ಗೆ ನಮ್ಮಲ್ಲೇ ಅನೇಕರಿಗೆ ತಿಳಿಯದಿರುವುದು ವಿಪರ್ಯಾಸವೇ ಸರಿ.!!! ಆಕೆ ಕಟ್ಟಿಸಿದ ಕಾನೂರಿನ ಕೋಟೆ ಇಂದಿಗೂ ಪಾಳುಬಿದ್ದು ನಿಧಿಯ ಆಸೆಗೆ ನಿಧಿ ಚೋರರ ಅತಿಯಾಸೆಗೆ ಹಾಳಾಗಿ ಹೋಗಿದೆ. ಮತ್ತು ಅಲ್ಲಿನ ವಿಗ್ರಹಗಳೆಲ್ಲವೂ ಅಳಿವಿನ ಅಂಚಿಗೆ ಹೋಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ.






Thursday 5 May 2022

ಬದುಕು... ಬದಲಾಗದೇ...?? ಬಣ್ಣವೂ ಬರಲಾರದೇ?

ಜಂಜಾಟದ ಬದುಕಿನಲ್ಲಿ ನಾವು ಅದೆಷ್ಟು ಸಉಂದರ ಕ್ಷಣಗಳನ್ನು ಕಳೆದುಕೊಂಡು ಬಿಡುತ್ತೇವೆ ಅಲ್ವಾ..? ಏಕೋ ಏನೋ ಬದುಕಿನಲ್ಲಿ ಸುಂದರ ಕ್ಷಣಗಳಿಗೆ ಸಮಯವೇ ಇಲ್ಲವೋ ಅಥವಾ ನಾವು ಸಮಯ ಮಾಡಿಕೊಳ್ಳುತ್ತಿಲ್ಲವೋ ಎಂದು ಭಾಸವಾಗುತ್ತಿದೆ. ಜಂಜಾಟಗಳಿಂದಾಗಿ ನಮ್ಮ ಹವ್ಯಾಸಗಳನ್ನು ನಾವು ಹೇಗೆ ಕಳೆದಕೊಂಡುಬಿಡುತ್ತೇವೆ ಎನ್ನವುದಕ್ಕೆ ಸ್ವತಃ ನಾನೇ ಸಾಕ್ಷಿ…!!!

ಹೌದು ಇಂದು ನಾನು ಬರೆಯಹೊರಟಿರುವುದು ನನ್ನ ಸ್ವಂತ ಕಥೆಯೊಂದನ್ನು.. ಒಬ್ಬ ಮಾತನಾಡಲು ಧೈರ್ಯ ಇಲ್ಲದ, ಸರಿಯಾಗಿ ವ್ಯವಹಾರ ಜ್ಞಾನ ಇಲ್ಲದ ನನ್ನದೇ ಕಥೆಯೊಂದನ್ನು..
 ಸುಮಾರು ನಾಲ್ಕು ವರುಷಗಳ ಹಿಂದೆ ಮನಸ್ಸಿನಲ್ಲಿಸಾವಿರಾರು ಕನಸುಗಳನ್ನು ಹೊತ್ತು ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಹತ್ತಿದ್ದೆ. ಕನಸುಗಳೇನೋ ಇತ್ತು ಆದರೆ ನನಸು ಮಾಡುವಂತಹಾ ಮನಸ್ಥತಿ ಬೇಕಲ್ಲ..? ಕಷ್ಟ, ನಷ್ಟ, ಏನೋ ಗೊತ್ತಿಲ್ಲ ಅಂತೂ ಬೆಂಗಳೂರಿಗೆ ಬಂದಿದ್ದಾಯ್ತು, ಜೀವನಕ್ಕೆಂದು ಒಂದು ಕೆಲಸ ಹಿಡಿದಿದೂ ಆಯ್ತು.. ನಾಲ್ಕು ವರ್ಷಗಳಲ್ಲಿ ನೀನು ದುಡಿದ ಹಣ ಎಷ್ಟು? ನಿನ್ನ ಖಾತೆಯಲ್ಲಿರುವ ಉಳಿತಾಯ ಎಷ್ಟು ಎಂದು ಯಾರಾದ್ರೂ ಕೇಳಿದ್ರೆ ಪೆಚ್ಚುಮೋರೆ ಹಾಕುತ್ತಾ ಒಂದು ನಗುವಿನಿಂದ ನಾಚಿಕೆಯಿಂದ ಉತ್ತರಿಸುತ್ತೇನೆ.. ಶೂನ್ಯ.. ಬರಿ ಶೂನ್ಯ ಅಷ್ಟೇ.. ಹಾಗಾದ್ರೆ ದುಡಿದ ಹಣ ಏನು ಮಾಡ್ತಿದ್ದಿ? ಸಿಕ್ಕ ಸಂಬಳ ಏನಾಯ್ತು? ಎಲ್ಲಾ ಪ್ರಶ್ನೆಗಳಿಗೆ ನನ್ನಲ್ಲೇ ಉತ್ತರ ಇಲ್ಲ. 
ಹೌದು ಬೆಂಗಳೂರಲ್ಲಿ ಕೆಲವರನ್ನು ನಂಬಿ ತಪ್ಪು ಮಾಡಿರುವೆ ಏನೋ.. ಇನ್ನೂ ನಂಬುತ್ತಾ ತಪ್ಪು ಮಾಡುತ್ತಿರುವೆ ಏನೋ ಎಂದು ನನಗೆ ಇಂದಿಗೂ ಅನಿಸುತ್ತಿದೆ. ಆದ್ರೆ ಉತ್ತರ, ಇಲ್ಲ.. ಅದೇ ವಿಶ್ವಾಸಘಾತುಕರನ್ನು ನಾನು ಇಂದಿಗೂ ನಂಬುತ್ತಿರುವೆ. ಯಾಕೆ..? ಪ್ರಶ್ನೆಗೆ ಇಂದಿಗೂ ಉತ್ತರ ಇಲ್ಲ..
 ಬಲ್ಲವರು ಹೇಳುವುದುಂಟು ಯಾರಾದರೂ ಒಮ್ಮೆ ಕೆಟ್ಟ ಮೇಲೆ ಪಾಠ ಕಲಿಯುತ್ತಾರೆ ಎಂದು.. ಉಹೂಂ.. ಅದೆಷ್ಟು ಬಾರಿ ನಂಬಿಕೆದ್ರೋಹವಾದರೂ ಅದೇ ನಂಬಿಕೆ ದ್ರೋಹಿಗಳನ್ನು ಮತ್ತೆ ಮತ್ತೆ ನಂಬಿ ಅವರ ಕಷ್ಟಗಳಿಗೆ ಮರುಗುತ್ತೇವಲ್ಲಾ.. ಈ ಬೆಂದು, ಬೇಯುತ್ತಿರುವ ಕಾಂಕ್ರೀಟ್ ಕಾಡಿನಲ್ಲಿ ನಾನು ಮಾಡುತ್ತಿರುವ ಅತಿ ದೊಡ್ಡ ತಪ್ಪು ಅದೇ ಏನೋ.. 
ಇರಲಿ ಈ ಹಿಂದೆ ಬರೆದ ಕೆಲವು ಸಾಲುಗಳಲ್ಲಿ ನನಗಾದ ನಂಬಿಕೆ ದ್ರೋಹವನ್ನು ಹಂಚಿಕೊಂಡಿದ್ದೆ, ಆದರೆ ಅದೇ ಮತ್ತೆ ಮುಂದುವರೆದರೆ..?ಹಹ್ಹಾ.. ಮುಂದುವರೆದರೆ ಏನು ಮುಂದುವರೆಯಿತು.
೩ ವರ್ಷದ ಹಿಂದಿನ ಮಾತು ಸಾಕಪ್ಪಾ ಈ ಬೆಂಗಳೂರು ಸಹವಾಸವೇ ಸಾಕು ಎಂದು ನಾನು ಬೆಂಗಳೂನ್ನು ಬಿಟ್ಟು ಮನಶ್ಶಾಂತಿಯನ್ನು ಅರಸಿ ಹೋಗಿದ್ದೆ. ಮತ್ತೆ ಅಪ್ಪನ ಆಶ್ರಯಕ್ಕೆ ಹೋಗಿದ್ದೆ, ಎಲ್ಲಾ ಕಳೆದುಕೊಂಡು ಅಳುತ್ತಾ ಬರಿಗೈಯಲ್ಲಿ ಅಪ್ಪನ ಮುಂದೆ ನಿಂತಿದ್ದೆ. ಬಹುಶಃ ಅಂದು ಅಪ್ಪ ನನಗೆ ಬೈದು ನೀನು ಮನೆಗೆ ಬರಲೇಬೇಡ ಎಂದು ಹೇಳಿದ್ದರೆ ನಾನು ಇಂದು ಏನಾದರೂ ಮೂರು ಕಾಸು ಸಂಪಾದಿಸುತ್ತಿದ್ದೆನೋ ಏನೋ.. ಆದರೆ ಅವರ ರಕ್ತದ ಸಂಬಂಧ ಹಾಗೆ ಹೇಳಲು ಬಿಡಬೇಕಲ್ಲ.. ಮಗನೇ ಬಾ ನಾನು ಜೀವಂತವಾಗಿರುವವರೆಗೂ ನಿನಗೆ ನಾನು ಎರಡು ಹೊತ್ತು ಅನ್ನ ಹಾಕಲಾರೆನೆ ಎಂದು ಬಿಗಿದಪ್ಪಿ ಬರಮಾಡಿಕೊಂಡರು.. ಅಪ್ಪ ಮಾಡಿಟ್ಟ ಆಸ್ತಿಯನ್ನು ಮಗ ನುಂಗಿದ ಅಂತಾರಲ್ಲ.. ಬಹುಶಃ ನನ್ನನ್ನು ನೋಡಿಯೇ ಆ ಮಾತು ಹೇಳಿರಬೇಕು.
ಅಂದಿನಿಂದ ಇನ್ನೊಂದೆರಡು ತಿಂಗಳು ಮನೆಯಲ್ಲೇ ತಿಂದುಂಡುಕೊಂಡು ಆರಾಮವಾಗಿ ಜೀವನ ನಡೆಸುತ್ತಿದ್ದೆ. ಅದೇನಾಯ್ತೋ ಗೊತ್ತಿಲ್ಲ ಹತಾತ್ತನೇ ಬೆಂಗಳೂರಿಗೆ ಹೊರಟು ನಿಂತು ಬಿಟ್ಟೆ, ೧೫ ಸಾವಿರ ಸಂಬಳದ ಕೆಲಸ ಬಿಟ್ಟು ೫ ಸಾವಿರ ಸಂಬಳಕ್ಕಾಗಿ ಅದೊಂದು ವಾರ್ತಾ ವಾಹಿತಿನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ಅಲ್ಲೋ ತಿಂಗಳಿಗೆ ಸರಿಯಾಗಿ ಸಂಬಳ ಸಿಗಲ್ಲ,ಕೆಲವೊಮ್ಮೆ ಊಟ ತಿಂಡಿಗೂ ಪರದಾಟ ಏನಾದ್ರೂ ಮಾಡೋಣ ಎಂದರೆ ಅದೇ ಭಯ..!!! ಆ ಸಮಯದಲ್ಲಿ ದೇವಮಾನವ ಯಾರಾದ್ರೂ ಸಿಕ್ಕಿದ್ರೆ ಅದು ಮಧು ಮಾತ್ರ, ಇರಲು ಒಂದು ಸೂರು, ೩ ಹೊತ್ತಿನ ಊಟಕ್ಕೆ ತೊಂದರೆ ಇಲ್ಲದ ಬದುಕು. ತಿಂಗಳ ಬಾಡಿಗೆ ಅದೂ ಗೆಳೆಯರ ಒತ್ತಾಯದಿಂದ ಆತ ನನ್ನ ಬಳಿ ಕೇಳಿದ್ದ ಅಷ್ಟೇ..

 ಇದೇ ವೇಳೆ ಒಕ್ಕರಿಸಿಕೊಂಡಿತು ನೋಡಿ, ಮಹಾಮಾರಿ, ಮಹಾಮೃತ್ಯು, ಅದೇನೋ ಪಿಶಾಚಿ ಕೊರೊನಾ.. ಅದೆಷ್ಟು ಜನರ ಜೀವನ ಹಾಳು ಮಾಡಿದೆಯೋ ಗೊತ್ತಿಲ್ಲ ನನ್ನ ಜೀವನ ಹಾಳು ಮಾಡಿದ್ದಂತೂ ಸ್ಪಷ್ಟ. ಕೊರೊನಾ ಪ್ರಾರಂಭದ ವೇಳೆ ಸಂಬಳ ನನಗೆ ೫ ಸಾವಿರದಿಂದ ೧೨ಸಾವಿರಕ್ಕೆ ಏರಿಕೆ ಆಗಿತ್ತು. ಆಗಿದ್ದಾಗಲಿ ತಿಂಗಳಿಗೆ ೧ ಸಾವಿರ ಆದರೂ ಉಳಿಸೋಣ ಎಂದುಕೊAಡು ಇದ್ದವನಿಗೆ ಕರೊನಾ ಅಕ್ಷರಶಃ ದೊಡ್ಡ ಹೊಡೆತ ನೀಡಿತ್ತು. ಎಲ್ಲರಿಗೂ ವರ್ಕ್ ಫ್ರಂ ಹೋಂ ಘೋಷಣೆ ಆಗಿತ್ತಲ್ಲ, ಎಲ್ಲರೂ ಊರಿಗೆ ಹೊರಟು ನಿಂತಾಗ ರೂಮಲ್ಲಿ ಏಕಾಂಗಿ ಬದುಕು.. ಹೋಟೆಲ್ ಅನ್ನ ತಿನ್ನು, ದಿನಾ ೧೪ ಕಿ.ಮೀ ಪ್ರಯಾಣ ಮಾಡು. ಇನ್ನೆಲ್ಲಿಯ ಉಳಿತಾಯ???? ಇಷ್ಟೇಲ್ಲಾ ಸಮಸ್ಯೆಗಳ ನಡುವೆ ಅದೇನೋ ಗೊತ್ತಿಲ್ಲ ಅಪ್ಪ ನನ್ನ ಕೈಬಿಟ್ಟಿರಲಿಲ್ಲ ಏನಾದರೂ ಬೇಕಾದ್ರೆ ಕಾಲ್ ಮಾಡು ಅಂತಿದ್ರು. ಆದರೆ ನಾನು ಮಾಡಿರಲಿಲ್ಲವೇನೋ... ಇಷ್ಟೆಲ್ಲಾ ಕಷ್ಟಗಳ ನಡುವೆ ಅತಿ ಆಸೆ ಗತಿ ಕೇಡು ಎಂಬಂತೆ, ನಾನು ಕೆಲಸ ಮಾಡ್ತಿದ್ದ ಕಂಪನಿಯ ನಿರ್ದೇಶಕ ಭಂಡ ಕೆಲಸಕ್ಕೆ ಕೈ ಹಾಕಿದ್ದ, ಇತ್ತ ಬರಬೇಕಿದ್ದ ಸುಮಾರು ೨ ತಿಂಗಳ ಸಂಬಳ ಬಾಕಿ ಇತ್ತು ಅತ್ತ ಸಿಎಂ ಪುತ್ರನ ಹಗರಣ ಬಯಲಿಗೆ ಎಳೆಯುತ್ತೇನೆ ಎಂದು ಪುಂಗುತ್ತಾ ಅದೊಂದು ಕಾರ್ಯಕ್ರಮ ಶುರು ಮಾಡಿದ, ಶುರು ಮಾಡಿದ್ದೇ ತಡ. ಖೇಲ್ ಖತಂ ನಾಟಕ್ ಬಂದ್.. ಎಲ್ಲಿ ಇತ್ತ ಸಂಬಳವೂ ಇಲ್ಲ, ಅತ್ತ ಎಂಡಿ ಅನ್ನಿಸಿಕೊಂಡವ ಪರಾರಿ.. ಏನು ಮಾಡುವುದು ಎಂದು ತಿಳಿಯದೇ ಕಳೆದುಹೋಗಿಬಿಟ್ಟೆ. ಅದೇ ಸಮಯದಲ್ಲಿ ಇನ್ನೊಬ್ಬರು ಕರೆದು ಕೆಲಸವನ್ನೇನೋ ಕೊಟ್ಟರು ಆದ್ರೆ ಸಂಬಳ.. ಹೆಚ್ಚೇನೂ ಇಲ್ಲ ೧೫ ಸಾವಿರ ಕೊಡಿಸುವ ವ್ಯವಸ್ಥೆ ಮಾಡಿಸಿದ್ರು. ಜೀವನ ಹೇಗೋ ಸಾಗಿತ್ತು.
ಹಾ ಇಷ್ಟೆಲ್ಲಾ ಮಾತುಕತೆ ಯಾಕೆ..? ಅಲ್ಲ ಎಂದೂ ಬರೆಯದ ನಾನು ಇಷ್ಟು ಬರೆದಿದ್ದು ಏಕೆ..? ನಂಗೆ ಗೊತ್ತಿಲ್ಲ ಕಥೆ ಹೇಳಲು ಹೊರಟರೆ ಇನ್ನೂ ಇರಬಹುದು ಆದರೆ ಇಂದಿಗೆ ಕಥೆಗೆ ಅಲ್ಪವಿರಾಮ ಇಟ್ಟು ಮುಖ್ಯಭೂಮಿಕೆಗೆ ಬರೋಣ..
ಜಂಜಾಟ.. ಎಲ್ಲರಿಗೂ ಇದ್ದದ್ದೇ, ಈ ಜಂಜಾಟದ ಮಧ್ಯೆ ನನ್ನತನವನ್ನು ನಾನು ಮರೆತೆ ಎಂದು ಅನ್ನಿಸುತ್ತಿದೆ. ಅದೇನು ಮಾಡಲಿ ನನ್ನತನವನ್ನು ಎಂದೋ ನಾನು ಅಡವಿಟ್ಟಾಗಿದೆ. ಪುಸ್ತಕ, ಓದು ಅಂದರೆ ನನಗೆ ಎಲ್ಲಿಲ್ಲದ ಗೀಳು, ಪ್ರೀತಿ. ಆದರೆ ಪುಸ್ತಕ ಓದುವುದು ಬಿಡಿ ಒಂದು ಪುಟ ತಿರುವದೇ ತಿಂಗಳು ೬ ಕಳೆದಿರಬಹುದೇನೋ.. ಪ್ರತಿದಿನ ಯಂತ್ರದಂತೆ ಕಚೇರಿಗೆ ಹೋಗು, ಅದೇ ಕೀಬೋರ್ಡ್ ಮೇಲೆ ಕೈಯಾಡಿಸು, ಮತ್ತೆ ಬಂದು ಮಲಗು... ಇಷ್ಟೇ ಜೀವನ ಎಂದು ಆಗಿಬಿಟ್ಟಿದೆ. ಭೈರಪ್ಪನವರ ಕಾದಂಬರಿಗಳನ್ನು ಆಸ್ಥೆಯಿಂದ ಓದುತ್ತಿದ್ದ ನಾನು ಪುಸ್ತಕ ಕಂಡರೆ ಮಾರುದ್ಧ ಓಡುವಂತಾಗಿದೆ. ಬದುಕು ಗೊಜಲಾಗಿದೆ. ಅಕ್ಷರಗಳೆಲ್ಲವೂ ಅಷ್ಪಷ್ಟವಾಗಿದೆ. ಅದು ಯಾಕೆ ಇಷ್ಟು ಆಲಸ್ಯವೋ ಗೊತ್ತಿಲ್ಲ. ಸ್ಥಳ ಬದಲಾದರೂ ವಿಧಿ ಬದಲಾಗದು. ಮೊಬೈಲ್, ಕಂಪ್ಯೂಟರ್ ನನ್ನನ್ನು ಕೆಡಿಸಿತಾ..? ಅಥವಾ ನಾನು ಅಷ್ಟು ಕಳೆದುಹೋದೆನಾ..? ಉತ್ತರ ಇಂದಿಗೂ ಶೂನ್ಯ... ಆಗಿದ್ದಾಗಲಿ ಮತ್ತೆ ಹಳೆ ಬದುಕಿನತ್ತ ವಾಲಬೇಕಿದೆ, ಮತ್ತೆ ಮೇಲೆ ಏಳಬೇಕಿದೆ. ಮತ್ತೆ ಅದೇನೋ ಹಚ್ಚುತನದ ಬೆನ್ನು ಹತ್ತಬೇಕಿದೆ. ಬೆಂಗಳೂರಲ್ಲಿ ನೋಡಬೇಕಾದ ಸ್ಥಳಗಳು ಬಹಳಷ್ಟಿದೆ. ಅವೆಲ್ಲವನ್ನು ನೋಡಬೇಕಿದೆ, ಜತೆಗೆ ಕಳೆದುಹೋದ ಕ್ಷಣಗಳ ಬಗ್ಗೆ ಮೆಲುಕು ಹಾಕಬೇಕಿದೆ..
ನಿಲುಕದ ನಕ್ಷತ್ರಗಳನ್ನು ಹೇಗಾದರೂ ಮಾಡಿ ಹಿಡಿಯಲೇಬೇಕಿದೆ..
ಜೀವನ ತೂಗುಯ್ಯಾಲೆ..
ಒಮ್ಮೆ ಏಳು ಮತ್ತೊಮ್ಮೆ ಬೀಳು..
ಒಂದು ದಡದಿಂದ ಮತ್ತೊಂದು ದಡ ಸೇರುವ ಮುನ್ನ
ತೂಗುಯ್ಯಾಲೆಯೇ ಮುರಿದು ಬಿದ್ದರೆ..?
ಹಹ್ಹಾ.. ಉಯ್ಯಾಲೆಯೂ ಇಲ್ಲ, ಬದುಕಿಗೆ ಅರ್ಥವೂ ಇಲ್ಲ..
ನಿಲ್ಲು ಆಲಸ್ಯವನ್ನು ಮೀರಿ ನಿಲ್ಲು..
ಗೆಲ್ಲು, ವಿರೋಧಿಗಳ ವಿಶ್ವಾಸವನ್ನೂ ಗೆಲ್ಲು..
ಒಳಿತಾಗಲಿ..
ಇಂತಿ,
ಲೇಖನಿಯ ಸಂಗಾತಿ..


ಓದದೇ,ಬರೆಯದೇ, ಬರಹದ ಶೈಲಿಯಲ್ಲಿ ವ್ಯತ್ಯಾಸವಾಗಿರಬಹುದು. ಒಂದಷ್ಟು ತಿಂಗಳುಗಳ ಬಳಿಕ ಬರೆಯಲು ಪ್ರೋತ್ಸಾಹಿಸಿದ ನನ್ನ ಹಿತೈಷಿಗೆ ಪ್ರೀತಿಯ ನಮನಗಳು..!

Wednesday 7 October 2020

ಬೆಂಗಳೂರಲ್ಲೊಬ್ಬ ಮಿತ್ರದ್ರೋಹಿ

 


ಬೆಂಗಳೂರಿನ ಕಾಂಕ್ರೀಟ್ ಕಾಡುಗಳ ನಡುವೆ ಅಂದು ಎಂದಿಂತೆ ಬೆಳಗಾಗಿತ್ತು, ಎದ್ದು ತನ್ನೆಲ್ಲಾ ಕೆಲಸಗಳನ್ನು ಮುಗಿಸಿದ ಮೌನಿಯು, ಇನ್ನೇನು ಸ್ನಾನಕ್ಕೆ ನೀರು ಬಿಸಿ ಮಾಡಹೊರಟಿದ್ದ ಅಷ್ಟರಲ್ಲೇ ಆತನ ಮೊಬೈಲ್ ಗುಂಯ್‌ಗುಡುತ್ತಿತ್ತು. ಮಬೈಲ್ ಕೈಗೆತ್ತಿಕೊಂಡು ಹಲೋ ಅಂದಾಗ ಅತ್ತ ಕಡೆಯಿಂದ ಹಲೋ ಮೌನಿ ನಾನು ಆದಿ ಕಣೋ, ಅದೇ ನಿನ್ನ ರೂಂ ಮೇಟ್ ನ ಫ್ರೆಂಡ್, ನಾನು ಬೆಂಗಳೂರಿಗೆ ಬಂದಿದ್ದೇನೆ ಕಣೋ , ನಿನ್ ರೂಂ ಮೇಟ್ ಗೂ ಹೇಳಿದಿನಿ ಒಂದು ದಿನ ರೂಂ ನಲ್ಲಿ ಇರುತ್ತೇನೆ ದಯವಿಟ್ಟು ಅವಕಾಶ ಮಾಡಿಕೊಡೋ ಅಂದ, ಸರಿನಪ್ಪಾ.. ಎಂದು ಹೇಳಿ ನಾನು ಫೋನ್ ಇಟ್ಟು, ಸ್ನಾನಕ್ಕೆ ಅಣಿಯಾದೆ, ಸ್ನಾನ ಮುಗಿಸಿ ಬಳಿಕ ಕೀಯನ್ನು ಕಿಟಕಿಯ ಬಳಿ ಇಟ್ಟು ಆಫೀಸಿಗೆ ಹೊರಟೆ.

ಆಫೀಸಿನಲ್ಲಿ ಕೆಲಸದ ಒತ್ತಡಗಳ ನಡುವೆ ಮುಳುಗಿದ್ದಾಗಲೇ ಮತ್ತೊಮ್ಮೆ ಫೋನ್ ರಿಂಗಣಿಸಿತು, ಹಲೋ ಮೌನಿ ನಾನು ಆದಿ ಎನ್ನುವ ಅತ್ತ ಕಡೆಯ ದನಿ, ಹಾ ಹೇಳಪ್ಪಾ ಎಂದು ನಾನು ಮಾತು ಮುಂದುವರೆಸಿದೆ. ಲೋ ರೂಂ ಕೀಎಲ್ಲಿಟ್ಟಿದ್ದೀಯಾ ಎಂದು ಕೇಳಿದ್ದಕ್ಕೆ ಅಲ್ಲೇ ಕಿಟಕಿಯ ಬಳಿಯಲ್ಲಿ ಇಟ್ಟಿದ್ದೇನೆ ನೋಡು ಎಂದೆ. ಆಯ್ತು ಎಂದು ಫೋನ್ ಇಟ್ಟ. ನಾನು ನನ್ನ ಕೆಲಸಗಳಲ್ಲಿ ಬಿಝಿಯಾಗಿಬಿಟ್ಟೆ.


ಸಂಜೆ ಕೆಲಸ ಮುಗಿಸಿ ಆಫೀಸ್ ಬಳಿ ಒಂದು ಭೇಲ್ ಪುರಿ ತಿಂದು, ರೂಂ ಕಡೆ ಹೊರಟೆ. ರೂಂ ತಲುಪಿ ಆದಿಯನ್ನು ಮಾತನಾಡಿಸುತ್ತಾ, ಊಟವಾಯಿತೇ ಎಂದು ಕೇಳಿದೆ. ಅದಕ್ಕಾತ ಇಲ್ಲ ಕಾಸಿರಲಿಲ್ಲ ಎಂದ. ಕೂಡಲೇ ಅಯ್ಯೋ ಎಂದೆನಿಸಿತು, ಒಂದೈವತ್ತು ರುಪಾಯಿಗಳನ್ನು ಕೊಟ್ಟು ಆತನಿಗೆ ಊಟಮಾಡಲು ಹೇಳಿದೆ. ಬಳಿಕ ನನ್ನ ಮನದರಸಿಗೆ ಕೆಲ ಕಾಲ ಮೆಸೇಜಿಸಿ ಮಲಗಿ ಬಿಟ್ಟೆ,

ಮರುದಿನ ಮತ್ತದೇ ಕಾರ್ಯ... ಬೆಳಗ್ಗೆ ಎದ್ದು ನನ್ನ ದೈನಂದಿನ ಕಾರ್ಯ ಮುಗಿಸಿ ಆಫೀಸಿಗೆಂದು ಹೊರಟೆ.. ಆದಿ ಇನ್ನೂ ಎದ್ದಿರಲಿಲ್ಲ, ನಾನು ಆಫೀಸಿಗೆ ಹೋಗಿ ಸಂಜೆ ಬರುತ್ತೇನೆಂದು ಆತನಿಗೆ  ಹೇಳಿ ಹೊರಟೆ...

ಆಫೀಸಿಗೆ ಕೊಂಚ ಬೇಗನೇ ಬಂದ ನಾನು ಆಫೀಸಿನ ಕಾರ್ಯಗಳಲ್ಲಿ ಬ್ಯಸಿಯಾದೆ, ಅಂದು ಸ್ವಲ್ಪ ಹೆಚ್ಚೇ ಕೆಲಸದ ಒತ್ತಡವಿದ್ದುದರಿಂದ ನನಗೆ ರೂಮಿಗೆ ಹೋಗುವುದು ಕೊಂಚ ತಡವಾಗಿತ್ತು. ಅದಾಗಲೆ ಸಮಯ ರಾತ್ರಿ ೧೦ ಆಗಿತ್ತು , ರೂಮಿನತ್ತ ನಡೆದ ನನಗೆ ಒಂದು ದೊಡ್ಡ ಆಶ್ಚರ್ಯವೇ ಕಾದಿತ್ತು ,ಅಯ್ಯಾ ಬಾಗಿಲು ತೆರೆದೇ ಇದೆ, ಲೈಟುಗಳು ಆನ್ ಇದೆ, ನನ್ನ ರೂಂ ಮೇಟ್ ನ ಗೆಳೆಯನ ಪತ್ತೆಯೇ ಇಲ್ಲ.. ಕೊಂಚ ಹೊತ್ತು ಕಾದ ಬಳಿಕ ಅತ್ತಿತ್ತ ನೋಡಿದರೆ ನನ್ನ ಎರಡು ಅಂಗಿಗಳು ಕಾಣುತ್ತಿಲ್ಲ, ರೂಂ ಮೇಟ್ ನ ಸೂಟ್‌ಕೇಸ್ ಕಾಣುತ್ತಿಲ್ಲ, ವಾಟರ್ ಹೀಟರ್ ಹಾಗೂ ಪಾತ್ರೆಗಳೆಲ್ಲವೂ ನಾಪತ್ತೆ. ನೊಡಿ ಶಾಕ್ ಆಯಿತಾದರೂ ರೂಂ ಮೇಟ್  ಗೂ ಹಾಗೂ ಆತನ ಗೆಳೆಯನಿಗೂ ಫೋನಾಯಿಸಿದರೆ, ರೂಂ ಮೇಟ್ ಗೆ ಆತ ಬಂದಿರುವ ವಿಚಾರವೇ ಗೊತ್ತಿಲ್ಲ,  ಆದಿಗೆ ಫೋನಾಯಿಸಿದರೆ ಆತ ಕರೆ ಸ್ವೀಕರಿಸುತ್ತಿಲ್ಲ. ಅಲ್ಲಿಗೆ ಅರ್ಥವಾಯಿತು ಆದಿ ಕಳ್ಳತನದ ಉದ್ದೇಶದಿಂದಲೇ ರೂಮಿಗೆ ಬಂದಿದ್ದ ಎಂದು, ಇನ್ನು ಮಾತನಾಡಿ ಏನು ಪ್ರಯೋಜನ ಎಂದು ತೆಪ್ಪಗೆ ಮಲಗಿದೆ..



Thursday 13 February 2020

ಇಷ್ಟೇ ರೀ… ಪತ್ರಕರ್ತನ ಬಾಳು..


ಪತ್ರಕರ್ತ ಈ  ಪದ ಕೇಳಿದ ತಕ್ಷಣ ಅನೇಕಾನೇಕ ಜನರಲ್ಲಿ ಮೂಡುವ ಒಂದೇ ಭಾವನೆ ಒಂದೇ .. ಪತ್ರಕರ್ತ ಅಂದ್ರೆ ಅವ್ನ ಹತ್ರ ತುಂಬಾ ಕಾಸಿರುತ್ತೆ ಒಂದು ನ್ಯೂಸ್ ಮಾಡಿದ್ರೆ ಅವ್ನಿಗೆ ಬೇಕಾದಷ್ಟು ಕಾಸ್​ ಬರುತ್ತೆ  ಅಂತೆಲ್ಲಾ ಆಲೋಚನೆ ಬರೋದು ಸರ್ವೇ ಸಾಮಾನ್ಯ ! ಆದ್ರೆ ನಿಜ ಜೀವನದಲ್ಲಿ ಪತ್ರಕರ್ತ ಪಡುವ ಬವಣೆಗಳನ್ನು ಯಾರಾದ್ರ ನೋಡಿದ್ರೆ ಇದೇನಾ ಪತ್ರಕರ್ತನ ಜೀವನ ಅಂತ ಬಾಯಿ ಮೇಲೆ ಬೆರಳಿಟ್ಟುಕೊಳ್ಳದೇ ಇರಲ್ಲ…


  ಪತ್ರಕರ್ತ ಈ ಒಂದು ಪದಕ್ಕೆ ಸಾವಿರಾರು ಮನಸ್ಸುಗಳಲ್ಲಿ ಸಾವಿರಾರು ಅರ್ಥಗಳಿರುತ್ತದೆ. ಆದ್ರೆ ನಿಜವಾಗಿಯೂ ನೋಡಹೊರಟರೆ ಪತ್ರಕರ್ತ ಅನುಭವಿಸುವ ಕಷ್ಟಗಳನ್ನು ಇನ್ನೊಬ್ಬ ಪತ್ರಕರ್ತ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ! ಯಅಕೆ ಅಂತೀರಾ ಮುಂದೆ ಓದಿ…
ಈ ಲೇಖನ ಪ್ರಾರಂಭ ಮಾಡೋದಕ್ಕೂ ಮುನ್ನ ಒಂದು ಕಥೆ ಹೇಳ್ತೀನಿ ಕೇಳಿ..
ಒಂದೂರಲ್ಲಿ ಇಬ್ರು ಸ್ನೇಹಿತರು ಇರ್ತಾರೆ.. ಆ ಇಬ್ರಲ್ಲಿ ಒಬ್ಬ ಪತ್ರಕರ್ತ ಇನ್ನೊಬ್ಬ ವ್ಯಾಪಾರಿ… ಇವ್ರಿಬ್ರು ಎಷ್ಟು ಒಳ್ಳೆ ಫ್ರೆಂಡ್ಸ್​ ಅಂದ್ರೆ ಇಬ್ರು ಯಾವಾಗ್ಲೂ ಜೋತೆಲೇ ಇರ್ತಿದ್ರು.. ಒಂದು ದಿನ ಈ ಪತ್ರಕರ್ತನ ಸ್ನೇಹಿತ ಏನೋ ಭೀಕರ ರಸ್ತೆ ಅಪಘಾತದಲ್ಲಿ ತೀರ್ಕೊಂಡು ಬಿಡ್ತಾನೆ .. .. ಆದೇ ಸಮಯಕ್ಕೆ ಪತ್ರಕರ್ತನಿಗೆ ಹೆಡ್​ ಆಫಿಸಿಂದ ಈ ಅಪಘಾತದ ಬಗ್ಗೆ ಒಂದು ವರದಿ ಮಾಡ್ಬೇಕು ಕೂಡ್ಲೇ ಹೋಗು ಅಂತ ಹೇಳಿ ಬಿಡ್ತಾರೆ.. ಇಷ್ಟೇ ಕಥೆ ಪತ್ರಕರ್ತ ಅಲ್ಲಿ ತನ್ನ ಗೆಳೆಯನ ಸಾವಿಗೆ ಮರುಗೋದಾ ಅಥವಾ ತನ್ನ ವೃತ್ತಿ ಮಾಡೋದಾ ? ಇಂತಹಾ ಸಂದಿಗ್ಧ ಸ್ಥಿತಿಯಲ್ಲಿ ನೀವೊಂದು ದಿನ ಇದ್ದು ಬಿಡಿ ಆಗ ನಿಮಗ ಪತ್ರಕರ್ತನ ಜೀವನ ಅನ್ನುವುದು ಒಂದು ಮುಳ್ಳಿನ ಮೇಲಿನ ನಡಿಗೆ ಅನ್ನುವುದು ಖಂಡಿತಾ ಗೊತ್ತಾಗುತ್ತೆ…
 ಹೌದು  ಪತ್ರಕರ್ತನೂ ಮನುಷ್ಯನೇ ! ಆತನಿಗೂ ಒಂದು ಮನಸ್ಸಿದೆ ಆತನ ಮನಸ್ಥಿತಿಯನ್ನು ನಾವೆಲ್ಲ ಅರಿತು ಅರ್ಥ ಮಾಡಿಕೊಳ್ಳಬೇಕಿದೆ.. ಯಾವುದೋ ಪತ್ರಕರ್ತ ಯಾವುದೋ ಒಂದು ಸುದ್ದಿ ಮಾಡ್ತಾನೆ ಅಂದ್ರೆ ಆತನಿಗಿರುವಂತಹಾ ಒತ್ತಡವನ್ನು ನಾವೆಲ್ಲಾ ಗಮನಿಸಲೇ ಬೇಕಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಬ್ರೇಕಿಂಗ್ ಗಳ ನಡುವಿನ ಆಟೋಟಗಳಲ್ಲಿ ಪತ್ರಕರ್ತನ ಬಗೆಗಿನ ಕಾಳಜಿಯನ್ನು ಯಾರು ಮಾಡ್ತಾರೆ ಹೇಳಿ?? ಇಂದು ಪತ್ರಿಕಾ ರಂಗದಲ್ಲಿ ದುಡಿಯುತ್ತಿರುವ ಶೇಖಡಾ 40 ರಷ್ಟು ಮಂದಿ ಸಮಯಕ್ಕೆ ಸರಿಯಾಗಿ ಊಟ ಮಾಡಲೂ ಆಗದೇ ಹೊಟ್ಟೆಯುಬ್ಬರದ ಸಮಸ್ಯೆಯಿಂದ ನಲುಗತ್ತಿದ್ದಾರೆ. ಇನ್ನು ಮೆಟ್ರೋ ಸಿಟಿಗಳಲ್ಲಿ ವರದಿಗೆ ತೆರಳಿದ ಎಷ್ಟೋ ವರದಿಗಾರರು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ರೆ ಅವರೆಲ್ಲರ ಬಗ್ಗೆ ಯೋಚಿಸಲು ಯಾರಿದ್ದಾರೆ? ನಮ್ಮ ನಿಮ್ಮೆಲ್ಲರಿಗೂ ಇರುವಂತೆ ಪತ್ರಕರ್ತನಿಗೂ ಆತನದ್ದೇ ಆದ ಕುಟುಂಬವಿದೆ ಆದ್ರೆ ಎಷ್ಟು ಪತ್ರಕರ್ತ ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಾನೆ ಯಾರಿಗಾದರೂ ಗೊತ್ತಾ?? ಸಮಯ ರಾತ್ರಿ 12 ಅಂತಿಲ್ಲ ಬೆಳಗ್ಗೆ 01 ಅಂತಿಲ್ಲಾ… ಸುದ್ದಿ ಇದ್ದಲ್ಲಿಗೆ ಓಡಿ ಹೋಗಲೇ ಬೇಕು… ನಡುವೆ ಈ ವರದಿಗಾರ ಸತ್ತರೂ ಕೇಳುವವರಿಲ್ಲ…
ಏನೋ ಹುಮ್ಮಸ್ಸಿನಲ್ಲಿ ನಾನು ಪತ್ರಕರ್ತನಾಗುತ್ತೇನೆ , ಪತ್ರಕರ್ತನಾಗಬೇಕು ಎಂದು ಬಂದ ಅದೆಷ್ಟೋ  ಆಕಾಂಕ್ಷಿಗಳು ಸರಿಯಾದ ಸಮಯಕ್ಕೆ ಸಂಬಳ ಸಿಗದೇ ಬೆಂಗಳೂರಿನ ರಸ್ತೆ ಬದಿಯಲ್ಲಿ ಮಲಗಿದ್ದ ಬಗ್ಗೆ ಯಾರೂ ಮಾತನಾಡುವುದಿಲ್ಲ… ಸಂಬಳ ಸಿಗದೇ ಇದ್ದಾಗ ಗೆಳೆಯರ ಬಳಿಯಲ್ಲಿ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೇ ಇದ್ದ ಬಗೆಯೂ ಯಾರಿಗೂ ತಿಳಿದಿಲ್ಲ.. ಎಲ್ಲರ ಕಣ್ಣಿಗೆ ಕಾಣುವುದು ಒಂದೇ ದೃಶ್ಯ ಹೇಳುವುದು ಒಂದೇ ಮಾತು !!!! ಬ್ರೇಕಿಂಗ್​ ನ್ಯೂಸ್ !!!
ಪತ್ರಿಕೋದ್ಯಮವನ್ನು ಸಾಗಾಸರಾಗವಾಗಿ ದೂಷಿಸುವ ಸಾಮಾಜಿಕ ಜಾಲತಾಣದ ಕೆಲವು ಅತೃಪ್ತ ಆತ್ಮಗಳೇ ನಿಮ್ಮಲ್ಲಿ ಒಂದು ಪ್ರಶ್ನೆಯಿದೆ… ಇತ್ತೀಚೆಗೆ ಮಂಗಳೂರಿನಲ್ಲಿ ಡೆಂಘಿ ಜ್ವರ ಮಿತಿ ಮೀರಿದ ಬಗ್ಗೆ ಮತ್ತು ಆ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆಯಲು ಹೋದ ಖಾಸಗಿ ವಾಹಿನಿಯೊಂದರ ವರದಿಗಾರ ನಾಗೇಶ್​ ಮೃತಪಟ್ಟವರ ಬಗ್ಗೆ ಎಷ್ಟು ಜನರಿಗೆ ತಿಳಿದಿದೆ ಸ್ವಾಮಿ?? ಇನ್ನು ಅದೇ ಸಂದರ್ಭದಲ್ಲಿ ಜ್ವರಕ್ಕೆ ತುತ್ತಾದ ಪ್ರಣಾಮ್ ಒಂದು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದದ್ದು ಯಾರಿಗೆ ತಿಳಿದಿದೆ??? ನೋ ವೇ ಛಾನ್ಸೇ ಇಲ್ಲ ಯಾರಿಗೂ ನೆನಪಿರಲು ಸಾಧ್ಯವೇ ಇಲ್ಲ…. ಯಾಕಂದ್ರೆ ಅವರೆಲ್ಲ ತೆರೆಮರೆಯ ಹೀರೋಗಳು ಅಷ್ಟೇ !!
ಕೊನೇ ಮಾತು : ವಾಹಿನಿಗಳ ಬಗ್ಗೆ ಬೈಯುವವರು ಒಂದು ಬಾರಿ ಯೋಚಿಸಿ, ಒಂದು ವಾಹಿನಿಯನ್ನು ನಂಬಿಕೊಂಡು ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿರುತ್ತವೆ.. ಆ ನೂರಾರು ಕುಟುಂಬಗಳ ಸಂಬಳ ಬರಬೇಕಾದರೆ ಟಿ.ಆರ್​.ಪಿ ಅಗತ್ಯ.. ಟಿ.ಆರ್​.ಪಿ ಇದ್ರೆ ಬ್ಯುಸಿನೆಸ್​ ಇಲ್ಲಾಂದ್ರೆ ಬ್ಯುಸಿನೆಸ್​ ಇಲ್ಲ… ಆ ಟಿ.ಆರ್​.ಪಿ.ಗೋಸ್ಕರ ನಾವು ಕೆಲವು ನಾಟಕ ಮಾಡಲೇ ಬೇಕು !! ನೆನಪಿಡಿ… ಯಾವುದೇ ವಾಹಿನಿ ತನ್ನ ವೃತ್ತಿಧರ್ಮವನ್ನು ಎಂದಿಗೂ ಮರೆತಿಲ್ಲ.. ಅಷ್ಟೇ !!! ನಮಗೂ ನಿಯತ್ತಿದೆ ನಮ್ಮಲ್ಲೂ ಮಾನವೀಯತೆ ಇದೆ ಅಷ್ಟೇ.…



Sunday 5 January 2020

ಮನ್ಸಿಂದ ಯಾರೂನೂ ಕೆಟ್ಟೋರಲ್ಲ…


ಮನ್ಸಿಂದ ಯಾರೂನೂ ಕೆಟ್ಟೋರಲ್ಲ… ಆದ್ರೆ ಕೆಲವೊಂದು ಸರಿ ಅತ್ಯಂತ ಆಪ್ತರು ಮಾಡುವಂತಹಾ ಕೆಲಸಗಳು ಕುಡಾ ನಮಗೆ ನೋವನ್ನು ತಂದೊಡ್ಡಬಹುದಲ್ವಾ? ಒಂದು ಮಾತು ನಾವ್ಯಾವತ್ತೂ ಹೇಳೋದಿದೆ… Expectation Hurts ! ಆದ್ರೆ ಕೆಲವು ಸಾರಿ ನಾವು  ಯೋಚಿಸಿಯೂ ಇರದ ವಿಷಯಗಳು ಮನಸ್ಸಿಗೆ ತುಂಬಾ ನೋವನ್ನೂ ನೀಡಿದ್ದಿದೆ. ನೀವು ಕಷ್ಟಪಟ್ಟು ಮಾಡಿದ ವಿಚಾರಗಳಿಗೆ ಬೆಲೆ ಸಿಗದಿದ್ದಾಗ..  ಆಗುವ ನೋವಿದ್ಯಲ್ಲಾ…  ಅದು ವರ್ಣಿಸಲಸಾಧ್ಯವೇನೋ..  ಒಬ್ಬ ಪ್ರಿಯಕರನಿಗೆ ತನ್ನ ಪ್ರೇಯಸಿಯ ಮೇಲೆ ಎಷ್ಟೊಂದು ಪ್ರೀತಿಯಿರುತ್ತದೆ ಹಾಗೆಯೇ ಆಕೆಯಿಂದ ಆತನೂ ಬಯಸುವುದು ಒಂದೆರಡು ಖುಷಿಯ ಸಾಲುಗಳಷ್ಟೇ… ಪ್ರೇಯಸಿ ಹೇಳಿದ ಕೆಲಸ ಮಾಡಲು ತನ್ನೆಲ್ಲಾ ಕೆಲಸಗಳನ್ನು ಬದಿಗಿಟ್ಟು 3 ದಿನಗಳ ಕಾಲ ಕಷ್ಟದಿಂದ ಮಾಡಿದ ಕೆಲಸಕ್ಕೆ ಫ್ರತಿಫಲ ಸಿಗದಿದ್ದರೆ? ಹೇಗಾಗಬೇಡ ? ಇದಕ್ಕಂತಲೂ ನೋವಿನ ಸಂಗತಿ ಕೆಲವೊಂದಿದಎ.. ಅದೇನು ಗೊತ್ತಾ… ಪ್ರೇಯಸಿಗೆ ತನ್ನ ಗೆಳತಿಯ ನೋವು ಅರ್ಥವಾದಂತೆ ತನ್ನಿನಿಯನ ನೋವು ಅರ್ಥವಾಗದಿದ್ದಾಗ ಆಗುವ ತೊಳಲಾಟದ ಮನಸ್ಥಿತಿಯನ್ನು ವರ್ಣಿಸುವವರಾರು??  ಕೆಲವೊಂದು ಬಾರಿ ಪ್ರತಿಯೊಂದು ಮೌನದಲ್ಲೂ ಒಂದು ನೋವಿರುತ್ತದೆ.. ಆ ನೊವಿನಲ್ಲೂ ನಸುಗೋಪವಿದೆ.. ಆ ಕೋಪಕ್ಕೆ ಕಾರಣ ಮಾತ್ರ ನಿಗೂಢ ರಹಸ್ಯದಂತೆ ಭಾಸವಾಗುತ್ತದೆ. ಆ ನಿಗೂಢ ರಹಸ್ಯವನ್ನು ಬೇಧಿಸಲೇ ಬೇಕಿದೆ.. ಮೌನ ಮುರಿಯಲೇ ಅಥವಾ ಇನ್ನೂ ಮೌನಿಯಾಗಲೇ??? .. 


ಮೌನವೇ ಹಿತ.. ಮಾತು ಮನೆ ಕೆಡಿಸಬಾರದಲ್ಲ…

ಕೊನೇ ಮಾತು…
ಮನ್ಸಿಂದ ಯಾರೂನೂ ಕೆಟ್ಟೋರಲ್ಲ…
ಒಂದ್ ಮಾತು ಬತ್ತದೆ ಒಂದ್ ಮಾತು ಹೊಯ್ತದೆ..
ನುಂಗ್​ಕೊಂಡು ನಡೆಯೋನು ಮನುಜ ತಾನೆ..

ಇದ್ದಿದ್ದು ಇರ್ತದೆ ಹೋಗಿದ್ದು ಹೊಯ್ತದೆ
ಮನುಷ್ಯತ್ವ ಮರೆತೋದ್ರೆ ತಪ್ಪು ಸಾನೆ
ಅನುಸರ್ಸ್ಕೊಂಡ್​ ಹೋದ್ರೆ ಎಲ್ಲಾ ಮಕ್ಳಾಟಾನೇ !
ಮನ್ಸಿಂದ ಯಾರೂನೂ ಕೆಟ್ಟೋರಲ್ಲ…
ಮನ್ಸಿಂದ ಯಾರೂನೂ ಕೆಟ್ಟೋರಲ್ಲ
ಕಷ್ಟ ಸುಖ ಎರಡೂ ಮನುಷ್ಯಂಗ್​ ಬರದೇ ಏನು
ಇಷ್ಟುದ್ದ ಇರೋ ಮರಕ್ ಬತ್ತದಾ?
ನೋವು ನಲಿವು ಪಟ್ಟು ಮಯ್ಯ ಮರೆತು ನಿಂತ್ರೆ
ಕಾಲ ಒಂದು ಹೆಜ್ಜೆನ ತಪ್ತದಾ?

ಕೇಳಾರ ಕೇಳಿ, ಬಿಟ್ಟಾರ ಬಿಡಿ
ಬದುಕೊಂದು ಬಳಪ ಪ್ರೀತಿನೇ ತಿದ್ದಿ
ಗಳಿಸ್ಕೊಂಡು ಹೋಗೋದು ಸಂಬಂಧನೇ…
ಗಳಿಸ್ಕೊಂಡು ಹೋಗೋಕಾಗೋದು ಸಂಬಂಧನೇ
ಅನುಸರಿಸ್ಕೊಂಡು ಹೋಗು ಎಲ್ಲ ಕ್ಷಣಗಳನ್ನೇ….



Sunday 17 November 2019

ದೇವರು ಕೊಟ್ಟ ಪ್ರೀತಿಯ ಆಸ್ತಿ ಈ ಚೆಲುವೆ....


ಆಕೆ ನನ್ನ ಜೊತೆ ಹುಟ್ಟಿದವಳಲ್ಲ.. ನನ್ನ ರಕ್ತ ಸಂಬಂಧಿಯೂ ಅಲ್ಲ.. ಆದರೆ ಆಕೆಯೆಂದರೆ ನನ್ನ ಹೃದಯದಲ್ಲಿದೆ ಪ್ರೀತಿಯ ಜಾಗ. ಆಕೆಯ ಮಾತುಗಳೆಂದರೆ ನನಗೇನೋ ವಿಶೇಷ ಸ್ಪೂರ್ತಿ ಅದೇಕೋ ಗೊತ್ತಿಲ್ಲ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತವಾದ ಒಬ್ಬಾಕೆ ನನ್ನ ಜೀವನದ ಮೇಲೆ ಇಷ್ಟೋದು ಪ್ರಭಾವ ಬೀರುತ್ತಾಳೇ ಎಂದು ಸ್ವತಃ ನಾನೇ ಯೋಚಿಸಿರಲಿಲ್ಲವೇನೋ… ಅಷ್ಟಕ್ಕೂ ಆಕೆ ಯಾರು, ಆಕೆಯೆಂದರೆ ನನಗೇಕೆ ಪ್ರೀತಿ ಎಲ್ಲವನ್ನೂ ತಿಳೀಯುವ ಕುತೂಹಲ ನಿಮಗಿದ್ರೆ ಈ ಪ್ರೀತಿಯ ಕಥೆಯನ್ನು ನೀವು ಓದಲೇ ಬೇಕು.
                        ಎಂದಿನಂತೆ ಅಂದು ನಾನು ನನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಕ್ರಾಲ್​ ಮಾಡುತ್ತಲಿದ್ದೆ, ಬಹಳ ದಿನಗಳಿಂದ ಕಾಡುತ್ತಿದ್ದ ಹೆಸರೊಂದು ಇಂದೂ ನನ್ನ ಕಣ್ಣಿಗೆ ಬಿದ್ದೇ ಬಿಡ್ತು ನೋಡಿ. ಆಗಿದ್ದಾಗಲಿ ಆಕೆಯ ಪೂರ್ವಾಪರ ವಿಚಾರಿಸಿಯೇ ಬಿಡೋಣ ಎಂದು ನಾನು ಆಕೆಯ ಗೆಳೆತನ ಬಯಸಲು ಆಕೆಗೆ ರಿಕ್ವೆಷ್ಟ್ ಕಳುಹಿಸಿಯೇ ಬಿಟ್ಟೆ… ಒಂದೈದು ನಿಮಿಷದೊಳಗೆ ನನ್ನ ಸಂಚಾರಿವಾಣಿಯ ಡಿಸ್ಪ್ಲೆ ನಲ್ಲಿ ಆಕೆ ನನ್ನ ರಿಕ್ವೆಸ್ಟ್​ ಸ್ವೀಕರಿಸಿದ್ದರ ಬಗ್ಗೆ ನೋಟಿಫಿಕೇಷನ್​ ಬಂದಾಗಿತ್ತು. ಖುಷಿಯಿದಲೇ ಆಕೆಗೊಂದು ಹಾಯ್ ಮಾಡಿಯೇ ಬಿಟ್ಟಿದ್ದೆ. ಕೊಂಚ ಸಮಯದ ಬಳಿಕ ಆಕೆಯಿಂದ ರಿಪ್ಲೈ ಬಂದಿತ್ತು ನೋಡಿ.. ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಮೆಸೇಜ್ ಮೇಲೆ ಮೆಸೇಜ್ ಕಳುಹಿಸುತ್ತಲಿದ್ದೆ.


  ಹೀಗೆ ಪ್ರಾರಂಭವಾಯಿತು ನೋಡಿ ನಮ್ಮಿಬ್ಬರ ಸ್ನೇಹ… ಆಕೆಯಿರುವುದೂ ನಾನಿರುವುದೂ ಒಂದೇ ಊರಿನಲ್ಲಿ ಎಂದು ತಿಳಿಯುವುದೇ ತಡ ನನ್ನ ಖುಷಿ ದುಪ್ಪಟ್ಟಾಗಿತ್ತು, ಈ ನಡುವೆ ಆತ್ಮೀಯತೆ ಹೆಚ್ಚಾದಂತೆ ರಾಜಕೀಯ, ವಿದ್ಯಾರ್ಥಿ ಜೀವನ, ಕೆಲಸ ಇವೆಲ್ಲದರ ಕುರಿತಾಗಿ ಮಾತುಕಥೆ ನಡೆಯುತ್ತಲೇ ಇತ್ತು ಆದರೆ ಇನ್ಸ್ಟಾಗ್ರಾಂನಲ್ಲಿ ಅಲ್ಲ ಬದಲಾಗಿ ಫೋನ್ ನಂಬರ್​ ವಿನಿಮಯವಾಗಿ ನಮ್ಮ ಮಾತುಕತೆ ಸಾಗಿತ್ತು…..
 ಆಕೆಯ ಬಗ್ಗೆ ಹೇಳಲು ಬಹಳಷ್ಟಿದೆ.. ಚೋಟುದ್ದ ಇರುವ ಆಕೆಯ ಮೊಗದಲ್ಲಿ ಮಂದಹಾಸ ಎಂದೂ ಮಾಸಿದ್ದನ್ನು ನಾನು ಕಂಡಿಲ್ಲ...  ಆಕೆಯೆಂದರೆ ನನಗೇನೋ ಸ್ಫೂರ್ತಿ.. ಆಕೆಯ ಮಾತುಗಳೇ ನೊಂದ ಮನಸ್ಸಿಗೆ ನೆಮ್ಮದಿ ನೀಡುವ ಸ್ಥಾನ.  ಇಷ್ಟಿದ್ದರೂ ಸುಮಾರು 6 ತಿಂಗಳುಗಳ ಕಾಲ ನಾವು ಮೀಟ್ ಆಗಿಯೇ ಇಲ್ಲ..
ಒಂದು ದಿನ ನಾನು ಮಂಗಳೂರಿನಲ್ಲಿದೆ, ಆಕೆಯೂ ಕಾರ್ಯನಿಮಿತ್ತ ಮಂಗಳೂರಿಗೆ  ಆಗಮಿಸಿದ್ದಳು. ಇನ್ನು ಭೇಟಿಯಾಗದಿದ್ದರೆ ಹೇಗೆ ಎಂದು ಆಕೆಯನ್ನು ಪ್ರಶ್ನಿಸಿಯೇ ಬಿಟ್ಟೆ, ಅಂತೂ ಇಂತೂ ಮಂಗಳೂರಿನ ಸಿಟಿ ಸೆಂಟರ್​ನ ಮುಂಭಾಗದಲ್ಲಿ ಭೇಟಿಯಾಗಿ ಒಂದು ಫೋಟೋ ಕ್ಲಿಕ್ಕಿಸಿಕೊಂಡು ಸಮಾಧಾನಪಟ್ಟಿದ್ದಾಯ್ತು..
 ಮತ್ತೆ ಕಾರ್ಯನಿಮಿತ್ತ ಬೆಂಗಳೂರು ಬಂದರೂ ಕೆಲಸದ ಒತ್ತಡದಿಂದ ಆಕೆಯನ್ನು ಭೇಟಿಯಾಗಲು ಆಗಿರಲಿಲ್ಲ.. ಆದ್ರೆ ನನ್ನ ಕೆಲಸಕ್ಕೆ  ರಾಜಿನಾಮೆಯಿತ್ತು, ಊರಿಗೆ ಹೋಗುವ ಮುನ್ನ ಆಕೆಯನ್ನು ಭೇಟಿಯಾಗುವ ಮನಸ್ಸಾಗಿತ್ತು. ಅದೃಷ್ಟವಶಾತ್​ ಆಕೆ ಮನೆಯಲ್ಲಿದ್ದಳು , ಆಕೆಯ ಮನೆಗೆ ಹೋಗಿದ್ದೆ.  ಮಾತನಾಡುತ್ತಾ ಸಮಯ ಕಳೆದ್ದದ್ದೇ ತಿಳಿಯಲಿಲ್ಲ. ಆಕೆಯ ತಂದೆ , ತಾಯಿ ಇತ್ತ ಪ್ರೀತಿ , ಆಕೆಯ ಮುಗ್ದ ಮನಸ್ಸಿನ ಮುಕ್ತ ಮಾತು, ಇವೆಲ್ಲವನ್ನು ನೋಡುತ್ತಾ ನನ್ನದೇ ಸ್ವಂತ ಕುಟುಂಬದ ಮಧ್ಯೆ ಇದ್ದೆನೋ ಎಂಬಂತೆ ಭಾಸವಾಗಿತ್ತು. ಆಕೆಯ ತಂದೆ- ತಾಯಿಯ ಪ್ರೀತಿ, ಆಕೆ ನನಗಿತ್ತ ಅಭಯ ಇವೆಲ್ಲವನ್ನೂ ನೋಡಿ ವಾಪಾಸ್​ ಬರುವಾಗ ನನ್ನ ಕಣ್ಣಾಲಿಗಳು ತೇವವಾಗಿದ್ದವು..
ಯಾವಾಗ್ಲೋ ನಡೆದ ವಿಷಯಕ್ಕೆ ಇಂದೇಕೆ ಬರೆಯುತ್ತಿದ್ದೇನೆ ಎಂದು ಯೋಚಿಸದಿರಿ, ಕಾರಣವಿದೆ. ನನ್ನ ಮನಸ್ಸು ವಿಹ್ವಲವಾಗಿದ್ದಾಗ, ಆಕೆ ಎಂದಿಗೂ ನನ್ನೊಂದಿಗಿದ್ದಳು. ಇಂದು ನನ್ನನ್ನು ಬೇಟಿಯಾಗಲು ಬಂದಾಗಲೂ ಆಕೆಯ ಮನೆಯ ಪ್ರೀತಿಯ ಸ್ವಾದದ ಚಪಾತಿಯನ್ನೂ ತಂದಿದ್ದಳು… ಜೀವನದ ಪಯಣದಲ್ಲಿ ಆಕೆ ಎಷ್ಟರ ವರೆಗೆ ನನ್ನೊಂದಿಗಿರುತ್ತಾಳೋ ತಿಳಿಯದು ಆದರೆ ಆಕೆ ಇರುವಷ್ಟು ಕಾಲ ನಾನು ಖುಷಿಯಿಂದಿರುವೆ ಎಂಬ ನಂಬಿಕೆ ನನಗಿದೆ. ನಮ್ಮಿಬ್ಬರ ಸೋದರತೆಯ ಬಂಧನ ಹೀಗೆ ಇರಬೇಕೆನ್ನುವ ಆಶಯ ನನ್ನದು.. ಹೇಗೆ ಇದ್ದರೂ ನೀ ನನ್ನೊಡನೆ ಇರುವೆಯೆಂಬ ನಂಬಿಕೆ ನನ್ನದು..
ಓಹ್ ಇಷ್ಟರ ಮಧ್ಯೆ ಆಕೆ ಯಾರೆಂದು ನಾನು ಹೇಳಿಯೇ ಇಲ್ಲವಲ್ಲ…
ಆಕೆ ಬೇರಾರೂ ಅಲ್ಲ … ನನಗಾಗೇ ದೇವರು ಕೊಟ್ಟ ತಂಗಿ  “ವಿದ್ಯಾ”

Wednesday 13 November 2019

ಬೆಂಗಳೂರೆಂಬ ಹೈಟೆಕ್​ ಹಳ್ಳಿ



ಬೆಂಗಳೂರು : ಹೆಸರು ಕೇಳಿದೊಡನೆ ನಮ್ಮ ಕಲ್ಪನಾ ಲೋಕದಲ್ಲಿ ಅನೆಕಾನೇಕ ಚಿತ್ರವಿಚಿತ್ರ ವಿಚಾರಗಳು ಹರಿದಾಡಲು ಪ್ರಾರಂಭವಾಗುತ್ತದೆ,  ಸಾಲು ಸಾಲು ಗಗನಚುಂಬಿ ಕಟ್ಟಡಗಳು, ವಿಧಾನಸೌಧ , ಹೈಕೋರ್ಟ್​ , ಅದರ ಮುಂಭಾಗದಲ್ಲಿ ಇರುವ ಕಬ್ಬನ್​ ಪಾಕ್​ , ಲಾಲ್​ಭಾಗ್​ ಮುಂತಧ ಕಲ್ಪನೆಗಳು ಮನಃಪಲ್ಲಟದಲ್ಲಿ ಮೂಡಿ ಮರೆಯಾಗುತ್ತದೆ. ಆದ್ರೆಆ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಒಂದೆರಡು ದಿನ ಅಲೆದಾಡಿ ನೋಡಿ ನಾ ಕಲ್ಪಿಸಿಕೊಂಡ ಬೆಂಗಳೂರು ಇದೇನಾ ಎಂದು ನೀವು ಬೆರಳಿನ ಮೇಲೆ ಕೈ ಇಟ್ಟುಕೊಳ್ಳುವಿರೇನೋ…
   ಹೌದು ಬೆಂಗಳೂರು ಅದಂದು ಹೆಸರಲ್ಲ.. ಭಾರತದ ಐಟಿ ಹಬ್​ ಎಂದೇ ಕರೆಯಲ್ಪಡುವ ಕರ್ನಾಟಕದ ರಾಜಧಾನಿ, ಅನೇಕ ಸ್ಟಾರ್ಟಪ್ ಕಂಪೆನಿಗಳಿಗೆ ತಾಯಿಯಂತೆ ತನ್ನೊಡಲನ್ನು ನೀಡಿದ ಜಾಗವದು, ಸಾಧನೆ ಮಾಡಬೇಕು ಎಂದು ಆಗಮಿಸುವ ಕೆಲವರಿಗೆ ಸಿಹಿ ನನಿಡಿದ್ದರೆ ಇನ್ನು ಕೆಲವರಿಗೆ ಕಹಿಯುಣಿಸಿ ಪಾಠ ಕಲಿಸಿದ ದೇವತೆ.. ಆದ್ರೆ ಅದೊಂದು ದೊಡ್ಡ ಪಟ್ಟಣವಲ್ಲ, ಬದಲಾಗಿ ಅದೊಂದು ಹಾಳು ಕೊಂಪೆಯೆಂಬ ಹಳ್ಳಿ  ಎಂದರೆ ಸೂಕ್ತ ಎನ್ನುವುದು ನನ್ನ ಭಾವನೆ , ಯಾಕೆ ಅಂತೀರಾ?? ಬನ್ನಿ ಮಾತಾಡೋಣ..

  ಬೆಂಗಳೂರು ನಗರ ಎಲ್ಲಾ ರೀತಿಯ ಮೂಲಸೌಕರ್ಯ ಹೊಂದಿದ್ದರೂ ಯಾವುದೇ ಮೂಲಸೌಕರ್ಯವಿಲ್ಲದ ಹಳ್ಳಿಗೂ ಕಡೆ ಎಂದು ಹೇಳಬೇಕು, ಊರಿನ ನಡುವೆ ಹರಿಯುವನ ಕೊಳಚೆ ಕಾಲುವೆಗಳು, ಅಲ್ಲಲ್ಲಿ ಕೈಗಾಡಿಗಳಲ್ಲಿ ಸೊಪ್ಪು, ಪ್ಲಾಸ್ಟಿಕ್​, ಹಣ್ಣುಗಳನ್ನು ಮಾರುತ್ತಲಿರುವ ಜನರು, ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಾರುವ ಕಸದ ರಾಶಿಗಳು, ಅಲ್ಲಲ್ಲಿ ಅಲೆದಾಡುತ್ತಾ ಒಳಿದಿರುವ ಅಲ್ಪಸ್ವಲ್ಪ ಹಸಿರನ್ನು ಸೇವಿಸುತ್ತಿರುವ ಅಲೆಮಾರಿ ದನಗಳು,. ಬೆಳಗ್ಗೆದ್ದು ರಾಕ್ಷಸರಂತೆ ಕೂದಲು ಹರವಿಕೊಂಡು ಕುಳಿತಿರುವ ಆಂಟಿ ಮಣೀಯರು, ಇವೆಲ್ಲವನ್ನು ನೋಡುತ್ತಿದ್ದರೆ ಮೂಲಸೌಕರ್ಯವಿಲ್ಲದೆ ಬಿದ್ದಿರುವ ಹಳ್ಳಿಗಳಂತೆ ಭಾಸವಾಗುತ್ತದೆ. ಅದೇಕೋ ಏನೋ ಬೆಂಗಳೂರಿನ ಕೆಲವ ಏರಿಯಾಗಳನ್ನು ನೋಡಿದರೆ ಇದ್ಯಾವ್ದಪ್ಪಾ ಹಾಳು ಕೊಂಪೆ ಎಂದು ನಿಮ್ಮ ಮೂಗಿನ ಮೇಲೆ ನೀವೇ ಕೈ ಇಟ್ಟುಕೊಳ್ಳುವಿರೇನೋ..
ಹೌದು ಬೆಂಗಳುರಿನ ಕೆಲವು ಜನರು ಅಲ್ಲ‘ಲ್ಲ. ಬಹುತೇಕ ಜನರು ಇಂದು ನೈತಿಕತೆ ಇಲ್ಲದೇ ಬದುಕುತ್ತಿದ್ದಾರೆ ಎಂದು ಭಾಸವಾಗುತ್ತದೆ. ಎಲ್ಲಿ ಕಸ ಬಿಸಾಡಬೇಡಿ ಎಂದು ಬರೆದಿರಲಾಗಿದೆಯೋ ಅಲ್ಲೇ ಕಸದ ರಾಶಿಯನ್ನು ಬಿಸುಟಿರುತ್ತಾರೆ, ಎಲ್ಲಿ ಮೂತ್ರ ಮಾಡಬೇಡಿ ಎಂದು ಬರೆದಿರಲಾಗುತ್ತದೋ ಅಲ್ಲೇ ಪ್ಯಾಂಟ್​ ಜಾರಿಸಿ, ಜಲಧಾರೆಯನ್ನು ಮಾಡುತ್ತಿರುತ್ತಾರೆ. ಇನ್ನು ಈ ಹೆಣ್ಮಕ್ಕಳಂತೂ ಬೆಳಗ್ಗೆ ಬೆಳಗ್ಗೆ ತಮ್ಮ ವಿರಾಟ್​ರೂಪವನ್ನು ತೋರಿಸುತ್ತಲೇ ಇರುತ್ತಾರಪ್ಪಾ..
ಒಟ್ಟಿನಲ್ಲಿ ಹೇಳಹೊರಟರೆ, ಬೇಕಾದ ಕೆಲಸವನ್ನು ಬಿಟ್ಟು ಬೇಡದ ಕೆಲಸವನ್ನೇ ಹೆಚ್ಚಾಗಿ ಮಾಡುತ್ತಲಿರುತ್ತಾರೆ… ಕೆಲವೊಂದು ಬಾರಿ ಕೆಲೊಂದು ಪ್ರದೇಶವನ್ನು ನೋಡಿದಾಗಲಂತೂ  ಹಸಿರು ತುಂಬಿದ ನಮ್ಮ ಹಳ್ಳಿಯಲ್ಲಿ ಗಂಜಿಯುಂಡರೂ ಪರವಾಗಿಲ್ಲ ಹಳ್ಳಿಯೇ ಹಿತವೆಂದೆನಿಸುತ್ತದೆ... ಶುದ್ಧ ನೀರು ಶುದ್ಧ ಗಾಳಿ ಜೊತೆಯಲ್ಲಿ ಕಲುಷಿತವಿಲ್ಲದ ಆಹಾರವನ್ನು ನಾವು ಸೇವಿಸಬಹುದಲ್ಲಾ ಎಂದೆನಿಸುತ್ತದೆ.. ಜೊತೆಯಲ್ಲಿ  ಮಳೆಗಾಲದ ಮಳೆಯನ್ನು ಆಸ್ವಾದಿಸುತ್ತಾ, ಬೇಸಿಗೆಯ ಶೆಖೆಗೆ ಬೆಂದರೂ ತೋಟದ ನಡುವೆ ಹಾಯಾಗಿ ಆರಾಮವಾಗುತ್ತಾ ನಮ್ಮ ಜೀವಿತಾವಧಿಯನ್ನು ಆರಾಮವಾಗಿ ಕಳೆಯಬಹುದಲ್ಲಾ ಎಂಬುವುದೇ ಖುಷಿಯ ಸಂಗಗತಿ ಅಲ್ವಾ,,,,,
          ಈ ಲೇಖನದ ಉದ್ದೇಶ ಇಷ್ಟೇ ಇನ್ನಾದರೂ ನೀವು ಪೇಟೆಯ ವ್ಯಾಮೋಹ ಬಿಟ್ಟು , ಹಳ್ಳಿಯತ್ತ ಮುಖಮಾಡಿ, ನಮ್ಮ ಪಾರಂಪರಿಕ ಕೃಷಿ ಮತ್ತೆ ಉತ್ತುಂಗಕ್ಕೇರಲಿ ಖುಷಿಯಿಂದ ಬಾಳೋಣ ಅಷ್ಟೇ…

ಪ್ರೀತಿಯಿಂದ
ಅಕ್ಷಯ್​

Tuesday 12 November 2019

ಒಂದು ಜೀನ್ಸ್ ಪ್ಯಾಂಟಿನ ಕಥೆ…

ಇದೊಂದು ಪಕ್ಕಾ ಹಳ್ಳಿ ಹುಡುಗನ ಕಥೆ, ಒಬ್ಬ ಹಳ್ಳಿ ಹುಡುಗ, ಅಂದ್ರೆ ಕೂಪ ಮಂಡೂಕ ಸಿಟಿ ಎಂಬ ಸಮುದ್ರದೊಳಗೆ ಧೂಮುಕಿ ಮುಂದೇನಾಗುತ್ತೆ ಎನ್ನೊ ಒಂದು ಹಾಸ್ಯಮಯ ಕಥೆ…

 ಆ ಹುಡುಗನ ಹೆಸರು ಬೇಡ ಬಿಡಿ.. ಯಾಕ್ ಸುಮ್ನೆ .. ಆದ್ರೆ ಪಕ್ಕಾ ಹಳ್ಳಿ ಹುಡುಗ ತನ್ನ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನೆಲ್ಲಾ ಒಂದು ಪ್ರತಿಷ್ಟಿತ ಶಾಲೆಯಲ್ಲಿ ಮುಗಿಸಿದ್ದರೂ ಆತನಿಗೆ ಗುಣಾಕಾರ ಭಾಗಾಕಾರ ಲೆಕ್ಕ ಕಬ್ಬಿಣದ ಕಡಲೇಕಾಯಿಯೇ ಸರಿ.. ಅಷ್ಟೇ ಯಾಕೆ ಸಮಾಜ ಮತ್ತುಯ ಕನ್ನಡ ವಿಷಯ ಬಿಟ್ರೆ ಬೇರಾವ ವಿಷಯಗಳು ಅವನ ತಲೆಗೆ ಹತ್ತುತ್ತಿರಲಿಲ್ಲವಂತೆ…ಈ ಹಳ್ಳಿ ಗಮಾರನನ್ನು ಹೇಗಾದರೂ ಮಾಡಿ ಉದ್ಧಾರ ಮಾಡಿಯೇ ತೀರುವೆ ಎಂದು ಪಣತೊಟ್ಟ ಆತನ ಅತ್ತೆ ಆತನನ್ನು ಆ ಹಳ್ಳಿಯಿಂದ ಬಿಡಿಸಿ ಸುಮಾರು 75 ಕಿ.ಮಿ ದೂರದ ಮಂಗಳೂರಿಗೆ ಕರೆದುಕೊಂಡು ಬಂದರು, ಆದ್ರೆ ಈ ಪುಣ್ಯಾತ್ಮ ಅಟ್ಲೀಸ್ಟ್ ಅತ್ತೆಯ ಮರ್ಯಾದೆ ಉಳಿಸೋಕಾದ್ರೂ ಚೆನ್ನಾಗಿ ಕಲಿಬೇಕಲ್ವಾ??? ಊಹುಂ ಕಲೀಲೇ ಇಲ್ಲ.. ಆದ್ರೆ ಆ ಅತ್ತೆಗೆ ಒಬ್ಬ ಮಗನಿದ್ದ ಆ ಪುಣ್ಯಾತ ಆ ಸಮಯದಲ್ಲಿ ರಾಕ್ಷಸನಂತೆ ಕಂಡರೂ ಬಳಿಕ ಆತ ದೇವಮಾನವನಾದ..
ಅದೆಲ್ಲಾ ಇರ್ಲಿ ಈಗ ಜೀನ್ಸ್ ಪ್ಯಾಂಟಿನ ಕಥೆ ಹೇಳೊಕೆ ಹೊರಟ ಈ ಪುಣ್ಯಾತ್ಮ ಕಥೆನ ಬೇರೆ ಕಡೆ ಡೈವರ್ಟ್ ಮಾಡ್ತಾ ಇದಾನೆ ಅಂತ ಮನಸ್ಸಲ್ಲೇ ಬೈಕೋಬೇಡಿ, ವಿಷ್ಯ ಇರೋದೇ ಈ ಪೀಠಿಕೆಯಲ್ಲಿಉ ರೀ.. ಆತ ಹೊಸ ಶಾಲೆಎ ಏನೋ ಸೇರ್ಕೊಂಡಿದ್ದಾಯ್ತು, ಸದ್ಯಕ್ಕೆ ಆತನ ಉನಿಫಾರ್ಮ್ ಹೊಲಿಸ್ಕೊಂಡು ಕೋಲೆ ಬಸವನ ಥರ ಶಾಲೆಗೆ ಹೊಗ್ಬರ್ತಿದ್ದ.. ಹೋದ ಪುಟ್ಟ ಬಂದ ಪುಟ್ಟ ಎಂಬ ಗಾದೆಯ ಥರಹ ಶಾಲೆಗೆ ಹೋಗೊದು ಟೀಚರ್ ಹೇಳೋ ಪಾಠ ಕೇಳೋದು ವಾಪಾಸ್ ಮನೆಗೆ ಬರೋದು ಅಷ್ಟೇ ಅವನ ದಿನಚರಿ, ಹೀಗೆ ದಿನ ಸಾಗಿರಲು ಒಂದು ದಿನ ಅವನ ಸ್ಕೂಲ್ನಲ್ಲಿ ಮೊದಲ ಫಂಕ್ಷನ್ ಹೆಡ್ಮಿಸ್ಟ್ರೆಸ್ಸು ಬಂದು ನಾಳೆ ಎಲ್ರೂ ಕಲರ್ ಡ್ರೆಸ್ ಹಾಕೊಂಡು ಬರ್ಬೋದು ಅಂತ ಅನೌಂನ್ಸ್ ಮಾಡೇ ಬಿಟ್ರು.. ಅಯ್ಯಾ ನಮ್ ಹೀರೋಗೂ ಅಷ್ಟೇ ಬೇಕಿತ್ತೇನೋ, ಪುಣ್ಯಾತ್ಮ  ತನ್ನ ಫ್ರೆಂಡ್ಸ್ ಹತ್ರ ಬಡಾಯ ಕೊಚ್ಚಕೊಳೋಕೆ ಶುರು ಮಾಡ್ಕೊಂಡು ಬಿಟ್ಟಿದ್ದ, ನಾಳೆ ನಾನು ಸ್ಟೈಲ್ ಜೀನ್ಸ್ ಪ್ಯಾಂಟ್ ಹಾಕೋಂಡು ಬರ್ತೀನಿ ನೋಡ್ತಿರಿ ಅಂತ… ಅಯ್ಯೋ ದೇವಾ ಈ ಮಾತು ಹೇಳೋಕು ಮೊದ್ಲು ಅವನಿಗೆ ಜೀನ್ಸ್ ಪ್ಯಾಂಟ್ ಎಲ್ಲಿ ಸಿಕ್ತು ಅಂತ ಹೇಳೇ ಇಲ್ವಲ್ಲ..  ವಿಷ್ಯ ಇಷ್ಟೇ ಕಣ್ರೀ ಅವನ ಅಣ್ಣ  ಇದ್ದ ಅಂದಿದ್ನಲ್ಲ ಅದೇ ಆ ಹಳೇ ರಾಕ್ಷನ ಅವನ ಸೊಂಟಕ್ಕೆ ಚಿಕ್ಕದಾಗುವ ಪ್ಯಾಂಟೊಂದನ್ನು ಇವನಿಗೆ ಹಾಕೋಳೋಕೆ ಕೊಟ್ಟಿದ್ರು, ಆದ್ರೆ ಆ ಪ್ಯಾಂಟಿನ ಝಿಪ್ ಮಾತ್ರ ಹಾಳಾಗ್ ಹೋಗಿತ್ತು.  ಅದೇ ಪ್ಯಾಂಟ್ನ ಧೈರ್ಯದಲ್ಲಿ ಇವನು ಫ್ರೆಂಡ್ಸ್ ಮುಂದೆ ಬಡಾಯಿ ಕೊಚ್ಚಿಕೊಂಡು ಬಿಟ್ಟಿದ್ದ ಅಷ್ಟೇ.. ಆಲ್ ರೈಟ್ ಈಗ ಮುಂದಕ್ ಹೋಗಣ…
 ಅಂತೂ ಇಂತೂ ಫಂಕ್ಷನ್ ದಿನ ಬಂದೇ ಬಿಡ್ತು, ಇವನೂ ಕೂಡಾ ಅದೇ ಝಿಪ್ ಇಲ್ದಿರೋ ಪ್ಯಾಂಟ್ ಹಾಕೊಂಡು ಶಾಲೆಗೆ ನಾನೇ ಹೀರೋ ಅನ್ನೋ ರೇಂಜಿಗೆ ಎಂಟ್ರಿ ಕೊಟ್ಟಿದ್ದ, ಅಯ್ಯೋ ಶಿವನೇ ಈ ಹುಡುಗನ ಗ್ರಹಚಾರ ಕೆಟ್ಟೋಗಿತ್ತೋ ಏನೋ.. ಅವನ ಫ್ರೆಂಡ್ಸ್ ಬಂದು ಅವನ ಪ್ಯಾಂಟ್ ಝಿಪ್ ನೋಡಿ ಘೋಳ್ಳಂತ ನಕ್ಕು ಬಿಡೋದಾ???? ಛೇಛೇಛೇ … ಅಲ್ಲ ಮಾರಾಯಾ ಈ ಹರ್ದೋಗಿರೋ ಝಿಪ್ ಇಲ್ದೇ ಇರೋ ಜೀನ್ಸ್ ಪ್ಯಾಂಟ್ ನಂಬಿ ನೀನು ನಮ್ಮ ಮುಂದೆ ಬಿಲ್ಡಪ್ ಕೊಟ್ಯಾ ಅಂತ ಕೇಳಿದ್ದ.. ಅಷ್ಟೇ ಅಲ್ಲ ಅಕ್ಕ ಪಕ್ಕದಲ್ಲಿರೋ ಹುಡ್ಗೀರಿಗೂ ಅವನ ಈ ಜೀನ್ಸ್ ಪುರಾಣವನ್ನು ಬಿಚ್ಚಿಟ್ಟಿದ್ದ. ಶಿವನೇ ಶಂಭುಲಿಂಗ ಎಂದು ಪಾಪ ಆ ಹುಡುಗ ಇಡೀ ದಿನ ಮನಸಾರೆ ಅತ್ತು ಬಿಟ್ಟಿದ್ದ, ಇನ್ನು ಮುಂದೆ ಪ್ಯಾಂಟ್ ಹಾಕಿಲ್ಲ ಅಂದ್ರೂ ಪರ್ವಾಗಿಲ್ಲ, ಬಟ್ ಝಿಪ್ ಇಲ್ದೇ ಇರೋ ಪ್ಯಾಂಟ್ ಅಂತೂ ಹಾಕಲ್ಲ ಅಂತ ಪ್ರಮಾಣ ಮಾಡ್ಕೊಂಡ್ ಬಿಟ್ಟ ಪಾಪ,,,

ಹಾಸ್ಯ ಏನೇ ಇರ್ಲಿ ರೀ. ಆದ್ರೆ ಈ ಕಥೆಯ ಹಿಂದೆ ಎರಡು ನೀತಿ ಅಡಗಿದೆ ಕಣ್ರೀ..
ಒಂದು : ವಿಷಯದ ಬಗ್ಗೆ ಅರಿವಿಲ್ಲದೇ ನಾವು ಯಾವತ್ತೂ ಬಡೆಆಯಿ ಕೊಚ್ಕೋಬಾರ್ದು
ಎರಡು : ಏನೇ ಇರ್ಲಿ ಬಡಪಾಯಿ ಜೀವಿಗಳ ಬಗ್ಗೆ ನಾವು ಯಾವತ್ತೂ ಹಾಸ್ಯ ಮಾಡ್ಬಾರ್ದು…

ಅಂದ ಹಾಗೆ ಈ ಕಥೆ ಯ ಕಥಾನಾಯಕ ಯಾರು ಅಂತೀರಾ????????
ಹಿ ಇಸ್ ನನ್ ಅಥರ್ ಥೆನ್ …. ಅಕ್ಷಯ್ ಹೂ ಇಸ್ ಎ ಜರ್ನಲಿಸ್ಟ್ ನೌ

Thursday 27 June 2019

ಭಜನಾಮೃತ

ಹಿಂದೊಂದು ಕಾಲವಿತ್ತು , ಅದು ಹೇಗೆ ಗೊತ್ತೆ , ಪ್ರಾತಃಕಾಲದಲ್ಲಿ ಸೂರ್ಯ ಉದಯಿಸುವುದಕ್ಕೂ ಮುನ್ನ ಎದ್ದ ಮನೆಯ ಹೆಂಗಳೆಯರೆಲ್ಲಾ ಸ್ನಾನಾದಿ ಕಾರ್ಯಗಳನ್ನೆಲ್ಲಾ ಮುಗಿಸಿ , ಮುಂಬಾಗಿಲ ನೆಲವನ್ನು ಸ್ವಾಸ್ಥ್ಯಗೊಳಿಸಿ, ರಂಗೋಲಿ ಹಾಕಿ ದೇವಗೃಹದಲ್ಲಿ ದೇವರ ಸೇವೆಗೈದು ಪ್ರತಿದಿನ ಪ್ರಾರಂಭಿಸುತ್ತಿದ್ದರು ಮನೆಯ ಪುರುಷರೆಲ್ಲಾ ಎದ್ದು ಪ್ರತಿದಿನ ಮನೆಯ ಕಾರ್ಯಗಳನ್ನೆಲ್ಲಾ ತಕ್ಕ ಮಟ್ಟಿಗೆ ಮುಗಿಸಿ, ಸ್ನಾನಾದಿಗಳನ್ನು ಮುಗಿಸಿ ದೇವತಾ ಕಾರ್ಯಕ್ಕೆ ಅಣಿಯಾಗುತ್ತಿದ್ದರು ಆಗ ಇಂದಿನಂತೆ ಮೊಬೈಲುಗಳೇನು ಇರುತ್ತಿರಲಿಲ್ಲ ಬೆಳಗ್ಗೆ ದೇವರನ್ನು ನೆನೆದ ಬಳಿಕವಷ್ಟೇ ದೈನಂದಿನ ಕಾರ್ಯಗಳು ಪ್ರಾರಂಭವಾಗುತ್ತಿದ್ದವು, ಕೂಡುಕುಟುಂಬಗಳಲ್ಲಿ ಇದ್ದಂತಹಾ ಹಿರಿಯ ಜೀವಗಳು ತನ್ನ ಮಕ್ಕಳಿಗೆ ತಿಳಿಸಿ ಕೊಟ್ಟಂತಹಾ ಸತ್ಕಾರ್ಯಗಳನ್ನು ತನ್ನ ಮೊಮ್ಮಕ್ಕಳಿಗೂ ತಿಳಿಸಿಕೊಡುತ್ತಿದ್ದರು , ಬೆಳಗ್ಗೆ ಎದ್ದ ಹಿರಿಯ ಜೀವಗಳು ಮನೆಯ ಮಕ್ಕಳೆಲ್ಲರಿಗೂ ಉತ್ತಮ ರೀತಿಯಲ್ಲಿ ಸತ್ಕಾರ್ಯಗಳನ್ನು ತಿಳಿಸುತ್ತಿದ್ದರು. ವಿಷ್ಣು ಸಹಸ್ರನಾಮ , ಲಲಿತಾ ಸಹಸ್ರನಾಮಗಳಂತಹಾ ದೇವತಾ ಸಹಸ್ರನಾಮಗಳು ಬಾಯಿಪಾಠವಾಗಿ ಬಿಟ್ಟಿರುತ್ತಿತ್ತು.

ಕಾಲ ಕಳೆಯಿತು ಕೂಡು ಕುಟುಂಬಗಳು ಒಡೆದ ಕುಟುಂಬಗಳಾದವು, ನಾವೆಲ್ಲರೂ ಸೂರ್ಯವಂಶಸ್ತರಾಗಿಬಿಟ್ಟೆವು ಅರ್ಥಾತ್ ಸೂರ್ಯ ಉದಯದ ಬಳಿಕ ನಮ್ಮ ದಿನ ಪ್ರಾರಂಭವಾಗತೊಡಗಿತು, ಮನೆಯಲ್ಲಿ ಗಂಟೆಯ ಸದ್ದಿಲ್ಲ ಏನೂ ಇಲ್ಲ.. ಹಿರಿಯ ಜೀವಗಳಿಗೆ ಬೆಲೆಯೂ ಇಲ್ಲದಂತಾಯಿತು.  ದಿನನಿತ್ಯ ಮನೆಮಂದಿಯೆಲ್ಲಾ ಕೂಡಿ ಮಾಡುತ್ತಿದ್ದ ಭಜನೆಗಳು ಶುಕ್ರವಾರಕ್ಕೆ ಸೀಮಿತವಾಯಿತು. ಆದರೆ ಒಂದತೂ ಸತ್ಯ ಈಗ ಕೆಲ ಬುದ್ಧಿಜೀವಿಗಳಿದ್ದಾರೆ ಕೇಳುತ್ತಾರೆ, ನಾವ್ಯಾಕೆ ಭಜನೆ ಮಾಡಬೇಕು?? ಭಜನೆ ಮಾಡುವುದರಿಂದ ಏನು ಪ್ರಯೋಜನ ಎಂದು ಆದರೆ ಪ್ರಯೋಜನ ಖಂಡಿತಾ ಇದೆ, ವೈಜ್ಞಾನಿಕವಾಗಿ ಭಜನೆಯ ಮಹತ್ವವನ್ನು ಉಲ್ಲೇಖಿಸಹೊರಟರೆ ಅದಕ್ಕೆ ಒಂದು ನೂರು ಪುಟಗಳು ಸಾಲಬಹುದೇನೋ...
ಭಜನೆಯ ಸಂದರ್ಭದಲ್ಲಿ ಮನೆಮಂದಿಯೆಲ್ಲಾ ಒಟ್ಟಾಗುವುದರಿಂದ ನಾವೆಲ್ಲಾ ಒಂದೇ ಎಂಬ ಭಾವನೆ ಬಂದು ನಾವೆಲ್ಲಾ ಒಗ್ಗೂಡಿ ಇರುತ್ತೇವೆ ಆದ್ದರಿಂದ ಸಮಾಜದಲ್ಲಿ ಒಡಕಿಗೆ ಆಸ್ಪದವಿರುವುದಿಲ್ಲ
ಭಜನೆಯಿಂದ ನಮ್ಮ ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತದೆ,
¨ಪ್ರತಿದಿನ ಭಜನೆ ಮಾಡುವುದರಿಂದ ದೇವರ ನಾಮಜಪದೊಂದಿಗೆ ನಾವು ನಮ್ಮತನವನಗ್ನು ಉಳಿಸುವುದರೊಂದಿಗೆ , ಹೆಣ್ಣನ್ನು ಗೌರವವಾಗಿ ಕಾಣುತ್ತೇವೆ
ಆರೋಗ್ಯದ ಮೇಲೂ ಭಜನೆ ಉತ್ತಮ ವಾತಾವರಣ ಕಲ್ಪಿಸುತ್ತದೆ.
ಆದ್ದರಿಂದ ನಮ್ಮ ಸ್ವಾಸ್ಥ್ಯಕ್ಕಾಗಿ ನಮದಮ ಬದುಕಿಗಾಗಿ ನಾವು ಭಜಿಸೋಣ
ಸಮಾಜದ ಉನ್ನತಿಗೆ ಶ್ರಮಿಸೋಣ
ಜೈ ಹಿಂದ್
ಶ್ರೀ ರಾಮಕೃಷ್ಣಾರ್ಪಣಮಸ್ತು

ಇಂತಿ
ಅಕ್ಷಯ್

Tuesday 25 June 2019

ಓಂ ನಮೋ ಮಾತಾ

ದೇವರು ಬರೆದ ಕಥೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ... ಹೌದು ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಖಂಡಿತವಾಗಿಯೂ ಸಾಧ್ಯವಿಲ್ಲ.. ತಾಯಿ ಎನ್ನುವುದು ಕೇವಲ ಒಂದು ಪದವಲ್ಲ ಅದೊಂದು ಉಸಿರು.. ಒಬ್ಬ ಮಗುವನ್ನು ತಾಯಿಗಿಂತ ಹೆಚ್ಚಾಗಿ ಯಾರೂ ಪ್ರೀತಿಸಲಾರರು.. ಮಾತೃ ಎಂಬ ಪದಕ್ಕೆ ಇರುವಂತಹಾ ಮಹತ್ವ ವರ್ಣಿಸಲಸಾಧ್ಯ.. ಭಾರತೀಯ ಪರಂಪರೆಯಲ್ಲಿ ತಾಯಿಗೆ ಮಹತ್ತರ ಸ್ಥಾನವಿದೆ.. ನಮ್ಮನ್ನು ಎಲ್ಲಾ ಹೊತ್ತಿರುವ ಭೂಮಿಯನ್ನು ತಾಯಿ ಎಂದು ಸಂಭೋದಿಸುತ್ತೇವೆ.. ವಿಧ್ಯೆಗೆ ಅಧಿಪತಿಯಾಗಿರುವ ಶಾರದೆ ಆಕೆಯನ್ನು ತಾಯಿ ಎಂದೇ ಸಂಭೋಧಿಸುತ್ತೇವೆ.. ತಾಯಿಯ ಎದೆಹಾಲು ಸೇವಿಸಿ ಬೆಳೆದ ನಾವುಗಳು ಬಳಿಕ ಸೇವಿಸುವುದೇ ಕಾಮಧೇನುವಿನ ಹಾಲನ್ನು ಅದಕ್ಕಾಗಿಯೇ ಆಕೆಗೂ ಗೋಮಾತೆ ಎಂಬ ಸ್ಥಾನವಿದೆ ನಾವೆಷ್ಟೇ ತಪ್ಪು ಮಾಡಿದರೂ ಎಷ್ಟೇ ನೋವು ನೀಡಿದರೂ ಅದನ್ನೆಲ್ಲಾ ಸಹಿಸಿಕೊಳ್ಳುವಳು ತಾಯಿ ಅದಕ್ಕಾಗಿಯೇ ಆಕೆಗೆ ಮಹತ್ತರ ಸ್ಥಾನ…

ತಾಯಿ ತಾನೇ ಮೊದಲ ಗುರು
ಪ್ರೀತಿ ಪಾಠ ಆಕೆಯಿಂದ ಶುರು
ಅಮ್ಮನ ಹೃದಯದಿ ನನ್ನ ವಿಹಾರ
ಅಮ್ಮನ ನೆನೆದರೆ ಕಷ್ಟಗಳೇ ಪರಿಹಾರ
ಈ ಮಾತು ಎಷ್ಟು ಸತ್ಯ .. ಒಂದು ಮಗು ತೊದಲುತ್ತಾ ಮದಲು ನುಡಿಯುವ ಮಾತೇ ಅಮ್ಮಾ.. ನೋವಿರಲು ಸಂತಸವಿರಲಿ ಮಗುವಿಗೆ ತಿಳಿದಿರುವ ಒಂದೇ ಮಾತು.. ಅಮ್ಮಾ.. ಅಂತೆಯೇ ಬಾಲ್ಯದಲ್ಲಿಯೇ ಮಗುವಿಗೆ ಉತ್ತಮ ಸಂಸ್ಕಾರವನ್ನು ಕಲಿಸುವಲ್ಲಿ ತಾಯಿ ಮಹತ್ತರ ಪಾತ್ರ ವಹಿಸುತ್ತಾಳೆ , ಮಗುವಿನ ಅಕ್ಷರಾಭ್ಯಾಸದಿಂದ ಹಿಡಿದು ಮಗುವಿನ ಸರ್ವತೋಮುಖ ಏಳಿಗೆಯ ವರೆಗೂ ತಾಯಿ ಶಮ ವಹಿಸುತ್ತಾಳೆ ಎಂದರೆ ತಪ್ಪಾಗಲಾರದು.
ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲು ಖಂಡಿತವಾಗಿಯೂ ಸಾಧ್ಯವಿಲ್ಲ.. ಒಂಬತ್ತು ತಿಂಗಳು ಗರ್ಭದಲ್ಲಿ ತನ್ನ ಮಗುವನ್ನು ಹೊತ್ತು ತಿರುಗುವ ಮಾತೆ ಎಂದಿಗೂ ತನ್ನ ನೋವಿಗೆ ಬೇಸರಿಸುವವಳಲ್ಲ.. ಇನ್ನು ಮಗುವಿಗೆ ಜನ್ಮ ನೀಡುವಂತಹಾ ಸಂದರ್ಭದಲ್ಲಿ ದೇಹದಲ್ಲಿ ಇರುವ ಎಲ್ಲಾ ಮೂಳೆಗಳು ಮುರಿದು ಹೋಗುವಂತೆ ನೋವಾದರೂ ತಾಯಿ ಮಗುವಿನ ನಗುವಲ್ಲಿ ತನ್ನ ನೋವನ್ನೇಲ್ಲಾ ಮರೆಯುತ್ತಾಳೆ.. ಮಗುವಿನ ನಗುವಲ್ಲಿ ತನ್ನ ಸಂತಸವನ್ನು ಕಾಣುವವಳೇ ತಾಯಿ... ತನಗೆ ಎಷ್ಟೇ ನೋವಾದರೂ ತನಗೆ ಎಷ್ಟೇ ಬೇಸರವಾದರೂ ತನ್ನ ಕಂದಮ್ಮನಿಗೆ ಏನೂ ಆಗಬಾರದೆಂಬಂತೆ ತನ್ನ ಎದೆಯ ಗೂಡಿನಲ್ಲಿ ಬಚ್ಚಿಟ್ಟುಕೊಂಡು ತನ್ನ ಕಂದಮ್ಮನ್ನನ್ನು ಕಾಪಾಡುವವರು ತಾಯಿ ಮಾತ್ರ... ತನ್ನೆಲ್ಲಾ ನೋವನ್ನು ಬದಿಗೊತ್ತಿ ಮಗುವಿನ ಸಾರ್ಥಕ್ಯಕ್ಕಾಗಿ ಜೀವ ಸವೆಸುತ್ತಾಳಲ್ಲಾ ಆ ತಾಯಿ ನಿಜವಾಗಿಯೂ ಪ್ರಶಂಸನಾರ್ಹಳೇ ಸರಿ..
ಅಮ್ಮ ನೀಡುವ ಕೈತುತ್ತು ಅಮೃತವಿದ್ದಂತೆ ಎಂಬ ಮಾತಿದೆ... ಅಮ್ಮನ ಅಡುಗೆ ರುಚಿಯನ್ನು ಯಾವುದೇ 5 ಸ್ಟಾರ್ ಹೋಟೆಲ್ ನೀಡಲಾರದು... ಪ್ರೀತಿಯಿಂದ ತಾಯಿ ನೀಡುವ ಒಂದು ತುತ್ತು ನಮಗೆ ಸ್ವರ್ಗ ಸಮಾನ, ತಾನು ಉಪವಾಸವಿದ್ದರೂ ಪರವಾಗಿಲ್ಲ ತನ್ನ ಮಕ್ಕಳ ಹೊಟ್ಟೆ ತಣ್ಣಗಿರಲಿ ಎಂದು ಭಾವಿಸಲು ತಾಯಿಗೆ ಮಾತ್ರ ಸಾಧ್ಯ.
ಆದರೆ ಇಂದು ಪಾಶ್ಚಿಮಾತ್ಯರ ಅನುಕರಣೆಯಿಂದ ನಾವು ತಾಯಿಯ ಮಹತ್ವವನ್ನೇ ಮರೆತಿದ್ದೇವೆ.. ತನಗೊಂದು ಮಾತು ಬೈದಳೆಂದು ತಾಯಿಯ ಬಳಿ ಮಾತು ಬಿಟ್ಟಂತವರು ನಮ್ಮ ನಡುವೆ ಎಷ್ಟೋ ಜನಗಳಿರಬಹುದು, ತಾನು ಕೇಳಿದ್ದನ್ನು ತಾಯಿ ತೆಗೆದುಕೊಡಲಿಲ್ಲ ಎಂದು ಅತ್ತೂ ಕರೆದು ತಾಯಿಯ ಮೇಲೆ ಕೋಪಿಸಿಕೊಂಡವರೂ ನಮ್ಮ ನಡುವೆ ಇರಬಹುದು. ತಾಯಿ ತನ್ನ ಮಾತನ್ನು ವಿರೋಧಿಸಿದಳೆಂದು ಆಕೆಯ ಮೇಲೆ ಕೈ ಮಾಡಿದ ಎಷ್ಟೋ ಮಂದಿ ನಮ್ಮ ನಡುವಿರಬಹುದು, ಆದರೆ ಇಂತಹಾ ಕೃತ್ಯಗಳನ್ನು ಮಾಡುವ ಮುಂಚೆ ಯೋಚಿಸಿ, ತಾಯಿ ನಿಮ್ಮನ್ನು ಬೆಳೆಸಲು ಪಟ್ಟ ಶ್ರಮವನ್ನು ಒಮ್ಮೆ ನೆನಪಿಸಿ, ನಿಮ್ಮನ್ನು ಸಾಕಿ ಸಲಹುವಲ್ಲಿ ಆಕೆ ಪಟ್ಟ ಶ್ರಮವನ್ನೊಮ್ಮೆ ನೆನಪಿಸಿ.. ಬಾಲ್ಯದಲ್ಲಿ ನೀವು ಎಲ್ಲೆಂದರಲ್ಲಿ ಅಲೆದಾಡುವಾಗ ತನ್ನ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ಸಾಕಿದ್ದನ್ನೊಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಜನ್ಮದ ಸಂದರ್ಭದಲ್ಲಿ ತಾಯಿ ಪಟ್ಟ ನೋವನ್ನೊಮ್ಮೆ ನೆನಪಿಸಿಕೊಳ್ಳಿ.. ಇಂತಹಾ ಪ್ರೀತಿಯನ್ನು ನೀಡಿದ ತಾಯಿಯನ್ನು ನೀವು ದೂಷಿಸುವುದಾದರೆ ದೂಷಿಸಿ.. ಹೇಳುವ ಮಾತು ಹೇಳಿಯಾಯಿತು ಇನ್ನು ತರ್ಕ ನಿಮಗೆ ಬಿಟ್ಟದ್ದು..
ಜೈ ಮಾತಾ..
ಕೊನೆಯದಾಗಿ ಮಾತಾ ಶ್ರೀ ಶಾರದಾದೇವಿ ಹಾಗೂ ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನೆಯುತ್ತಾ ಮಾತಿಗೆ ವಿರಾಮ ಇಡಲಿಚ್ಛಿಸುತ್ತೇನೆ
ಮಾತಾ ಮೇ ಶಾರಾದಾದೇವಿ ರಾಮಕೃಷ್ಣಪ್ರಭುಃ ಪಿತಾ
ಬಾಂಧವಾಃ ಸಕಲಾ ಭಕ್ತಾಃ ಸ್ವದೇಶೋ ಭುವನತ್ರಯಂ
ಜಗತ್ತಿಗೆ ಮಾತೆ ಶ್ರೀ ಶಾರದಾದೇವಿಯೆನಿಸಿದ್ದರೆ , ಪಿತಾಸ್ವರೂಪಿ ಶ್ರೀ ರಾಮಕೃಷ್ಣರು, ಭಕ್ತಜನರೆಲ್ಲರೂ ಮಕ್ಕಳಂತೆಂದಾದಾಗ , ತ್ರಿಲೋಕವೂ ಸ್ವದೇಶವೇ ಆಗಿದೆ..
ಶ್ರೀ ಕೃಷ್ಣಾರ್ಪಣಮಸ್ತು..


Monday 17 June 2019

ಗಾಡಿನ ಎಲ್ಲೆಲ್ಲೋ ಬಿಡ್ಬೇಡ್ರೀ...



ಯಾರಿಗೊತ್ತು ಜೀವನ ಹೇಗಿರುತ್ತೆ ಅಂತ ಇವತ್ತು ನಮ್ದಾಗಿದ್ದು ನಾಳೆ ನಿಮ್ದಾಗ್ಬೋದು ಸ್ವಾಮಿ , ಸ್ವಲ್ಪ ಎಚ್ಚರ ಅಷ್ಟೇ. ಯಾಕೋ ಗೊತ್ತಿಲ್ಲ ಕಣ್ರಿ ಈ ಜೀವನ ಅನ್ನೋದು, ಪೆಟ್ರೋಲ್ ಕಾಲಿ ಆಗಿರೋ ಬೈಕ್ ತರ ಅನ್ಸೋಕೆ ಸ್ಟಾರ್ಟ್ ಆಗಿ ಬಿಟ್ಟಿದೆ, ಕಿಕ್ ಮೇಲೆ ಕಿಕ್ ಹೊಡುದ್ರೂ ಸ್ಟಾರ್ಟ್ ಅಂತೂ ಖಂಡಿತಾ ಆಗಲ್ಲ.. ಆದ್ರೂ ಈ ಬೈಕ್ ನ ಅಲ್ಲೇ ಬಿಡೋಕೂ ಆಗ್ದೇ, ಅತ್ಲಾಗೆ ತಳ್ಳೋಕೂ ಆಗ್ದೆ, ಬಿಡೋದಾ ತಳ್ಳೋದಾ ಅನ್ನೋ ಯೋಚ್ನೆ ಮಾಡಿ ಮುಗ್ಸೋದ್ರೊಳಗೆ, ಇರೋ ಚಾನ್ಸೂ ಮುಗ್ದು ಹೋಗಿರುತ್ತೆ ಅಷ್ಟೇ.. ಆದ್ರೂ ಸ್ವಾಮಿ ಬೈಕ್ ನ ಇರೋ ಕಡೆ ಪಾರ್ಕ್ ಮಾಡ್ಬೇಡಿ, ಸ್ವಲ್ಪ ದೂರ ತಳ್ಕೊಂಡು ಹೋಗಿ, ಯಾವ್ದಾದ್ರೂ ಪೆಟ್ರೋಲ್ ಬಂಕ್ ಸಿಕ್ರೂ ಸಿಗ್ಬೋದು.

        ನನ್ ಜೀವನ ಅನ್ನೋ ಗಾಡಿದೂ ಇದೇ ಅವಸ್ಥೆ, ಬೆಂಗಳೂರು ಅನ್ನೋ ಜಾಗಕ್ಕೆ ಬಂದು ನೆಟ್ಟಗೆ 2 ವರ್ಷ ಆಗ್ತಾ ಬಂತೂ, ಬಂದ ಒಂದೈದು ತಿಂಗಳು ನನ್ನ ಬೈಕ್ ಪೆಟ್ರೋಲು ಕಾಲಿ ಅಗ್ತಿರ್ಲಿಲ್ಲ, ಅತ್ತಾಗೆ ಮೈಲೇಜೂ ಚೆನ್ನಾಗಿತ್ತು.  ಯಾವಾಗ ಈ ಬರಹ ಅನ್ನೋ ಎಂಜಿನ್ ಆಯಿಲ್ ಸ್ವಲ್ಪ ಸ್ವಲ್ಪ ವೀಕಾಗೋಕೆ ಸ್ಟಾರ್ಟ್ ಆಯ್ತೋ ಅಷ್ಟೇ ನಮ್ ಕಥೆ, ನಮ್ ಗಾಡೀನೂ ಸ್ವಲ್ಪಾನೆ ಕೈ ಕೊಡೋಕೆ ಸ್ಟಾರ್ಟ್ ಆಯ್ತು, ಇತ್ತಾಗೆ ಹಂಗೋ ಹಿಂಗೋ ಏನೋ ಮಾಡಿ ಸ್ವಲ್ಪ ಸಮಯ ಗಾಡಿ ಓಡ್ಸಣ ಅಂತ ಅನ್ಕೋಡೆ ಯಾಕಂದ್ರೆ ವಿಧಿ ಇಲ್ಲ ನೋಡಿ, ಗಾಡಿ ಓಡಿದ್ರೇನೆ ಗಾಡಿಗೆ ಒಂದು ಗತ್ತಿರುತ್ತೆ, ನಿಂತಲ್ಲೇ ನಿಂತಿದ್ರೇ ಧೂಳು ಹಿಡಿಯುತ್ತೆ ಅಷ್ಟೇ.. ಈ ಸಂಬಂಧಿಕರು ಅನ್ನೋ ಧೂಳು ಗಾಡಿನ ಹಾಳು ಮಾಡೋಕು ಹೇಸಲ್ಲ ಕಣ್ರೀ… ಏನಾದ್ರೂ ನಮದು ಗಾಡಿನ ಒಂದು ತಿಂಗ್ಳು ನಿಲ್ಸಿದ್ವಾ ಮುಗೀತು ಕಥೆ, ಅವರ ಬಾಯಲ್ಲಿ ಮಾತು ಶುರು “ ಅಲ್ಲ ಅಕ್ಷಯ್ ಏನೋ ಕಿತ್ತು ಗುಡ್ಡೆ ಹಾಕ್ತೀನಿ ಅಂತ ಬೆಂಗ್ಳೂರಿಗೆ ಹೋದ್ನಂತೆ ಆದರೆ ಕೆಲ್ಸ ಬಿಟ್ನಂತೆ ಅಂತ” ಅಲ್ಲಿಗೆ ಕತೆ ಮುಗಿತು, ಒಬ್ಬನ ಕಡೆಯಿಂದ ಇನ್ನೊಬ್ಬನ ಕಡೆ ಹೋಗೋವಾಗ ಈ ವಾರ್ತೆಗೆ ಇನ್ನೊಂದು ವಾರ್ತೆ ಸೇರಿ ನಮ್ ಜೀವನ ಹಾಳ್ ಮಾಡೋ ಮಟ್ಟಕ್ಕೆ ಬಂದಿರುತ್ತೆ ಅಷ್ಟೇ.. ಈ ಒಂದೇ ಕಾರಣಕ್ಕೆ ಇಷ್ಟ ಇಲ್ಲ ಅಂದರೂ ನಮ್ ಗಾಡೀನ ಇನ್ನು ನಿಲ್ಲಿಸ್ದೆ ಮೈಲೇಜ್ ಕಡ್ಮೆ ಆದ್ರೂನೂ ಅದೇ ಗಾಡೀನ ಓಡಿಸ್ತಾ ಇದ್ದೀನಿ ಅಷ್ಟೇ.. ಆದ್ರೂ ಹಾಳಾಗಿರೋ ಗಾಡಿನಾ ಎಷ್ಟು ಅಂತ ಓಡುಸ್ತೀರಾ?? ಅದಿಕ್ಕೂ ಲಿಮಿಟ್ ಅಂತ ಇರುತ್ತಲ್ವ? ಹಾಗೆ ನನ್ ಗಾಡಿ ಲಿಮಿಟ್ ಮುಗಿತಾ ಬಂತೂ ಆಯುಷ್ಯವೆಂಬ ವಾಹಿನಿಯಲ್ಲಿ ನನ್ ಕಥೆ ಮುಗಿತಾ  ಬಂತು, ನನ್ ಪೆಟ್ರೋಲ್ ಮುಗ್ದು ಆಗ್ಲೆ ಒಂದೈದು ತಿಂಗಳಾಗ್ತಾ ಬಂತು ಆದ್ರೂ ಹಂಗೋ ಹಿಂಗೋ ಗಾಡಿ ತಳ್ಕೊಂಡು ಹೋಗ್ತಾ ಇದ್ದೆ ಅಂತ ಅನ್ನಿಸ್ತು, ಫೈನಲಿ ಮೊನ್ನೆ 6ನೇ ತಾರೀಖು ಅದೇನಾಯ್ತೋ ಗೊತ್ತಿಲ್ಲ, ಗಾಡಿ ಸರ್ರಕ್ ಅಂತ ಬಂದ್ ಬಿದ್ಬಿಡ್ತಪ್ಪಾ.. ಅಲ್ಲಿಗೆ ನಮ್ ಕಥೆ ಮುಗಿತು, ಗಾಡಿನ ಸ್ವಲ್ಪ ದಿನ ಅಂದ್ರೆ ಒಂದು ತಿಂಗ್ಳು ರಿಪೇರಿ ಕೊಡ್ಬೇಕು ಅಂತ ಅನ್ನುಸ್ತು ಹಂಗೆ ಒಂದು ಸೈಡಲ್ಲಿ ನಮ್ಮ ಆಫಿಸಿನ ಹೆಚ್. ಆರ್. ಅನ್ನೋ ಗ್ಯಾರೇಜ್ ಗೆ ರಾಜಿನಾಮೆ ಪತ್ರ ಕೊಟ್ಬಿಟ್ಟು ಬಂದ್ಬಿಟ್ಟೆ, ಈ ಗಾಡಿ ಯಾವಾಗ ರಿಪೇರಿಯಾಗುತ್ತೋ ಗೊತ್ತಿಲ್ಲ, ಅದರ ಬಗ್ಗೆ ಸ್ವಲ್ಪನೂ ಯೋಚ್ನೆ ಇಲ್ಲ, ನೋಡಣ ಏನಾಗುತ್ತೆ ಅಂತ... ಇನ್ನೊಂದು ಮಾತು ಈ ಗಾಡಿನ ನಾನಂತೂ ಬಿಡಲ್ಲ, ಇನ್ನೊಂದು ತಿಂಗಳು ಬಿಟ್ಟು ಗಾಡಿ ಹಾಳಾದ್ರೆ ತಳ್ಕೊಂಡು ಹೋಗ್ತೀನಿ, ರಿಪೇರಿ ಆದ್ರೆ ಪೆಟ್ರೋಲ್ ಹಾಕೊಂಡು ಓಡುಸ್ತೀನಿ ಅಷ್ಟೇ...

ಮತ್ತೆ ನೆನಪಾಗಬೇಕಿದೆ ರಾಣಿ ಚೆನ್ನಭೈರಾದೇವಿ...!!! ಇತಿಹಾಸವೂ ಮರೆತ ರಾಣಿಯ ಪೌರುಷದ ಕಥೆಯಿದು..!

  ಕೆಲವೊಮ್ಮೆ ಭಾರತದಲ್ಲಿ ಆಳ್ವಿಕೆ ನಡೆಸಿದ ಸರ್ಕಾರಗಳ ಮೇಲೆ ನಿಜವಾಗಿಯೂ ಜಿಗುಪ್ಸೆ ಬಂದು ಬಿಡುತ್ತದೆ. ವಿದೇಶಗಳಲ್ಲಿರುವಂತೆ ಭಾರತದಲ್ಲಿ ಇತಿಹಾಸವನ್ನು ಸಂರಕ್ಷಿಸಿ ಇಡುತ...